Nestle, PepsiCo, Coca-Cola ಕಂಪನಿಗಳ ವಿರುದ್ಧ ಆಕ್ಷನ್; FSSAI ನೋಟಿಸ್, ಉತ್ಪನ್ನಗಳ ಜಪ್ತಿ ಎಚ್ಚರಿಕೆ!
ತಪ್ಪುದಾರಿಗೆಳೆಯುವ ಜಾಹೀರಾತುಗಳು, ಸುಳ್ಳು ಕ್ಲೇಮ್‌ಗಳು ಹಾಗೂ ಆಹಾರ ಉತ್ಪನ್ನಗಳ ಲೇಬಲಿಂಗ್ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಮುಖ ಆಹಾರ ಮತ್ತು ಪಾನೀಯ ಕಂಪನಿಗಳ ವಿರುದ್ಧ FSSAI ಕಠಿಣ ಕ್ರಮ ಕೈಗೊಂಡಿದೆ.

ನವದೆಹಲಿ: ದೇಶಾದ್ಯಂತ ನಕಲಿ ಆಹಾರ ಉತ್ಪನ್ನಗಳ ವಿರುದ್ಧ ಕಾರ್ಯಾಚರಣೆ ಮುಂದುವರೆದಿರುವಂತೆಯೇ ಇತ್ತ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ದೇಶದ ದಿಗ್ಗಜ ಕಂಪನಿಗಳಿಗೇ ಶಾಕ್ ನೀಡಿದೆ.
ಹೌದು.. ತಪ್ಪುದಾರಿಗೆಳೆಯುವ ಜಾಹೀರಾತುಗಳು, ಸುಳ್ಳು ಕ್ಲೇಮ್‌ಗಳು ಹಾಗೂ ಆಹಾರ ಉತ್ಪನ್ನಗಳ ಲೇಬಲಿಂಗ್ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಮುಖ ಆಹಾರ ಮತ್ತು ಪಾನೀಯ ಕಂಪನಿಗಳ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಠಿಣ ಕ್ರಮ ಕೈಗೊಂಡಿದೆ.
ಕಳೆದ ಕೆಲವು ತಿಂಗಳಲ್ಲಿ 150ಕ್ಕೂ ಹೆಚ್ಚು ನೋಟಿಸ್‌ಗಳನ್ನು ಆಹಾರ ಕಂಪನಿಗಳಿಗೆ ನೀಡಲಾಗಿದೆ ಎಂದು FSSAI ಶನಿವಾರ ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ತನ್ನ ಇತ್ತೀಚಿನ ಜಾರಿ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡಿರುವ FSSAI, ತಪ್ಪುದಾರಿಗೆಳೆಯುವ ಜಾಹೀರಾತುಗಳು, ಸುಳ್ಳು ಹೇಳಿಕೆಗಳು ಹಾಗೂ ಲೇಬಲಿಂಗ್ ನಿಯಮಗಳ ಪಾಲನೆಯಲ್ಲಿನ ಲೋಪಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.
Nestle, PepsiCo, Coca-Cola ಸೇರಿ ಹಲವು ದಿಗ್ಗಜ ಸಂಸ್ಥೆಗಳಿಗೆ ನೋಟಿಸ್
FSSAI ಕ್ರಮ ಕೈಗೊಂಡಿರುವ ಪ್ರಮುಖ ಕಂಪನಿಗಳ ಪಟ್ಟಿಯಲ್ಲಿ Nestle India, PepsiCo, Abbott India, Red Bull India, Danone India, Monster Energy India, Hell Energy, Mondelez India, Coca-Cola India, Diageo, Pernod Ricard, Ferrero India ಮತ್ತು Kenvue Inc. ಸೇರಿವೆ.
ಎನರ್ಜಿ ಡ್ರಿಂಕ್ ಹಾಗೂ ಮದ್ಯಪಾನೀಯ ತಯಾರಿಕಾ ಕಂಪನಿಗಳ ಮೇಲೂ ನಿಯಂತ್ರಕ ಸಂಸ್ಥೆ ಕಠಿಣ ನಿಗಾ ವಹಿಸಿದೆ. ನಿಯಮ ಉಲ್ಲಂಘನೆ ಕಂಡುಬಂದಿರುವ ಹಲವು ಕಂಪನಿಗಳ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ ಎಂದು FSSAI ತಿಳಿಸಿದೆ.
Amazon, Flipkartಗೂ ನೋಟಿಸ್
ಆಹಾರ ಉತ್ಪನ್ನಗಳ ಆನ್‌ಲೈನ್ ಮಾರಾಟಕ್ಕೆ ಸಂಬಂಧಿಸಿದಂತೆ ಇ-ಕಾಮರ್ಸ್ ದಿಗ್ಗಜರಾದ Amazon ಮತ್ತು Flipkart ಗೆ 12 ನೋಟಿಸ್‌ಗಳನ್ನು ನೀಡಲಾಗಿದೆ. ಇದಲ್ಲದೆ, Amazonನ ಒಂದು ಗೋದಾಮಿನ ಲೈಸೆನ್ಸ್ ಕೂಡ ರದ್ದುಗೊಳಿಸಲಾಗಿದೆ ಎಂದು FSSAI ತಿಳಿಸಿದೆ.
KFC, McDonald’s, Domino’sಗೂ ನೋಟಿಸ್
ಆಹಾರ ಸೇವಾ ವಲಯದಲ್ಲೂ FSSAI ಕ್ರಮ ಮುಂದುವರಿಸಿದ್ದು, KFC, McDonald’s, Pizza Hut, Domino’s ಮತ್ತು Costa Coffee ಸೇರಿದಂತೆ ಆಹಾರ ಸೇವಾ ಸಂಸ್ಥೆಗಳಿಗೆ 30ಕ್ಕೂ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿದೆ. ಇದಲ್ಲದೆ, Domino’sನ ಐದು ಲೈಸೆನ್ಸ್‌ಗಳನ್ನು ಅಮಾನತುಗೊಳಿಸಲಾಗಿದೆ ಎಂದು FSSAI ಮಾಹಿತಿ ನೀಡಿದೆ.
ಐಷಾರಾಮಿ ಹೋಟೆಲ್‌ಗಳಿಗೂ ನೋಟಿಸ್
ಕಳೆದ ವರ್ಷವೂ ದೇಶದ ಹಲವು ಪಂಚತಾರಾ ಹೋಟೆಲ್‌ಗಳಿಗೆ FSSAI ನೋಟಿಸ್ ನೀಡಿತ್ತು. ಆಹಾರ ಸುರಕ್ಷತಾ ಕಾನೂನುಗಳು ಮತ್ತು ನಿಯಮಗಳ ಗಂಭೀರ ಉಲ್ಲಂಘನೆ ಕಂಡುಬಂದಲ್ಲಿ ಆಹಾರ ಉದ್ಯಮಗಳ ವಿರುದ್ಧ ನಿರಂತರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಿಯಂತ್ರಕ ಸಂಸ್ಥೆ ತಿಳಿಸಿದೆ.
ನೋಟಿಸ್ ಬಳಿಕ ಕಂಪನಿಗಳಿಂದ ತಿದ್ದುಪಡಿ ಕ್ರಮ
FSSAI ಕ್ರಮದ ಪರಿಣಾಮವಾಗಿ ಹಲವು ಕಂಪನಿಗಳು ಈಗಾಗಲೇ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿವೆ ಎಂದು ಸಂಸ್ಥೆ ತಿಳಿಸಿದೆ.
ಗ್ರಾಹಕರಿಗೆ ತಪ್ಪು ಮಾಹಿತಿ ನೀಡುವ ಜಾಹೀರಾತುಗಳು, ಸುಳ್ಳು ಆರೋಗ್ಯ ಅಥವಾ ಉತ್ಪನ್ನದ ಕ್ಲೇಮ್‌ಗಳು ಹಾಗೂ ಲೇಬಲಿಂಗ್ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕಲು FSSAI ತನ್ನ ಜಾರಿ ಕ್ರಮವನ್ನು ಮತ್ತಷ್ಟು ಬಿಗಿಗೊಳಿಸಿರುವುದು ಈ ಬೆಳವಣಿಗೆಯಿಂದ ಸ್ಪಷ್ಟವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




