BJP ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಶೆಹಜಾದ್ ಪೂನಾವಾಲಾ ಮತ್ತೊಮ್ಮೆ ರಾಜೀನಾಮೆ; 'ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ' ಎಂದ ಫೈರ್‌ಬ್ರಾಂಡ್..!
ಜುಲೈ 30ರಂದು ಕೂಡ ಪೂನಾವಾಲಾ ಅವರು ಪಕ್ಷದ ಎಲ್ಲ ಹುದ್ದೆಗಳು ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಪಕ್ಷದ ನಾಯಕತ್ವ ಅವರ ರಾಜೀನಾಮೆಯನ್ನು ತಿರಸ್ಕರಿಸಿತ್ತು.

ನವದೆಹಲಿ: ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಸೋಮವಾರ ಮತ್ತೊಮ್ಮೆ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಎಲ್ಲಾ ಸಂಘಟನಾ ಜವಾಬ್ದಾರಿಗಳಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
ವೈಯಕ್ತಿಕ ಪರಿಸ್ಥಿತಿಗಳು ಹಾಗೂ ಸಂಘಟನೆಯೊಳಗಿನ ಕೆಲ ವ್ಯಕ್ತಿಗಳೊಂದಿಗಿನ ಭಿನ್ನಾಭಿಪ್ರಾಯಗಳನ್ನು ಅವರು ರಾಜೀನಾಮೆಗೆ ಕಾರಣವೆಂದು ಉಲ್ಲೇಖಿಸಿದ್ದಾರೆ. ಬಿಜೆಪಿ ಸಂಘಟನಾ ಪುನರ್‌ರಚನೆ ನಿರೀಕ್ಷೆಯಲ್ಲಿರುವ ಸಂದರ್ಭದಲ್ಲೇ ಪೂನಾವಾಲಾ ಅವರ ರಾಜೀನಾಮೆ ಪಕ್ಷಕ್ಕೆ ಶಾಕ್ ನೀಡಿದೆ.
ಜುಲೈ 30ರಂದು ಕೂಡ ಪೂನಾವಾಲಾ ಅವರು ಪಕ್ಷದ ಎಲ್ಲ ಹುದ್ದೆಗಳು ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಪಕ್ಷದ ನಾಯಕತ್ವ ಅವರ ರಾಜೀನಾಮೆಯನ್ನು ತಿರಸ್ಕರಿಸಿತ್ತು.
ಸೋಮವಾರ ಹಂಚಿಕೊಂಡಿರುವ ರಾಜೀನಾಮೆ ಪತ್ರದಲ್ಲಿ ಪೂನಾವಾಲಾ, ತಮ್ಮ ರಾಜೀನಾಮೆಯನ್ನು ಪಕ್ಷ ತಕ್ಷಣವೇ ಅಂಗೀಕರಿಸದೆ, ಮರುಪರಿಶೀಲಿಸುವಂತೆ ಮನವಿ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
“ಪಕ್ಷವು ನನ್ನ ರಾಜೀನಾಮೆಯನ್ನು ತಕ್ಷಣ ಅಂಗೀಕರಿಸದೆ, ಮರುಪರಿಶೀಲಿಸುವಂತೆ ಮನವಿ ಮಾಡಿದ್ದು ನನ್ನನ್ನು ಭಾವುಕನನ್ನಾಗಿಸಿತು. ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ.
ಆದರೆ, ಆಳವಾಗಿ ಚಿಂತಿಸಿದ ಬಳಿಕ ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಸಕ್ರಿಯ ಪ್ರಾಥಮಿಕ ಸದಸ್ಯತ್ವದಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಅಂತಿಮ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಹಿರಿಯ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಬಿ.ಎಲ್. ಸಂತೋಷ್ ಅವರಿಗೆ ತಮ್ಮ ರಾಜೀನಾಮೆ ಪತ್ರದಲ್ಲಿ ಪೂನಾವಾಲಾ ಕೃತಜ್ಞತೆ, ಪ್ರೀತಿ, ಗೌರವ ವ್ಯಕ್ತಪಡಿಸಿದ್ದಾರೆ.
ಸಂಘಟನೆಯೊಳಗಿನ ಕೆಲವು ವ್ಯಕ್ತಿಗಳ ಕಾರಣದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ತಮ್ಮ ಆರ್ಥಿಕ ಪರಿಸ್ಥಿತಿ ಹಾಗೂ ವೈಯಕ್ತಿಕ ಕಾರಣಗಳನ್ನೂ ಉಲ್ಲೇಖಿಸಿರುವ ಅವರು, ಇನ್ನು ಮುಂದೆ ಖಾಸಗಿ ವಲಯಕ್ಕೆ ತೆರಳುವುದಾಗಿ ಹೇಳಿದ್ದಾರೆ.
ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಅಥವಾ ಅವರ ಮೇಲೆ ಆರೋಪ ಹೊರಿಸಲು ತಾವು ಪಕ್ಷ ತೊರೆಯುತ್ತಿಲ್ಲ. ಬದಲಾಗಿ ತಾವು ಒಂದು ‘ವ್ಯವಸ್ಥೆ’ಯಿಂದ ಹೊರಬರಲು ನಿರ್ಧರಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ವಕ್ತಾರರಾಗಿ ಪೂನಾವಾಲಾ ಅವರು ವಿವಿಧ ವೇದಿಕೆಗಳಲ್ಲಿ ಕೇಂದ್ರ ಸರ್ಕಾರವನ್ನು ಸಮರ್ಥಿಸುತ್ತಾ, ಪ್ರಧಾನಿ ಮೋದಿ ಅವರ ದೃಷ್ಟಿಕೋನವನ್ನು ಜನರ ಮುಂದಿಡುತ್ತಿದ್ದರು. ರಾಜಕೀಯ ಹಾಗೂ ರಾಷ್ಟ್ರೀಯ ವಿಚಾರಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನಿಲುವನ್ನು ಸಮರ್ಥಿಸುವಲ್ಲಿ ಅವರು ಸಕ್ರಿಯರಾಗಿದ್ದರು.
ಕೆಲವು ವಾರಗಳ ಹಿಂದೆ ಪೂನಾವಾಲಾ ಅವರು ತಮ್ಮ ಎಕ್ಸ್ ಖಾತೆಯಿಂದ ಪಕ್ಷಕ್ಕೆ ಸಂಬಂಧಿಸಿದ ಎಲ್ಲ ಉಲ್ಲೇಖಗಳನ್ನು ತೆಗೆದುಹಾಕಿದ್ದರು.
ಬಿಜೆಪಿಯಲ್ಲಿ ಸಂಘಟನಾ ಪುನರ್‌ರಚನೆ ನಡೆಯಲಿದೆ ಎಂಬ ನಿರೀಕ್ಷೆಯ ನಡುವೆಯೇ ಪೂನಾವಾಲಾ ಅವರ ರಾಜೀನಾಮೆ ಹೊರಬಂದಿರುವುದು ಪಕ್ಷದೊಳಗಿನ ಬದಲಾವಣೆಗಳ ಕುರಿತು ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



