ನಾಗಪುರ: ದೇವರಲ್ಲಿ ಕ್ಷಮೆಯಾಚಿಸಿ, ದೇವಸ್ಥಾನದ ಹುಂಡಿ ದೋಚಿದ ಕಳ್ಳರು! ಒಬ್ಬನಿಗೆ ಕಾಲು ಮುರಿತ, Video
ಅಂದಹಾಗೆ, ಜುಲೈ 28 ರಂದು ಇಬ್ಬರು ಕಳ್ಳರು ನಾಗಪುರದ ಮಾಲ್ಧಕ್ಕಾ ಪ್ರದೇಶದಲ್ಲಿರುವ ಶೀತಲಾ ಮಾತಾ ದೇವಸ್ಥಾನ ಮತ್ತು ಶಿವ ದೇವಸ್ಥಾನದ ಕಾಣಿಕೆ ಹುಂಡಿಗಳ ಬೀಗ ಮುರಿದು ಹಣವನ್ನು ಕದ್ದೊಯ್ದಿದ್ದರು.

ನಾಗಪುರ: ನಾಗಪುರದ ದೇವಸ್ಥಾನವೊಂದಕ್ಕೆ ನುಗ್ಗಿ ದೇವರ ಬಳಿ ಕ್ಷಮೆ ಯಾಚಿಸಿ, ಹುಂಡಿಯ ಬೀಗ ಮುರಿದು ಹಣ ದೋಚಿ ಪರಾರಿಯಾದ ಇಬ್ಬರು ಕಳ್ಳರ ಪೈಕಿ ಒಬ್ಬ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದರೆ, ಇನ್ನೊಬ್ಬನನ್ನು ಪೊಲೀಸರ 'ಸಿಂಬಾ' (SIMBA) ಎಂಬ ಎಐ (AI) ತಂತ್ರಜ್ಞಾನದ ಸಹಾಯದಿಂದ ಬಂಧಿಸಲಾಗಿದೆ.
ಅಂದಹಾಗೆ, ಜುಲೈ 28 ರಂದು ಇಬ್ಬರು ಕಳ್ಳರು ನಾಗಪುರದ ಮಾಲ್ಧಕ್ಕಾ ಪ್ರದೇಶದಲ್ಲಿರುವ ಶೀತಲಾ ಮಾತಾ ದೇವಸ್ಥಾನ ಮತ್ತು ಶಿವ ದೇವಸ್ಥಾನದ ಕಾಣಿಕೆ ಹುಂಡಿಗಳ ಬೀಗ ಮುರಿದು ಹಣವನ್ನು ಕದ್ದೊಯ್ದಿದ್ದರು. ಈ ಸಂಪೂರ್ಣ ಘಟನೆಯು ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಕಳ್ಳತನಕ್ಕೂ ಮುನ್ನ ಐನಾತಿ ಕಳ್ಳರು ದೇವತೆಯ ಮುಂದೆ ಕಿವಿ ಹಿಡಿದು ಕ್ಷಮೆ ಯಾಚಿಸುತ್ತಿರುವುದು ದೃಶ್ಯಾವಳಿಗಳಲ್ಲಿ ಕಂಡುಬಂದಿದೆ.
ದೇವಸ್ಥಾನದ ಆಡಳಿತ ಮಂಡಳಿಯವರು ಆಗಮಿಸಿ ಹುಂಡಿ ಬೀಗ ಮುರಿದಿರುವುದನ್ನು ಗಮನಿಸಿದಾಗ ಕಳ್ಳತನದ ವಿಷಯ ಬೆಳಕಿಗೆ ಬಂದಿತು. ನಂತರ ಪರಿಶೀಲಿಸಿದಾಗ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ದೇವಸ್ಥಾನದೊಳಗೆ ಇರುವುದು ಕಂಡುಬಂದಿದೆ.
ಘಟನೆಯ ನಂತರ, ಆರೋಪಿಗಳಲ್ಲಿ ಒಬ್ಬನಾದ ಜೈನೀತ್ ಚೌರೆ ಛತ್ತೀಸ್‌ಗಢದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಅಡಗಿಕೊಳ್ಳಲು ಹೊರಟಿದ್ದನು. ಆದರೆ ದಾರಿಯಲ್ಲಿ ರಸ್ತೆ ಅಪಘಾತಕ್ಕೀಡಾದನು. ಅಪಘಾತದಲ್ಲಿ ಅವನ ಕಾಲು ಮುರಿತವಾಗಿದ್ದು, ಆಸ್ಪತ್ರೆಗೆ ದಾಖಲಾಗಬೇಕಾಯಿತು.
ಎರಡನೇ ಆರೋಪಿಯಾದ ವಂಶ್ ಮೆಶ್ರಮ್‌ನನ್ನು ಜರಿಪಟ್ಕಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದಕ್ಕಾಗಿ ಅವರು 'ಸಿಂಬಾ' (SIMBA - System for Intelligent Monitoring, Behavioural Analysis) ಎಂಬ ಎಐ-ಚಾಲಿತ ತಂತ್ರಜ್ಞಾನದ ಸಾಧನವನ್ನು ಬಳಸಿದ್ದಾರೆ. 'ಸಿಂಬಾ' ಎಂಬುದು ಅಪರಾಧ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಾಮಾಜಿಕ ಮಾಧ್ಯಮಗಳಂತಹ ವಿವಿಧ ಮೂಲಗಳಿಂದ ಬೃಹತ್ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಲು ವಿನ್ಯಾಸಗೊಳಿಸಲಾದ ಒಂದು ಸಾಧನವಾಗಿದೆ.
ತನಿಖೆಯ ವೇಳೆ,ಇಬ್ಬರೂ ಆರೋಪಿಗಳು ಮದ್ಯಪಾನದ ಚಟಕ್ಕೆ ಬಿದ್ದಿರುವುದು ಮತ್ತು ಕುಡಿದು ಗಲಾಟೆ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ದಾಖಲೆಗಳನ್ನು ಹೊಂದಿರುವುದು ತಿಳಿದುಬಂದಿದೆ.
ಈ ದಾಖಲೆಗಳು ಮತ್ತು 'ಸಿಂಬಾ' ತಂತ್ರಜ್ಞಾನದ ಸಹಾಯದಿಂದ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಸದ್ಯಕ್ಕೆ ಮೆಶ್ರಮ್‌ನ ವಿಚಾರಣೆ ನಡೆಯುತ್ತಿದ್ದು, ಚೌರೆಯ ಬಂಧನಕ್ಕಾಗಿ ಪೊಲೀಸ್ ತಂಡವೊಂದು ಛತ್ತೀಸ್‌ಗಢಕ್ಕೆ ತೆರಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


