ರಾಜ್ಯ

ಗೃಹಜ್ಯೋತಿ ಫಲಾನುಭವಿಗಳ ಗಮನಕ್ಕೆ: ಮನೆ-ಮನೆ ಸಮೀಕ್ಷೆ ಗಡುವು ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ..!

2026ರ ಜುಲೈನಲ್ಲಿ ಆರಂಭವಾಗಿದ್ದ ಸಮೀಕ್ಷೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯ ಸರ್ಕಾರ ಗಡುವು ವಿಸ್ತರಿಸಿ ಆದೇಶ ಹೊರಡಿಸಿದೆ.

ಗೃಹಜ್ಯೋತಿ ಫಲಾನುಭವಿಗಳ ಗಮನಕ್ಕೆ: ಮನೆ-ಮನೆ ಸಮೀಕ್ಷೆ ಗಡುವು ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ..!
ಸಂಗ್ರಹ ಚಿತ್ರ
Published On :

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆಯ ಮನೆ-ಮನೆ ಸಮೀಕ್ಷೆಯ ಗಡುವನ್ನು ರಾಜ್ಯ ಸರ್ಕಾರ ಒಂದು ತಿಂಗಳು ವಿಸ್ತರಿಸಿದೆ.

ಈ ಹಿಂದೆ ಆಗಸ್ಟ್ 31ಕ್ಕೆ ಮುಕ್ತಾಯಗೊಳ್ಳಬೇಕಿದ್ದ ಸಮೀಕ್ಷೆಗೆ ಇದೀಗ ಸೆಪ್ಟೆಂಬರ್ 30ರವರೆಗೆ ಅವಕಾಶ ನೀಡಲಾಗಿದೆ.

2026ರ ಜುಲೈನಲ್ಲಿ ಆರಂಭವಾಗಿದ್ದ ಸಮೀಕ್ಷೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯ ಸರ್ಕಾರ ಗಡುವು ವಿಸ್ತರಿಸಿ ಆದೇಶ ಹೊರಡಿಸಿದೆ. ಇದುವರೆಗೆ ಶೇ.70ರಷ್ಟು ಫಲಾನುಭವಿಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

ವಿಶೇಷವಾಗಿ ಬೆಂಗಳೂರು ನಗರ ಪ್ರದೇಶದಲ್ಲಿ ಸಮೀಕ್ಷಾ ಸಿಬ್ಬಂದಿಗೆ ಹೆಚ್ಚಿನ ಸಮಸ್ಯೆ ಎದುರಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ಹಾಗೂ ಪ್ರತ್ಯೇಕ ಮನೆಗಳಲ್ಲಿರುವ ಕೆಲ ಗ್ರಾಹಕರು ತಮ್ಮ ಮಾಹಿತಿಯನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಕೆಲವು ಅಪಾರ್ಟ್‌ಮೆಂಟ್‌ಗಳು ಮತ್ತು ಗೇಟೆಡ್‌ ಸಮುದಾಯಗಳಿಗೆ ಸಮೀಕ್ಷಾ ಸಿಬ್ಬಂದಿಗೆ ಪ್ರವೇಶಕ್ಕೂ ಅವಕಾಶ ನೀಡುತ್ತಿಲ್ಲ. ಇನ್ನೂ ಹಲವು ಮನೆಗಳು ಬೀಗ ಹಾಕಿರುವುದು ಸಮೀಕ್ಷೆ ವಿಳಂಬಕ್ಕೆ ಕಾರಣವಾಗಿದೆ.

ಈ ಸಮಸ್ಯೆ ಪರಿಹರಿಸಲು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಸೋಮವಾರ ಬೀಗ ಹಾಕಿರುವ ಹಾಗೂ ಖಾಲಿ ಇರುವ ಮನೆಗಳ ಸಮೀಕ್ಷೆಗೆ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಬೀಗ ಹಾಕಿರುವ ಮನೆಗಳಿಗೆ ಮೀಟರ್‌ ರೀಡರ್‌ಗಳು ವಿವಿಧ ಸಮಯಗಳಲ್ಲಿ ಮೂರು ಬಾರಿ ಭೇಟಿ ನೀಡಬೇಕು. ಪ್ರತಿ ಭೇಟಿಯ ಸಂದರ್ಭದಲ್ಲೂ ಸ್ಥಳದ ಭೌಗೋಳಿಕ ನಿರ್ದೇಶಾಂಕಗಳನ್ನು ದಾಖಲಿಸಿ, ಮೊಬೈಲ್‌ ಆ್ಯಪ್‌ನಲ್ಲಿ ‘DL’ (Door Lock) ಎಂದು ನಮೂದಿಸಬೇಕು.

ಜತೆಗೆ, ಫಲಾನುಭವಿಯ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಮೂರು ಬಾರಿ ಸಂದೇಶ ಕಳುಹಿಸಿ, ಅಗತ್ಯ ವಿವರಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡಲಾಗುತ್ತದೆ. ಖಾಲಿ ಇರುವ ಮನೆಗಳಿಗೂ ಇದೇ ವಿಧಾನ ಅನುಸರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.