ಸಂಸತ್ ಬಜೆಟ್ ಅಧಿವೇಶನ ಮುಕ್ತಾಯ: ರಾಜ್ಯಸಭೆ-ಲೋಕಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಈ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು 79 ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದು, 2026–27ರ ಕೇಂದ್ರ ಬಜೆಟ್ ಕುರಿತು 97 ಸದಸ್ಯರು ಚರ್ಚೆ ನಡೆಸಿದ್ದಾರೆ.

ನವದೆಹಲಿ: ಸಂಸತ್ ಬಜೆಟ್ ಅಧಿವೇಶನ ಶನಿವಾರ ಮುಕ್ತಾಯಗೊಂಡಿದ್ದು, ರಾಜ್ಯಸಭೆ ಮತ್ತು ಲೋಕಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ರಾಜ್ಯಸಭೆ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಮಾಹಿತಿ ನೀಡಿ, ರಾಜ್ಯಸಭೆ ಒಟ್ಟು 157 ಗಂಟೆ 40 ನಿಮಿಷಗಳ ಕಾಲ ಕಾರ್ಯನಿರ್ವಹಿಸಿದ್ದು, ಶೇ.110ರಷ್ಟು ಫಲಪ್ರದವಾಗಿದೆ ಎಂದು ಹೇಳಿದ್ದಾರೆ.
ಏಪ್ರಿಲ್ 16ರಿಂದ 18ರವರೆಗೆ ನಡೆದ ಮೂರು ದಿನಗಳ ವಿಶೇಷ ಸಭೆಯಲ್ಲಿ ಹರಿವಂಶ್ ಅವರನ್ನು ಮೂರನೇ ಅವಧಿಗೆ ಉಪಸಭಾಪತಿಯಾಗಿ ಆಯ್ಕೆ ಮಾಡಲಾಗಿದೆ.
ಈ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು 79 ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದು, 2026–27ರ ಕೇಂದ್ರ ಬಜೆಟ್ ಕುರಿತು 97 ಸದಸ್ಯರು ಚರ್ಚೆ ನಡೆಸಿದ್ದಾರೆ.
ಇದೇ ವೇಳೆ ಪ್ರಮುಖ ಸಚಿವಾಲಯಗಳ ಕಾರ್ಯಚಟುವಟಿಕೆಗಳ ಕುರಿತು ಚರ್ಚೆ ನಡೆದಿದ್ದು, ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದ ಮತ್ತು ಮಧ್ಯಪ್ರಾಚ್ಯ ಪರಿಸ್ಥಿತಿ ಕುರಿತಂತೆ ಸ್ವಯಂಪ್ರೇರಿತ ಹೇಳಿಕೆಗಳ ಜೊತೆಗೆ ಪ್ರಮುಖ ಸಚಿವಾಲಯಗಳ ಕಾರ್ಯವೈಖರಿಯ ಬಗ್ಗೆಯೂ ಸದನವು ಚರ್ಚೆಗಳನ್ನು ನಡೆಸಿದೆ.
ಅಧಿವೇಶನದ ಅವಧಿಯಲ್ಲಿ 117 ಪ್ರಶ್ನೆಗಳು, 446 ಶೂನ್ಯಾವಧಿ ಪ್ರಸ್ತಾಪಗಳು ಮತ್ತು 207 ವಿಶೇಷ ಉಲ್ಲೇಖಗಳು ದಾಖಲಾಗಿವೆ ಎಂದು ತಿಳಿಸಿದರು.
ಲೋಕಸಭೆಯಲ್ಲಿ, ಸ್ಪೀಕರ್ಓಂ ಬಿರ್ಲಾ ಅವರು ಸಮಾರೋಪ ಭಾಷಣ ನೀಡಿ ಬೆಳಿಗ್ಗೆ 11 ಗಂಟೆಗೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡುವ ಮುನ್ನ ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆ ಮತಗಳ ವಿಭಜನೆಯ ನಂತರ ಸೋಲು ಕಂಡಿದೆ. ಈ ಮಸೂದೆಯಲ್ಲಿ ಲೋಕಸಭೆಯ ಸದಸ್ಯರ ಸಂಖ್ಯೆಯನ್ನು 543ರಿಂದ 816ಕ್ಕೆ ಹೆಚ್ಚಿಸುವ ಪ್ರಸ್ತಾಪವೂ ಸೇರಿತ್ತು.
ಅಧಿವೇಶನವು ಔಪಚಾರಿಕವಾಗಿ ಮುಕ್ತಾಯಗೊಳ್ಳುವ ಮೊದಲು ಮಸೂದೆಗಳ ಕುರಿತು ಚರ್ಚಿಸಲು ಸಂಸತ್ತು ಏಪ್ರಿಲ್ 16 ರಿಂದ 18 ರವರೆಗೆ ಮೂರು ದಿನಗಳ ವಿಶೇಷ ಅಧಿವೇಶನವನ್ನು ನಡೆಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



