ನೀವು ನನಗೆ 1 ಗಂಟೆ ಸಮಯಾವಕಾಶ ಕೊಡಿ, ನಾನು ನಿಮಗೆ...: ವಿಪಕ್ಷಗಳಿಗೆ ಅಮಿತ್ ಶಾ ಮನವಿ ಮಾಡಿದ್ದೇಕೆ?
ಶಾ ಅವರು ವಿರೋಧ ಪಕ್ಷದ ಸದಸ್ಯರನ್ನು ಉದ್ದೇಶಿಸಿ, ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಪ್ರಕ್ರಿಯೆಗೆ ಅವರು ತೋರಿಸುತ್ತಿರುವ ವಿರೋಧದ ನಿಜವಾದ ಕಾರಣವನ್ನು ಸ್ಪಷ್ಟವಾಗಿ ಹೇಳುವಂತೆ ಒತ್ತಾಯಿಸಿದರು.

ಮಹಿಳಾ ಮೀಸಲಾತಿ ಮಸೂದೆ ವಿಷಯವಾಗಿ ವಿಪಕ್ಷಗಳಿಗೆ ಗೃಹ ಸಚಿವ ಅಮಿತ್ ಶಾ ಮಾಡಿದ ಮನವಿಯ ತುಣುಕೊಂದು ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.
ಶುಕ್ರವಾರ ಲೋಕಸಭೆಯಲ್ಲಿ ವಿರೋಧ ಪಕ್ಷಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸದನದ ಕಾರ್ಯಚಟುವಟಿಕೆಗಳಿಗೆ ಒಂದು ಗಂಟೆ ವಿರಾಮ ನೀಡಿದರೆ, ರಾಜ್ಯಗಳಿಗೆ 50 ಶೇಕಡಾ ಸ್ಥಾನವೃದ್ಧಿಯನ್ನು ಖಚಿತಪಡಿಸುವ ಅಧಿಕೃತ ತಿದ್ದುಪಡಿ ತರಲು ತಾವು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು. ವಿರೋಧ ಪಕ್ಷಗಳ ಆಕ್ಷೇಪಣೆಗಳಿಗೆ ಉತ್ತರಿಸುತ್ತಾ, ಸರ್ಕಾರಕ್ಕೆ ಮರೆಮಾಡುವಂತಹುದೇನೂ ಇಲ್ಲ ಮತ್ತು ಆ ಪ್ರಸ್ತಾವನೆಯನ್ನು ಲಿಖಿತ ರೂಪದಲ್ಲಿ ನೀಡಲು ತಾವು ಸಿದ್ಧರಾಗಿದ್ದೇವೆ ಎಂದು ಶಾ ಹೇಳಿದರು. ಅಧಿಕೃತ ತಿದ್ದುಪಡಿ ಮಸೂದೆ ಈಗಾಗಲೇ ಸಿದ್ಧವಾಗಿದ್ದು, ಅದರ ಪ್ರತಿಗಳನ್ನು ತಯಾರಿಸಿದ ನಂತರ ಸದಸ್ಯರಿಗೆ ಹಂಚಬಹುದಾಗಿದೆ ಎಂದು ತಿಳಿಸಿದರು.
ಶಾ ಅವರು ವಿರೋಧ ಪಕ್ಷದ ಸದಸ್ಯರನ್ನು ಉದ್ದೇಶಿಸಿ, ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಪ್ರಕ್ರಿಯೆಗೆ ಅವರು ತೋರಿಸುತ್ತಿರುವ ವಿರೋಧದ ನಿಜವಾದ ಕಾರಣವನ್ನು ಸ್ಪಷ್ಟವಾಗಿ ಹೇಳುವಂತೆ ಒತ್ತಾಯಿಸಿದರು.
50 ಶೇಕಡಾ ಸ್ಥಾನವೃದ್ಧಿ ಬೇಡಿಕೆಯೇ ಅವರ ವಿರೋಧದ ಮೂಲವೇ? ಎಂದು ಪ್ರಶ್ನಿಸಿದರು. ಅದು ಸಮಸ್ಯೆಯಾಗಿದ್ದರೆ, ತಾವು ಒಂದು ಗಂಟೆಯೊಳಗೆ ತಿದ್ದುಪಡಿ ಪ್ರಸ್ತಾವನೆ ಜೊತೆ ಮರಳಿ ಬರುತ್ತೇನೆ, ಆದರೆ ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ನೀಡುವ ಮೂರು ಮಸೂದೆಗಳನ್ನು ಯಾವ ಪರಿಸ್ಥಿತಿಯಲ್ಲೂ ಅಂಗೀಕರಿಸಲೇಬೇಕು ಎಂದು ಅವರು ಒತ್ತಾಯಿಸಿದರು.
ಗೃಹ ಸಚಿವರು ಈ ಮರುವಿಂಗಡಣೆ ಪ್ರಕ್ರಿಯೆಯನ್ನು 2026ರ ಜನಗಣತಿಗೆ ಸಂಪರ್ಕಿಸುವ ಪ್ರಯತ್ನವನ್ನು ತಳ್ಳಿ ಹಾಕಿ, ಡಿಲಿಮಿಟೇಶನ್ ವಿಷಯದಲ್ಲಿ ತಮಗೆ ತಪ್ಪು ದಾರಿ ತೋರಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಹಿಳಾ ಮೀಸಲಾತಿ ವಿಷಯದ ಬಗ್ಗೆ ಮಾತನಾಡಿದ ಅಮಿತ್ ಶಾ, ವಿರೋಧ ಪಕ್ಷಗಳು ಈ ಮೀಸಲಾತಿ ಜಾರಿಗೆ 2029ರ ನಂತರಕ್ಕೂ ವಿಳಂಬ ಮಾಡುವ ಯತ್ನ ಮಾಡುತ್ತಿವೆ ಎಂದು ಆರೋಪಿಸಿದರು. ಮೀಸಲಾತಿ 2029ರೊಳಗೆ ಜಾರಿಯಾಗಬೇಕು, ಅದನ್ನು ತಡೆದರೆ ಮಸೂದೆ ಸೋಲುವ ಪರಿಸ್ಥಿತಿ ಉಂಟಾಗಬಹುದು ಎಂದು ಎಚ್ಚರಿಸಿದರು.
ದೇಶದಾದ್ಯಂತ ಮಹಿಳೆಯರು ಸಂಸತ್ತಿನ ಚರ್ಚೆಯನ್ನು ಕಣ್ಣಾರೆ ಗಮನಿಸುತ್ತಿದ್ದಾರೆ, ಈ ಕಾನೂನು ತಡೆಗಟ್ಟಲು ಯತ್ನಿಸುವವರನ್ನು ಚುನಾವಣೆ ಸಂದರ್ಭದಲ್ಲಿ ಹೊಣೆಗಾರರನ್ನಾಗಿ ಮಾಡುವರು ಎಂದು ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




