ದೇಶ

Parliament special session: ಇಂದಿನಿಂದ ಸಂಸತ್ತು ವಿಶೇಷ ಕಲಾಪ; ಆಡಳಿತ-ವಿಪಕ್ಷಗಳ ಚರ್ಚೆ ಬಗ್ಗೆ ತೀವ್ರ ಕುತೂಹಲ; ಅಜೆಂಡಾ ಹೀಗಿದೆ...

ಕೇಂದ್ರವು 2029ರ ಸಾಮಾನ್ಯ ಚುನಾವಣೆಗೆ ಮುನ್ನ ನಾರಿ ಶಕ್ತಿ ವಂದನ್ ಅಧಿನಿಯಮ್ ಕಾಯ್ದೆಯನ್ನು ಜಾರಿಗೆ ತರಲು 2023ರ ಕಾಯ್ದೆಗೆ ತಿದ್ದುಪಡಿ ತರಲು ಯೋಜಿಸಿದೆ. ಈ ಕಾಯ್ದೆಯಡಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗ (33 ಶೇಕಡಾ) ಸ್ಥಾನ ಮೀಸಲಿರುತ್ತದೆ.

Parliament special session: ಇಂದಿನಿಂದ ಸಂಸತ್ತು ವಿಶೇಷ ಕಲಾಪ; ಆಡಳಿತ-ವಿಪಕ್ಷಗಳ ಚರ್ಚೆ ಬಗ್ಗೆ ತೀವ್ರ ಕುತೂಹಲ; ಅಜೆಂಡಾ ಹೀಗಿದೆ...
ದೆಹಲಿಯಲ್ಲಿ ಇರುವ ಸಂಸತ್ ಭವನದ ಒಂದು ದೃಶ್ಯ
Published On :

ಸಂಸತ್ತು ಏಪ್ರಿಲ್ 16ರಿಂದ 18ರವರೆಗೆ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗೆ ಸಿದ್ಧವಾಗುತ್ತಿದೆ. ಕೇಂದ್ರ ಸರ್ಕಾರವು ನಾರಿ ಶಕ್ತಿ ವಂದನ್ ಅಭಿನಿಯಮ್ (ಮಹಿಳಾ ಮೀಸಲಾತಿ ಕಾಯ್ದೆ)ಗೆ ತಿದ್ದುಪಡಿ ತರಲು ಮತ್ತು ಲೋಕಸಭೆಯ ಸ್ಥಾನಗಳನ್ನು 850ಕ್ಕೆ ವಿಸ್ತರಿಸುವ ಗಡಿಬದ್ಧತೆ (Delimitation) ಮಸೂದೆಯನ್ನು ಮಂಡಿಸಲು ಮುಂದಾಗಿದೆ.

ಈ ಬಾರಿಯ ವಿಶೇಷ ಅಧಿವೇಶನದ ಕೇಂದ್ರಬಿಂದುವೇ ಡಿಲಿಮಿಟೇಶನ್. ಇದರಿಂದ ದಕ್ಷಿಣ ರಾಜ್ಯಗಳ ಪ್ರತಿನಿಧಿತ್ವ ಕಡಿಮೆಯಾಗಬಹುದು ಮತ್ತು ಉತ್ತರ ರಾಜ್ಯಗಳಿಗೆ ಹೆಚ್ಚು ಲಾಭವಾಗಬಹುದು ಎಂದು ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಮಹಿಳಾ ಮೀಸಲಾತಿ ಜಾರಿಗೆ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಹೊಂದಿಕೆ ಮಾಡಬಾರದು ಎಂದು ವಿರೋಧಪಕ್ಷಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೇಂದ್ರವು 2029ರ ಸಾಮಾನ್ಯ ಚುನಾವಣೆಗೆ ಮುನ್ನ ನಾರಿ ಶಕ್ತಿ ವಂದನ್ ಅಧಿನಿಯಮ್ ಕಾಯ್ದೆಯನ್ನು ಜಾರಿಗೆ ತರಲು 2023ರ ಕಾಯ್ದೆಗೆ ತಿದ್ದುಪಡಿ ತರಲು ಯೋಜಿಸಿದೆ. ಈ ಕಾಯ್ದೆಯಡಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗ (33 ಶೇಕಡಾ) ಸ್ಥಾನ ಮೀಸಲಿರುತ್ತದೆ.

ಇದರ ಜೊತೆಗೆ, ಸರ್ಕಾರವು ಸಂವಿಧಾನ (131ನೇ ತಿದ್ದುಪಡಿ) ಮಸೂದೆ, 2026 ನ್ನು ಮಂಡಿಸಲು ಉದ್ದೇಶಿಸಿದ್ದು, ಇದರ ಮೂಲಕ ಲೋಕಸಭೆಯ ಸ್ಥಾನಗಳನ್ನು 543ರಿಂದ 850ಕ್ಕೆ ಹೆಚ್ಚಿಸಲು ಮತ್ತು ಸಂವಿಧಾನದ 81 ಹಾಗೂ 82ನೇ ವಿಧಿಗಳನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಿದೆ. ಈ ಮಸೂದೆ 2027ರ ಜನಗಣತಿಗೆ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಹೊಂದಾಣಿಕೆ ಮಾಡದೆ, 2026ರ ಪೂರ್ವದ ಜನಸಂಖ್ಯಾ ಮಾಹಿತಿಯ ಆಧಾರದ ಮೇಲೆ ಗಡಿಬದ್ಧತೆಯನ್ನು ನಡೆಸಲು ಅವಕಾಶ ನೀಡುತ್ತದೆ.

ಏಪ್ರಿಲ್ 16–18ರ ಅಧಿವೇಶನಕ್ಕೆ ಮೂವರು ಪ್ರಮುಖ ಮಸೂದೆಗಳನ್ನು ತರಲಾಗಿದೆ:

  • ಸಂವಿಧಾನ (131ನೇ ತಿದ್ದುಪಡಿ) ಮಸೂದೆ, 2026

  • ಡಿಲಿಮಿಟೇಶನ್ ಮಸೂದೆ, 2026

  • ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ, 2026

ಪ್ರಸ್ತಾಪಿತ ಯೋಜನೆಯಂತೆ ಲೋಕಸಭೆಯ ಸ್ಥಾನಗಳನ್ನು 543ರಿಂದ 850ಕ್ಕೆ ಹೆಚ್ಚಿಸಲಾಗುತ್ತದೆ. ಇದರಲ್ಲಿ 815 ಸ್ಥಾನಗಳು ರಾಜ್ಯಗಳಿಗೆ ಮತ್ತು 35 ಸ್ಥಾನಗಳು ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಾಗುತ್ತವೆ.

ವಿಶೇಷ ಅಧಿವೇಶನಕ್ಕೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣದತ್ತ “ಐತಿಹಾಸಿಕ ಹೆಜ್ಜೆ” ಇಡಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದಾರೆ. “ನಮ್ಮ ತಾಯಿ ಮತ್ತು ಸಹೋದರಿಯರ ಗೌರವವೇ ದೇಶದ ಗೌರವ,” ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾನೂನು ಸಚಿವ ಅರ್ಜುನ್ ರಾಮ್ ಮೇಘಾವಲ್ ಅವರು ಈ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ.

ವಿರೋಧ ಪಕ್ಷಗಳ ಅಪಸ್ವರವೇನು?
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷಗಳು ಡಿಲಿಮಿಟೇಶನ್ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಮಹಿಳಾ ಮೀಸಲಾತಿಗೆ ಅವರು ಬೆಂಬಲ ನೀಡುತ್ತಿದ್ದರೂ, ಈ ಮಸೂದೆ ತರಲಾಗುತ್ತಿರುವ ವಿಧಾನ ಮತ್ತು ಸಮಯದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾವು ಮಹಿಳಾ ಮೀಸಲಾತಿಗೆ ಬೆಂಬಲಿಸುತ್ತೇವೆ, ಆದರೆ ಇದನ್ನು ತರಲಾಗುತ್ತಿರುವ ವಿಧಾನ ರಾಜಕೀಯ ಉದ್ದೇಶದಿಂದ ಕೂಡಿದೆ. ಸರ್ಕಾರವು ಡಿಲಿಮಿಟೇಶನ್ ವಿಷಯದಲ್ಲಿ ಆಟವಾಡುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಒಟ್ಟಾರೆ, ಈ ವಿಶೇಷ ಅಧಿವೇಶನವು ಮಹಿಳಾ ಮೀಸಲಾತಿ ಮತ್ತು ಪ್ರತಿನಿಧಿತ್ವ ಪುನರ್ವಿಂಗಡಣೆ ಕುರಿತು ಮಹತ್ವದ ರಾಜಕೀಯ ಚರ್ಚೆಗೆ ವೇದಿಕೆಯಾಗಲಿದೆ.

Story image

ತಮಿಳು ನಾಡು ಸರ್ಕಾರ ತೀವ್ರ ವಿರೋಧ

ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಇಂದು ಗುರುವಾರ ಕಪ್ಪು ಧ್ವಜ ಹಾರಿಸಿ, ಪ್ರಸ್ತಾವಿತ ಡಿಲಿಮಿಟೇಶನ್ ಮಸೂದೆ ಪ್ರತಿಯನ್ನು ದಹನ ಮಾಡುವ ಮೂಲಕ ಕೇಂದ್ರ ಸರ್ಕಾರದ ಈ ಕ್ರಮದ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದರು.

ಈ ಪ್ರತೀಕಾತ್ಮಕ ಪ್ರತಿಭಟನೆ ರಾಜ್ಯವ್ಯಾಪಿ ಕರೆ ಭಾಗವಾಗಿದ್ದು, ಜನರು ತಮ್ಮ ಮನೆಗಳು, ಬೀದಿಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕಪ್ಪು ಧ್ವಜ ಹಾರಿಸುವಂತೆ ಅವರು ಮನವಿ ಮಾಡಿದ್ದಾರೆ.

ಮಸೂದೆ ಪ್ರತಿಯನ್ನು ಸುಟ್ಟ ನಂತರ, ತಮಿಳುನಾಡು ಒಟ್ಟಾಗಿ ಹೋರಾಡಿ ಗೆಲ್ಲುತ್ತೇವೆ ಎಂಬ ಘೋಷಣೆಗಳನ್ನು ಮುಖ್ಯಮಂತ್ರಿ ಮತ್ತು ಇತರರು ಕೂಗಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.