Oracle ಬೆನ್ನಲ್ಲೇ 3ನೇ ಅತಿ ದೊಡ್ಡ layoffs ಗೆ Amazon ಸಿದ್ಧತೆ: 14000 ಉದ್ಯೋಗಗಳಿಗೆ ಕತ್ತರಿ; 3 ವರ್ಷದಲ್ಲಿ 57 ಸಾವಿರ ನೌಕರಿ ಕಡಿತ!
ನೌಕರಿ ವೇದಿಕೆ ಬ್ಲಿಂಡ್ ಹಾಗೂ ಚೀನಾದ ಟೆಕ್ ಪೋರ್ಟಲ್ ಒಂದು ಪ್ರಕಟಿಸಿರುವ ವರದಿಯ ಪ್ರಕಾರ, 2026 ರ ಮೇ ತಿಂಗಳಲ್ಲಿ ಅಮೇಜಾನ್ ಸಂಸ್ಥೆ ತನ್ನ 3 ನೇ ಅತಿ ದೊಡ್ಡ ಉದ್ಯೋಗ ಕಡಿತ ಪ್ರಕ್ರಿಯೆಗೆ ಸಜ್ಜಾಗುತ್ತಿದೆ.

ನವದೆಹಲಿ: ಇತ್ತೀಚೆಗೆ 12 ಸಾವಿರ ಉದ್ಯೋಗಗಳಿಗೆ ಒರಾಕಲ್ ಸಂಸ್ಥೆ ಕತ್ತರಿ ಹಾಕಿದ ಬೆನ್ನಲ್ಲೇ ಅಮೇಜಾನ್ ವರ್ಷದಲ್ಲೇ 3ನೇ ಅತಿ ದೊಡ್ಡ Layoffs ಗೆ ಸಿದ್ಧತೆ ನಡೆಸುತ್ತಿದೆ.
ನೌಕರಿ ವೇದಿಕೆ ಬ್ಲಿಂಡ್ ಹಾಗೂ ಚೀನಾದ ಟೆಕ್ ಪೋರ್ಟಲ್ ಒಂದು ಪ್ರಕಟಿಸಿರುವ ವರದಿಯ ಪ್ರಕಾರ, 2026 ರ ಮೇ ತಿಂಗಳಲ್ಲಿ ಅಮೇಜಾನ್ ಸಂಸ್ಥೆ ತನ್ನ 3 ನೇ ಅತಿ ದೊಡ್ಡ ಉದ್ಯೋಗ ಕಡಿತ ಪ್ರಕ್ರಿಯೆಗೆ ಸಜ್ಜಾಗುತ್ತಿದ್ದು, ಈ ಬಾರಿ ವಿವಿಧ ವಿಭಾಗಗಳಲ್ಲಿ 14,000 ಉದ್ಯೋಗಿಗಳನ್ನು ತೆಗೆದುಹಾಕುವ ಸಾಧ್ಯತೆ ಇದೆ ಈ ಪೈಕಿ ಎಡಬ್ಲ್ಯುಎಸ್, ರೀಟೇಲ್, ಮಾನವ ಸಂಪನ್ಮೂಲ ವಿಭಾಗಗಳೂ ಸೇರಿವೆ.
ಸಂಸ್ಥೆಯ ಪುನಾರ್ರಚನೆಯ ಭಾಗವಾಗಿ ಈ ಉದ್ಯೋಗ ಕಡಿತಗಳು ಬರುತ್ತಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ ಉದ್ಯೋಗ ಕಡಿತದ ಕುರಿತ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿರುವುದಾಗಿ ಈ ಬಗ್ಗೆ ಅರಿವಿರುವವರೊಬ್ಬರನ್ನು ಬ್ಲಿಂಡ್ ಉಲ್ಲೇಖಿಸಿದೆ.

ಕೆಲ್ಸ ಹೋದ್ರೆ ಏನು.. ವಿಂಟೇಜ್ ಪ್ಲಾನ್ ಮೂಲಕ ಮಾಸಿಕ 43 ಸಾವಿರ ರೂ ಆದಾಯ ಗಳಿಸುತ್ತಿರುವ Oracle ಮಾಜಿ ಸಿಬ್ಬಂದಿ!
ಈ ಬಾರಿಯ ಉದ್ಯೋಗ ಕಡಿತದಿಂದ ಯಾರಿಗೆ ಹೆಚ್ಚು ಪರಿಣಾಮ?
ಚೀನಾದ ಟೆಕ್ ಪೋರ್ಟಲ್ ಲೀ ಫೆಂಗ್ ನೆಟ್ವರ್ಕ್ ವರದಿಯ ಪ್ರಕಾರ, ಅಮೇಜಾನ್ ಉದ್ಯೋಗ ಕಡಿತ ಪ್ರಾಥಮಿಕವಾಗಿ ವೈಟ್ ಕಾಲರ್ ಉದ್ಯೋಗಿಗಳು, ಎಲ್ 5, ಎಲ್ 7 ಉದ್ಯೋಗ ಮಟ್ಟದ ಮಧ್ಯಮ ಮಟ್ಟದ ವ್ಯವಸ್ಥಾಪಕರ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಗೋದಾಮು, ಲಾಜಿಸ್ಟಿಕ್ಸ್ ನೌಕರರು ಉದ್ಯೋಗ ಕಡಿತದಿಂದ ಪಾರಾಗಲಿದ್ದಾರೆ. ಚೀನಾದಲ್ಲಿ ಕೆಲವು ತಂಡಗಳನ್ನೇ ಸಂಪೂರ್ಣವಾಗಿ ಕಡಿತಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಕೋವಿಡ್ ಅವಧಿಯಲ್ಲಿ ಅತಿ ಹೆಚ್ಚು ನೇಮಕಾತಿ ಮಾಡಿಕೊಂಡಿದ್ದು, ಕೆಲವು ಕೆಲಸಗಳಿಗೆ AI ಅಳವಡಿಕೆ, ಕಡಿಮೆ ಮಾನವಸಂಪನ್ಮೂಲ ಬಳಕೆಗೆ ಹೆಚ್ಚಿದ ಒತ್ತಡಗಳಿಂದಾಗಿ ಉದ್ಯೋಗ ಕಡಿತಕ್ಕೆ ಅಮೇಜಾನ್ ಮುಂದಾಗುತ್ತಿದೆ.
2025 ರ ಅಕ್ಟೋಬರ್ ನಿಂದ ಈ ವರೆಗೆ 30 ಸಾವಿರ ಕಾರ್ಪೊರೇಟ್ ಉದ್ಯೋಗಗಳಿಗೆ ಕತ್ತರಿ!
2025 ರ ಅಕ್ಟೋಬರ್ ನಲ್ಲಿ ಸಂಸ್ಥೆ 14000 ಕಾರ್ಪೊರೇಟ್ ನೌಕರಿಗಳನ್ನು ತೆಗೆದುಹಾಕಿತ್ತು. 2026 ರ ಜನವರಿಯಲ್ಲಿ 16,000 ನೌಕರಿಯನ್ನು ತೆಗೆದುಹಾಕಲಾಗಿತ್ತು, ಈಗ ಮತ್ತೆ 13000 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕುವ ಪ್ರಕ್ರಿಯೆಗೆ ಅಮೇಜಾನ್ ಸಿದ್ಧತೆ ನಡೆಸುತ್ತಿದೆ. ಈ ವರೆಗೂ ಒಟ್ಟು 30 ಸಾವಿರ ಮಂದಿಗೆ ಅಮೇಜಾನ್ ಪಿಂಕ್ ಸ್ಲಿಪ್ ನೀಡಿದೆ.
ಇದಷ್ಟೇ ಅಲ್ಲದೇ 2022-2023 ಅವಧಿಯಲ್ಲಿ 27,000 ಉದ್ಯೋಗಿಗಳನ್ನು ಅಮೇಜಾನ್ ವಜಾಗೊಳಿಸಿತ್ತು. ಒಟ್ಟಾರೆ 3 ವರ್ಷಗಳಲ್ಲಿ ಅಮೇಜಾನ್ ಸಂಸ್ಥೆಯಿಂದ ತೆಗೆದುಹಾಕಲಾದ ಉದ್ಯೋಗಿಗಳ ಸಂಖ್ಯೆ 57 ಸಾವಿರ ದಾಟಲಿದೆ.
2026 ನೇ ಸಾಲಿನಲ್ಲಿ ಅಮೇಜಾನ್ 125 ಬಿಲಿಯನ್ ಡಾಲರ್ಕ್ಯಾಪಿಟಲ್ ಎಕ್ಸ್ಪೆಂಡೀಚರ್ ಅಂದಾಜು ಇಟ್ಟುಕೊಂಡಿದ್ದು, ಈ ಪೈಕಿ ಬಹುತೇಕ ಎಐ ಮೂಲಸೌಕರ್ಯ, ಡೇಟಾ ಸೆಂಟರ್ ಗಳಿಗೆ ಹೋಗುತ್ತದೆ. ಜನರ ಬದಲಾಗಿ ಮಷಿನ್ ಗಳ ಮೇಲೆ ಹೆಚ್ಚಿನ ಖರ್ಚು ಮಾಡಲು ಸಂಸ್ಥೆ ಉದ್ದೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


