ದೇಶ

ಹಿಮಾಚಲ ಪ್ರದೇಶ: ಮೇಘಸ್ಫೋಟ, ಭೂಕುಸಿತದ ನಂತರ 30 ಜನ ನಾಪತ್ತೆ; ಶೋಧ ಕಾರ್ಯ ತೀವ್ರ

ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು, ಸೇನೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಗೃಹರಕ್ಷಕ ದಳದ ಸುಮಾರು 250 ಸಿಬ್ಬಂದಿ, ಆಡಳಿತ ಮತ್ತು ಸ್ಥಳೀಯ ಜನರೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯವನ್ನು ನಡೆಸುತ್ತಿದ್ದಾರೆ.

ಹಿಮಾಚಲ ಪ್ರದೇಶ: ಮೇಘಸ್ಫೋಟ, ಭೂಕುಸಿತದ ನಂತರ 30 ಜನ ನಾಪತ್ತೆ; ಶೋಧ ಕಾರ್ಯ ತೀವ್ರ
ಸೋಮವಾರ ಮಂಡಿ ಜಿಲ್ಲೆಯ ತುನಾಗ್‌ನಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಅವಶೇಷಗಳ ನಡುವೆ ಸ್ಥಳೀಯರು ತಮ್ಮ ವಸ್ತುಗಳನ್ನು ಹೊತ್ತುಕೊಂಡು ಹೋಗುತ್ತಿರುವುದು.
Published On :

ಶಿಮ್ಲಾ: ಕಳೆದ ವಾರ ಮಂಡಿ ಜಿಲ್ಲೆಯ ತುನಾಗ್, ಗೋಹರ್ ಮತ್ತು ಕರ್ಸೋಗ್ ಉಪವಿಭಾಗಗಳಲ್ಲಿ ಸಂಭವಿಸಿದ ಮೇಘಸ್ಫೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತ ಪ್ರಕರಣಗಳಲ್ಲಿ ನಾಪತ್ತೆಯಾದ 30 ಜನರನ್ನು ಪತ್ತೆಹಚ್ಚಲು ಡ್ರೋನ್‌ಗಳು ಮತ್ತು ಸ್ನಿಫರ್ ಶ್ವಾನಗಳನ್ನು ಬಳಸಲಾಗುತ್ತಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು, ಸೇನೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಗೃಹರಕ್ಷಕ ದಳದ ಸುಮಾರು 250 ಸಿಬ್ಬಂದಿ, ಆಡಳಿತ ಮತ್ತು ಸ್ಥಳೀಯ ಜನರೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯವನ್ನು ನಡೆಸುತ್ತಿದ್ದಾರೆ.

ಇದಲ್ಲದೆ, 20 ತಂಡಗಳು ಮಾಹಿತಿ ಸಂಗ್ರಹಿಸಿ ದುರ್ಗಮ ಪ್ರದೇಶಗಳಲ್ಲಿ ಪಡಿತರ ಮತ್ತು ವೈದ್ಯಕೀಯ ಕಿಟ್‌ಗಳನ್ನು ವಿತರಿಸುತ್ತಿವೆ. ಇಲ್ಲಿಯವರೆಗೆ 1,538 ಪಡಿತರ ಕಿಟ್‌ಗಳನ್ನು ಅಗತ್ಯವಿರುವ ಜನರಿಗೆ ವಿತರಿಸಲಾಗಿದೆ. ಹೆಚ್ಚುವರಿಯಾಗಿ, ತುನಾಗ್ ಮತ್ತು ಜಂಝೇಲಿ ಪ್ರದೇಶಗಳಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ತಲಾ 5 ಲಕ್ಷ ರೂ.ಗಳನ್ನು ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರಂತದಲ್ಲಿ ಸುಮಾರು 225 ಮನೆಗಳು, ಏಳು ಅಂಗಡಿಗಳು, 243 ದನದ ಕೊಟ್ಟಿಗೆಗಳು, 31 ವಾಹನಗಳು, 14 ಸೇತುವೆಗಳು ಮತ್ತು ಹಲವಾರು ರಸ್ತೆಗಳು ಹಾನಿಗೊಳಗಾಗಿವೆ. ಇತ್ತೀಚಿನ ವರದಿಯ ಪ್ರಕಾರ, ಒಟ್ಟು 215 ಜಾನುವಾರುಗಳು ಸಾವಿಗೀಡಾಗಿವೆ. 494 ಜನರನ್ನು ರಕ್ಷಿಸಲಾಗಿದೆ.

ಭಾನುವಾರ ಸಂಜೆಯವರೆಗೆ, ರಾಜ್ಯದಲ್ಲಿ 243 ರಸ್ತೆಗಳು ಬಂದ್ ಆಗಿದ್ದು, ಅವುಗಳಲ್ಲಿ 183 ಮಂಡಿ ಜಿಲ್ಲೆಯಲ್ಲಿಯೇ ಇವೆ. ಇದಲ್ಲದೆ, ಹಿಮಾಚಲ ಪ್ರದೇಶದಲ್ಲಿ 241 ಟ್ರಾನ್ಸ್‌ಫಾರ್ಮರ್‌ಗಳು ಮತ್ತು 278 ನೀರು ಸರಬರಾಜು ಯೋಜನೆಗಳು ಹಾನಿಗೊಳಗಾಗಿವೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ತಿಳಿಸಿದೆ.

ಈಮಧ್ಯೆ, ರಾಜ್ಯದ ಕೆಲವು ಭಾಗಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗಿದೆ. ನಂಗಲ್ ಅಣೆಕಟ್ಟೆಯಲ್ಲಿ 56 ಮಿಮೀ ಮಳೆಯಾಗಿದ್ದು, ಒಲಿಂಡಾ (46 ಮಿಮೀ), ಬರ್ಥಿನ್ (44.6 ಮಿಮೀ), ಉನಾ (43 ಮಿಮೀ), ನೈನಾ ದೇವಿ (36.4 ಮಿಮೀ), ಗೋಹರ್ (29 ಮಿಮೀ) ಮತ್ತು ಬ್ರಹ್ಮಣಿಯಲ್ಲಿ (28.4 ಮಿಮೀ) ಮಳೆಯಾಗಿದೆ. ಜುಲೈ 10 ರವರೆಗೆ ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಎಸ್‌ಇಒಸಿ ಪ್ರಕಾರ, ಇಲ್ಲಿಯವರೆಗೆ ಮಳೆಯಿಂದಾಗಿ ಸುಮಾರು 572 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ಮುಖ್ಯಮಂತ್ರಿಗಳು ಈ ಅಂಕಿ ಅಂಶವನ್ನು 700 ಕೋಟಿ ರೂ.ಗಳ ಸಮೀಪದಲ್ಲಿದ್ದು, ಇನ್ನೂ ದತ್ತಾಂಶ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಜೂನ್ 20 ರಂದು ಮಾನ್ಸೂನ್ ಆರಂಭವಾದಾಗಿನಿಂದ, ರಾಜ್ಯದಲ್ಲಿ 78 ಮಂದಿ ಸಾವಿಗೀಡಾಗಿದ್ದಾರೆ. ಅದರಲ್ಲಿ 50 ಸಾವುಗಳು ಮೇಘಸ್ಫೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತದಂತಹ ಮಳೆ ಸಂಬಂಧಿತ ಘಟನೆಗಳಿಗೆ ಸಂಬಂಧಿಸಿವೆ. ಇಲ್ಲಿಯವರೆಗೆ 121 ಜನರು ಗಾಯಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.