ದೇಶ

Maha Kumbh: 'ಮರೆಯಲಾಗದ ಅನುಭವ..'; ಪವಿತ್ರಸ್ನಾನ ಮಾಡಿದ ಡಿಕೆಶಿ ಹೇಳಿದ್ದೇನು?

144 ವರ್ಷಗಳಿಗೊಮ್ಮೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಭಾಗಿಯಾಗಿದ್ದಾರೆ.

Maha Kumbh: 'ಮರೆಯಲಾಗದ ಅನುಭವ..'; ಪವಿತ್ರಸ್ನಾನ ಮಾಡಿದ ಡಿಕೆಶಿ ಹೇಳಿದ್ದೇನು?
ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಡಿಕೆ ಶಿವಕುಮಾರ್
Published On :

ಪ್ರಯಾಗ್ ರಾಜ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕುಟುಂಬ ಸಮೇತರಾಗಿ ಭಾಗಿಯಾಗಿದ್ದು, ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.

144 ವರ್ಷಗಳಿಗೊಮ್ಮೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಭಾಗಿಯಾಗಿದ್ದು, ಇಂದು(ಫೆಬ್ರವರಿ 09) ಪತ್ನಿ ಉಷಾ ಅವರ ಜೊತೆಯಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಈಗಾಗಲೇ ಡಿಕೆಶಿ ಪುತ್ರಿ ಐಶ್ವರ್ಯಾ ಅವರು ಪ್ರಯಾಗ್‌ರಾಜ್‌ಗೆ ತೆರಳಿ ಪವಿತ್ರ ಸ್ನಾನ ಮಾಡಿದ್ದರು. ಈಗ ಡಿಕೆಶಿ ದಂಪತಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ.

ಡಿಕೆ ಶಿವಕುಮಾರ್ ಅವರಿಗೆ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ರಾಜದೇಶಿ ಕೇಂದ್ರ ಶಿವಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ ಅವರೂ ಕೂಡ ಸಾಥ್ ನೀಡಿದರು. ಅವರ ಜೊತೆಯಲ್ಲೇ ಡಿಕೆಶಿ ದಂಪತಿ ಮಹಾಕುಂಭಮೇಳದಕ್ಕೆ ತೆರಳಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು.

ವಿಶೇಷ ಪೂಜೆ

ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ನದಿಗಳ ಸಂಗಮದಲ್ಲಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ರಾಜದೇಶಿ ಕೇಂದ್ರ ಶಿವಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಡಿಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಅವರು ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು.

ಇನ್ನು ಪುಣ್ಯಸ್ನಾನ ಮಾಡಿರುವ ಫೋಟೋಗಳನ್ನು ಡಿಕೆಶಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿದ್ದು, ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕುಟುಂಬ ಸಮೇತ ಪಾಲ್ಗೊಂಡು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದೆ. 144 ವರ್ಷಗಳಿಗೊಮ್ಮೆ‌ ನಡೆಯುವ ಮಹಾ ಕುಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ನಿಜಕ್ಕೂ ಖುಷಿ ತಂದಿದೆ ಎಂದು ಬರೆದುಕೊಂಡಿದ್ದಾರೆ.

ಉತ್ತಮ ವ್ಯವಸ್ಥೆ

ಇನ್ನು ಪವಿತ್ರ ಸ್ನಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, 'ಕುಂಭಮೇಳವನ್ನು ಇಷ್ಟೊಂದು ಪವಿತ್ರ ರೀತಿಯಲ್ಲಿ ನಡೆಸಿದ್ದಕ್ಕಾಗಿ ಎಲ್ಲಾ ಸಂಘಟಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇದು ಒಬ್ಬರ ಜೀವನದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ. ಇಲ್ಲಿ ನೆರೆದಿರುವ ಲಕ್ಷಾಂತರ ಜನರು ವ್ಯವಸ್ಥೆಗಳನ್ನು ವೀಕ್ಷಿಸುತ್ತಿದ್ದಾರೆ. ಅಂತಹ ಕಾರ್ಯಕ್ರಮವನ್ನು ಆಯೋಜಿಸುವುದು ಸಣ್ಣ ಕೆಲಸವಲ್ಲ ಎಂದು ನನಗೆ ಅರ್ಥವಾಗಿದೆ. ಇದನ್ನು ಸಾಧ್ಯವಾಗಿಸಲು ಎಷ್ಟು ಶ್ರಮ ಬೇಕಾಗುತ್ತದೆ ಎಂದು ನನಗೆ ತಿಳಿದಿದೆ" ಎಂದು ಹೇಳಿದರು.

ಪವಿತ್ರಸ್ನಾನ ಟೀಕಿಸಿದ್ದ ಮಲ್ಲಿಕಾರ್ಜುನ ಖರ್ಗೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾಕುಂಭದಲ್ಲಿ ಪುಣ್ಯಸ್ನಾನ ಮಾಡಿದ್ದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟೀಕೆ ಮಾಡಿದ್ದರು. ಇದು ಭಾರೀ ಪರ ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದೀಗ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಅವರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಗಮನಸೆಳೆದಿದ್ದಾರೆ.

ಅಂದಹಾಗೆ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪೂಜ್ಯ ಮತ್ತು ಆಧ್ಯಾತ್ಮಿಕವಾಗಿ ಸಂಗಮವಾಗಿದೆ. ಹೀಗಾಗಿ ಇಲ್ಲಿ ಸ್ನಾನ ಮಾಡುವುದನ್ನು ಪುಣ್ಯಸ್ನಾನ ಎಂದು ಕರೆಯಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.