ಜಮ್ಮು-ಕಾಶ್ಮೀರ: ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ; ಶಾಂತಿ, ಸೌಹಾರ್ದತೆ ಬೆಳೆಸಲು ನಿರ್ಧಾರ! Video
ಕಳೆದ ವಾರ ನಡೆದ ದುರಂತದಲ್ಲಿ ಮಡಿದವರಿಗೆ ಸದಸ್ಯರು ಎರಡು ನಿಮಿಷ ಮೌನಾಚರಣೆಯೊಂದಿಗೆ ಶ್ರದ್ದಾಂಜಲಿ ಸಲ್ಲಿಸುವುದರೊಂದಿಗೆ ಆರಂಭವಾದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಉಪ ಮುಖ್ಯಮಂತ್ರಿ ಸುರೀಂದರ್ ಚೌಧರಿ ಅವರು ನಿರ್ಣಯವನ್ನು ಮಂಡಿಸಿದರು.

ಜಮ್ಮು: ಪಹಲ್ಗಾಮ್ ನಲ್ಲಿ ಇತ್ತೀಚಿಗೆ ಉಗ್ರರು ನಡೆಸಿದ ಬರ್ಬರ ದಾಳಿಯಲ್ಲಿ 26 ಜನರ ಸಾವಿಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಸೋಮವಾರ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸಿದ್ದು, ಕೋಮು ಸೌಹಾರ್ದತೆಯನ್ನು ಕದಡುವ ಮತ್ತು ಪ್ರಗತಿಗೆ ಅಡ್ಡಿಪಡಿಸುವ ದುಷ್ಕೃತ್ಯಗಳ ವಿರುದ್ಧ ದೃಢವಾಗಿ ಹೋರಾಡಲು ನಿರ್ಣಯವೊಂದನ್ನು ಅಂಗೀಕರಿಸಿದೆ.
ನಿರ್ಣಯ ಮಂಡಿಸಿದ ಡಿಸಿಎಂ ಸುರೀಂದರ್ ಚೌಧರಿ: ಕಳೆದ ವಾರ ನಡೆದ ದುರಂತದಲ್ಲಿ ಮಡಿದವರಿಗೆ ಸದಸ್ಯರು ಎರಡು ನಿಮಿಷ ಮೌನಾಚರಣೆಯೊಂದಿಗೆ ಶ್ರದ್ದಾಂಜಲಿ ಸಲ್ಲಿಸುವುದರೊಂದಿಗೆ ಆರಂಭವಾದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಉಪ ಮುಖ್ಯಮಂತ್ರಿ ಸುರೀಂದರ್ ಚೌಧರಿ ಅವರು ನಿರ್ಣಯವನ್ನು ಮಂಡಿಸಿದರು. ತನ್ನ ಎಲ್ಲಾ ನಾಗರಿಕರಿಗೆ ಶಾಂತಿ, ಅಭಿವೃದ್ಧಿಯ ವಾತಾವರಣವನ್ನು ಬೆಳೆಸುವ ಬದ್ಧತೆಯನ್ನು ಜಮ್ಮು ಕಾಶ್ಮೀರ ವಿಧಾನಸಭೆ ಪುನರುಚ್ಚರಿಸಿದೆ.
ದುಷ್ಕೃತ್ಯಗಳ ವಿರುದ್ಧ ದೃಢ ಹೋರಾಟ: ರಾಷ್ಟ್ರ ಮತ್ತು ಜಮ್ಮು ಮತ್ತು ಕಾಶ್ಮೀರದ ಕೋಮು ಸೌಹಾರ್ದತೆ ಮತ್ತು ಪ್ರಗತಿಗೆ ಅಡ್ಡಿಪಡಿಸುವ ದುಷ್ಕೃತ್ಯಗಳ ವಿರುದ್ಧ ದೃಢವಾಗಿ ಹೋರಾಡಲು ನಿರ್ಣಯದಲ್ಲಿ ಹೇಳಲಾಗಿದೆ.. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಬರ್ಬರ ಮತ್ತು ಅಮಾನವೀಯ ದಾಳಿಯ ಬಗ್ಗೆ ಈ ಸದನವು ತೀವ್ರ ಆಘಾತ ಮತ್ತು ದು:ಖವನ್ನು ವ್ಯಕ್ತಪಡಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಹೇಯ, ಹೇಡಿತನದ ಕೃತ್ಯಕ್ಕೆ ಖಂಡನೆ: ಹೇಯ, ಹೇಡಿತನದ ಕೃತ್ಯವನ್ನು ಸದನ ನಿಸ್ಸಂದೇಹವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು. ಇಂತಹ ಭಯೋತ್ಪಾದಕ ಕೃತ್ಯಗಳು ಕಾಶ್ಮೀರಿಯತ್‌ನ ತತ್ವಗಳು, ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ನಮ್ಮ ರಾಷ್ಟ್ರವನ್ನು ದೀರ್ಘಕಾಲದಿಂದ ನಿರೂಪಿಸಿರುವ ಏಕತೆ, ಶಾಂತಿ ಮತ್ತು ಸೌಹಾರ್ದತೆಯ ಮನೋಭಾವದ ಮೇಲೆ ನೇರ ದಾಳಿಯಾಗಿದೆ ಎಂದು ನಿರ್ಣಯವನ್ನು ಉಲ್ಲೇಖಿಸಿ ಅವರು ಹೇಳಿದರು.
ದಾಳಿಯಲ್ಲಿ ಮೃತಪಟ್ಟ ಸಂತ್ರಸ್ತರು ಹಾಗೂ ಅವರ ಕುಟುಂಬದವರ ಪರವಾಗಿ ಸದನ ಸಂಪೂರ್ಣವಾಗಿ ಒಗ್ಗಟ್ಟಿನಿಂದ ನಿಂತಿದ್ದು, ನಷ್ಟ ಅನುಭವಿಸಿದವರಿಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ. ಅವರ ದುಃಖದಲ್ಲಿ ಪಾಲ್ಗೊಳ್ಳಲು ಮತ್ತು ಅವರ ಅಗತ್ಯದ ಸಮಯದಲ್ಲಿ ಅವರನ್ನು ಬೆಂಬಲಿಸಲು ನಮ್ಮ ಸಾಮೂಹಿಕ ಸಂಕಲ್ಪವನ್ನು ದೃಢೀಕರಿಸುತ್ತೇವೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಸೈಯದ್ ಆದಿಲ್ ಹುಸೇನ್ ಶಾ ಪ್ರಯತ್ನಕ್ಕೆ ಶ್ಲಾಘನೆ: ಉಗ್ರರ ದಾಳಿಯಿಂದ ಪ್ರವಾಸಿಗರನ್ನು ರಕ್ಷಿಸಲು ಯತ್ನಿಸುವಾಗ ತನ್ನ ಪ್ರಾಣವನ್ನೇ ಅರ್ಪಿಸಿದ ಕುದುರೆ ಸೇವೆ ಒದಗಿಸುತ್ತಿದ್ದ ಸೈಯದ್ ಆದಿಲ್ ಹುಸೇನ್ ಶಾ ಅವರ ಅತ್ಯುನ್ನತ ತ್ಯಾಗವನ್ನು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. "ಅವರ ಧೈರ್ಯ ಮತ್ತು ನಿಸ್ವಾರ್ಥತೆಯು ಕಾಶ್ಮೀರದ ನಿಜವಾದ ಚೈತನ್ಯವನ್ನು ಸಾಕಾರಗೊಳಿಸುತ್ತದೆ ಮತ್ತು ಭವಿಷ್ಯದ ಪೀಳಿಗೆಗೆ ನಿರಂತರ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ದಾಳಿಯ ನಂತರ ಅವರ ಏಕತೆ, ಸಹಾನುಭೂತಿಯ ಅಸಾಧಾರಣ ಪ್ರದರ್ಶನಕ್ಕಾಗಿ ಸದನ ಅವರನ್ನು ಪ್ರಶಂಸಿದೆ.
ಕಣಿವೆ ರಾಜ್ಯದಾದ್ಯಂತ ಶಾಂತಿಯುತ ಪ್ರತಿಭಟನೆ: ಕಣಿವೆ ರಾಜ್ಯದಾದ್ಯಂತ ಶಾಂತಿಯುತ ಪ್ರತಿಭಟನೆಗಳು ಪ್ರವಾಸಿಗರಿಗೆ ನೈತಿಕ ಮತ್ತು ಭೌತಿಕ ಬೆಂಬಲ ನೀಡಿದ್ದು, ಶಾಂತಿ, ಕೋಮು ಸೌಹಾರ್ದತೆ ಮತ್ತು ಕಾನೂನಿನ ನಿಯಮಗಳಿಗೆ ಜನರ ಅಚಲ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ನಿರ್ಣಯ ಹೇಳಿದೆ. ದಾಳಿಯ ನಂತರ ಭದ್ರತೆಯ ಸಂಪುಟ ಉಪ ಸಮಿತಿ ಘೋಷಿಸಿದ ರಾಜತಾಂತ್ರಿಕ ಕ್ರಮಗಳಿಗೆ ಅಸೆಂಬ್ಲಿಯ ಅನುಮೋದನೆಯನ್ನು ಸಹ ನಿರ್ಣಯ ಉಲ್ಲೇಖಿಸಿದೆ. ಸಮಾಜದ ಎಲ್ಲಾ ವರ್ಗಗಳಿಗೆ ಮತ್ತು ನಿರ್ದಿಷ್ಟವಾಗಿ ಮಾಧ್ಯಮಗಳಿಗೆ, ಬೇಜವಾಬ್ದಾರಿಯಿಂದ ಭಾವೋದ್ರೇಕಗಳನ್ನು ಕೆರಳಿಸುವ ಮೂಲಕ ಕೆಟ್ಟ ಪಿತೂರಿಗೆ ಬಲಿಯಾಗದಂತೆ ಮನವಿ ಮಾಡಿದೆ.
ಕಾಶ್ಮೀರಿ ವಿದ್ಯಾರ್ಥಿಗಳ ರಕ್ಷಣೆಗೆ ಅಗತ್ಯ ಕ್ರಮ: ಕಾಶ್ಮೀರಿ ವಿದ್ಯಾರ್ಥಿಗಳು ಮತ್ತು ಅಲ್ಲಿ ವಾಸಿಸುವ ಅಥವಾ ಪ್ರಯಾಣಿಸುವ ನಾಗರಿಕರ ಸುರಕ್ಷತೆ, ಘನತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಕಿರುಕುಳ, ತಾರತಮ್ಯ ಅಥವಾ ಬೆದರಿಕೆಯನ್ನು ತಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಿದೆ.
ಈ ಸದನವು ರಾಷ್ಟ್ರದಾದ್ಯಂತ ಎಲ್ಲಾ ರಾಜಕೀಯ ಪಕ್ಷಗಳು, ಧಾರ್ಮಿಕ ಮತ್ತು ಸಮುದಾಯದ ಮುಖಂಡರು, ಯುವ ಸಂಘಟನೆಗಳು, ನಾಗರಿಕ ಸಮಾಜ ಗುಂಪುಗಳು ಮತ್ತು ಮಾಧ್ಯಮ ಸಂಸ್ಥೆಗಳು ಶಾಂತತೆಯನ್ನು ಕಾಪಾಡಿಕೊಳ್ಳಲು, ಹಿಂಸೆ ಮತ್ತು ವಿಭಜಕ ವಾಕ್ಚಾತುರ್ಯವನ್ನು ತಿರಸ್ಕರಿಸಲು ಮತ್ತು ಶಾಂತಿ, ಏಕತೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಒಟ್ಟಾಗಿ ಕೆಲಸ ಮಾಡಲು ಕರೆ ನೀಡುತ್ತದೆ" ಎಂದು ನಿರ್ಣಯ ಹೇಳಿದೆ. ನಿರ್ಣಯ ಅಂಗೀಕಾರಕ್ಕೂ ಮುನ್ನ ಸದನದಲ್ಲಿ ಚರ್ಚೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



