ದೇಶ

'ಸುಪ್ರೀಂ ಕೋರ್ಟ್ ಸೂಪರ್ ಪಾರ್ಲಿಮೆಂಟ್ ಆಗಿದೆ' ಎಂದ ಉಪ ರಾಷ್ಟ್ರಪತಿ ವಿರುದ್ಧ ಕಪಿಲ್ ಸಿಬಲ್ ವಾಗ್ದಾಳಿ; Video

ಯಾವುದೇ ರಾಜ್ಯಸಭಾ ಅಧ್ಯಕ್ಷರು ಈ ರೀತಿಯ "ರಾಜಕೀಯ ಹೇಳಿಕೆ" ನೀಡಿರುವುದನ್ನು ನಾನು ಯಾವತ್ತೂ ನೋಡಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.

'ಸುಪ್ರೀಂ ಕೋರ್ಟ್ ಸೂಪರ್ ಪಾರ್ಲಿಮೆಂಟ್ ಆಗಿದೆ' ಎಂದ ಉಪ ರಾಷ್ಟ್ರಪತಿ ವಿರುದ್ಧ ಕಪಿಲ್ ಸಿಬಲ್ ವಾಗ್ದಾಳಿ; Video
ಕಪಿಲ್ ಸಿಬಲ್, ಜಗದೀಪ್ ಧಂಕರ್ — Photo | PTI
Published On :

ನವದೆಹಲಿ: ಮಸೂದೆಗಳ ಕುರಿತು ನಿರ್ಧರಿಸಲು ರಾಷ್ಟ್ರಪತಿಗಳಿಗೆ ಸಮಯ ನಿಗದಿಪಡಿಸಿದ ಸುಪ್ರೀಂ ಕೋರ್ಟ್‌ ತೀರ್ಪು ಪ್ರಶ್ನಿಸಿದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ಇದು "ಅಸಂವಿಧಾನಿಕ" ಮತ್ತು ಯಾವುದೇ ರಾಜ್ಯಸಭಾ ಅಧ್ಯಕ್ಷರು ಈ ರೀತಿಯ "ರಾಜಕೀಯ ಹೇಳಿಕೆ" ನೀಡಿರುವುದನ್ನು ನಾನು ಯಾವತ್ತೂ ನೋಡಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.

ಧನಕರ್ ಅವರು ನ್ಯಾಯಾಂಗವನ್ನು ಕಟುವಾಗಿ ಟೀಕಿಸಿದ ಒಂದು ದಿನದ ನಂತರ ಪ್ರತಿಕ್ರಿಯಿಸಿದ ಸಿಬಲ್, ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾ ಅಧ್ಯಕ್ಷರು, ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ನಡುವೆ ಸಮಾನ ಅಂತರ ಕಾಯ್ದುಕೊಳ್ಳುತ್ತಾರೆ. ಅವರು "ಪಕ್ಷದ ವಕ್ತಾರ" ಆಗಲು ಸಾಧ್ಯವಿಲ್ಲ ಎಂದಿದ್ದಾರೆ.

"ಲೋಕಸಭಾ ಸ್ಪೀಕರ್ ಅವರ ಕುರ್ಚಿ ಸದನದ ಮಧ್ಯದಲ್ಲಿ ಇದೆ ಎಂದು ಎಲ್ಲರಿಗೂ ಗೊತ್ತು. ಅವರು ಒಂದು ಪಕ್ಷದ ಸ್ಪೀಕರ್ ಅಲ್ಲ. ಅವರು ಮತ ಚಲಾಯಿಸುವುದಿಲ್ಲ, ಅವರು ಟೈ ಇದ್ದಾಗ ಮಾತ್ರ ಮತ ಚಲಾಯಿಸುತ್ತಾರೆ. ಮೇಲ್ಮನೆಯಲ್ಲೂ ಅದೇ ಆಗಿದೆ. ನೀವು ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ನಡುವೆ ಸಮಾನ ಅಂತರ ಕಾಯ್ದುಕೊಳ್ಳಬೇಕು" ಎಂದು ಹಿರಿಯ ವಕೀಲರು ಇಂದು ಪತ್ರಿಕಾಗೋಷ್ಠಿಯಲ್ಲಿ ಧನಕರ್ ಅವರಿಗೆ ತಿರುಗೇಟು ನೀಡಿದರು.

"ನೀವು ನೀಡುವ ಪ್ರತಿಯೊಂದು ಹೇಳಿಕೆಯೂ ಸಮಾನ ಅಂತರದಲ್ಲಿರಬೇಕು. ನೀವು ಒಂದು ಪಕ್ಷದ ವಕ್ತಾರರಾಗಲು ಸಾಧ್ಯವಿಲ್ಲ. ರಾಜ್ಯಸಭಾ ಅಧ್ಯಕ್ಷರು ಅಥವಾ ಸ್ಪೀಕರ್ ಯಾವುದೇ ಪಕ್ಷದ ವಕ್ತಾರರಾಗಲು ಸಾಧ್ಯವಿಲ್ಲ. ಅವರು ಹಾಗೆ ಮಾಡಿದರೆ ಆ ಕುರ್ಚಿಯ ಘನತೆ ಕಡಿಮೆಯಾಗುತ್ತದೆ" ಎಂದು ಸಿಬಲ್ ಪ್ರತಿಪಾದಿಸಿದರು.

ಮಸೂದೆಗಳ ಕುರಿತು ನಿರ್ಧರಿಸಲು ರಾಷ್ಟ್ರಪತಿಗಳಿಗೆ ಸಮಯ ನಿಗದಿಪಡಿಸಿದ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ಬಗ್ಗೆ ನಿನ್ನೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಜಗದೀಪ್ ಧನಕರ್ ಅವರು, "ನ್ಯಾಯಾಲಯಗಳು ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ" ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ನಮ್ಮಲ್ಲಿ ಶಾಸನ ರಚಿಸುವ, ಕಾರ್ಯಕಾರಿ ಕಾರ್ಯಗಳನ್ನು ನಿರ್ವಹಿಸುವ, ಸೂಪರ್ ಪಾರ್ಲಿಮೆಂಟ್ ಆಗಿ ಕಾರ್ಯನಿರ್ವಹಿಸುವ ನ್ಯಾಯಾಧೀಶರೂ ಇದ್ದಾರೆ ಮತ್ತು ಅವರಿಗೆ ಯಾವುದೇ ಹೊಣೆಗಾರಿಕೆ ಇಲ್ಲ. ಏಕೆಂದರೆ ಈ ನೆಲದ ಕಾನೂನು ಅವರಿಗೆ ಅನ್ವಯಿಸುವುದಿಲ್ಲ" ಎಂದು ನ್ಯಾಯಾಂಗದ ವಿರುದ್ಧ ವಾಗ್ದಾಳಿ ನಡೆಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.