ದೇಶ

ಮಹಾರಾಷ್ಟ್ರ: MVA ಸೋಲಿಗೆ ರಾಹುಲ್ ಗಾಂಧಿಯ 'ಮೂರು ಪ್ರಮಾದ' ಕಾರಣ; INDIA ಮೈತ್ರಿಪಕ್ಷಗಳ ದೂಷಣೆ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಕೊನೆಗೊಳಿಸುತ್ತೇವೆ ಎಂಬ ಬಿಜೆಪಿ ದಾಳಿಗೆ ಕೌಂಟರ್ ಕೊಡಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ ಎಂದು ಮಿತ್ರಪಕ್ಷಗಳಲ್ಲಿ ಹಲವರು ಭಾವಿಸಿದ್ದಾರೆ.

ಮಹಾರಾಷ್ಟ್ರ: MVA ಸೋಲಿಗೆ ರಾಹುಲ್ ಗಾಂಧಿಯ 'ಮೂರು ಪ್ರಮಾದ' ಕಾರಣ; INDIA ಮೈತ್ರಿಪಕ್ಷಗಳ ದೂಷಣೆ
ರಾಹುಲ್ ಗಾಂಧಿ ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ (MVA) ಸೋಲು ವಿರೋಧ ಪಕ್ಷಗಳ INDIA ಮೈತ್ರಿಕೂಟದಲ್ಲಿ ಒಡಕಿಗೆ ಕಾರಣವಾಗುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದ ಸಭೆಯಲ್ಲಿ ಇದು ಸ್ಪಷ್ಟವಾಗಿ ಗೋಚರಿಸಿದೆ. ಈ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಪಾಲ್ಗೊಂಡಿರಲಿಲ್ಲ.

ಕೋಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ತಮ್ಮ ಪಕ್ಷದ ನಾಯಕರು ನಿರತರಾಗಿದ್ದರು ಎಂದು ಟಿಎಂಸಿ ಹೇಳಿದೆ. ಆದರೆ ಟಿಎಂಸಿಗೆ ಸಂಸತ್ತು ಅಧಿವೇಶನದ ಮೊದಲ ದಿನದ ಅರಿವಿತ್ತು ಮತ್ತು ಆದ್ದರಿಂದಲೇ ಅವರು ಗೈರು ಹಾಜರಾಗಿರುವುದಾಗಿ ತಿಳಿದುಬಂದಿದೆ.

ಪಶ್ಚಿಮ ಬಂಗಾಳದಲ್ಲಿ ಇತ್ತೀಚಿಗೆ ನಡೆದ ಉಪ ಚುನಾವಣೆಯಲ್ಲಿ ಎಲ್ಲಾ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಟಿಎಂಸಿ ಗೆದ್ದಿದೆ. ಬಿಜೆಪಿ ಹೊರತುಪಡಿಸಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷಗಳನ್ನು ಎದುರಿಸಿದ್ದೇವೆ. ಇಂಡಿಯಾ ಬಣದ ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಆದರೆ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು INDIA ಬಣದ ನಾಯಕಿಯಾಗಿ ಮಾಡಬೇಕೆಂಬ ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಅವರ ಹೇಳಿಕೆ ಗಂಭೀರವಾದ ತಿರುವು ಪಡೆದುಕೊಂಡಿದೆ.

ರಾಹುಲ್ ಗಾಂಧಿಯ ಪ್ರಮುಖ ಮೂರು ತಪ್ಪುಗಳು:

ವೀರ ಸಾವರ್ಕರ್ ವಿರುದ್ಧ ರಾಹುಲ್ ದಾಳಿ: ಇದು ಶಿವಸೇನಾ UBT ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಬಣದ ಮುಖ್ಯಸ್ಥ ಶರದ್ ಪವಾರ್ ಇಬ್ಬರಿಗೂ ಸಮಸ್ಯೆಯಾಗಿತ್ತು. ಇದು ಚುನಾವಣೆಯಲ್ಲಿ ತಮಗೆ ನೋವುಂಟು ಮಾಡಿದೆ ಎಂದು ಅವರು ಈಗ ಭಾವಿಸಿದ್ದಾರೆ. ' ಬಿಜೆಪಿಗೆ ಬಾಟೋಗೆ ತೋ ಕಟೋಗೆ ಘೋಷಣೆ ನೆರವಾಯಿತು. ಆದರೆ ರಾಹುಲ್ ಗಾಂಧಿ ಅದನ್ನು ಗಮನಿಸಲಿಲ್ಲ. ಅದರಿಂದ ಸಮಸ್ಯೆಯಾಗಬಹುದು ಎಂಬ ಎಚ್ಚರಿಕೆಯ ಹೊರತಾಗಿಯೂ ಸಾರ್ವಕರ್ ವಿರುದ್ಧ ದಾಳಿ ಮುಂದುವರೆಸಿದರು.

ಜಾತಿ ಸಮೀಕ್ಷೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಕೊನೆಗೊಳಿಸುತ್ತೇವೆ ಎಂಬ ಬಿಜೆಪಿ ದಾಳಿಗೆ ಕೌಂಟರ್ ಕೊಡಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ ಎಂದು ಮಿತ್ರಪಕ್ಷಗಳಲ್ಲಿ ಹಲವರು ಭಾವಿಸಿದ್ದಾರೆ. ಇದು ಚುನಾವಣೆ ನಡೆಯಲಿರುವ ಇತರ ರಾಜ್ಯಗಳಲ್ಲಿ ಮಿತ್ರಪಕ್ಷಗಳಾದ ಟಿಎಂಸಿ, ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಮೇಲೂ ಪರಿಣಾಮ ಬೀರಲಿದೆ.

ಪ್ರಧಾನಿ ಮೋದಿ ಕ್ರೋನಿ ಕ್ಯಾಪಿಟಲಿಸಂನಲ್ಲಿ ಭಾಗಿ ಕುರಿತ ದಾಳಿ: ಇದು ಕೆಲಸ ಮಾಡುವುದಿಲ್ಲ, ಇದನ್ನು ಹೆಚ್ಚಿಗೆ ಹೇಳಬೇಡಿ ಎಂದು ಅನೇಕ ಮೈತ್ರಿ ಪಕ್ಷಗಳ ನಾಯಕರು ಕೇಳಿಕೊಂಡರೂ ರಾಹುಲ್ ಕೇಳಿರಲಿಲ್ಲವಂತೆ. ಸಂವಿಧಾನ ಅಪಾಯದಲ್ಲಿದೆ ಎಂಬುದರ ವಿಚಾರದ ಕಡೆಗೆ ಗಮನಹರಿಸಿ ಪ್ರಚಾರ ನಡೆಸುವಂತೆ ಗಾಂಧಿ ಗುಂಪಿನ ಕೆಲವರು ಸಲಹೆ ನೀಡಿದ್ದರಂತೆ ಆದರೆ, ಆ ಎಲ್ಲಾ ಸಲಹೆಗಳನ್ನು ನಿರಾಕರಿಸಿ, ಕ್ರೋನಿ ಕ್ಯಾಪಿಟಲಿಸಂ ಬಗ್ಗೆ ಹೆಚ್ಚೆಚ್ಚು ಮಾತನಾಡುತ್ತಿದ್ದರಂತೆ.

ಅನೇಕರು ಇದನ್ನು ಮೊಂಡುತನ ಎಂದು ಭಾವಿಸಿದ್ದು, ಈ ಎಲ್ಲಾ ಕಾರಣಗಳಿಂದ ಮಹಾರಾಷ್ಟ್ರ ಚುನಾವಣೆಯಲ್ಲಿ ಸೋಲುವುದಕ್ಕೆ ಕಾರಣವಾಯಿತು ಎಂದು INDIA ಮೈತ್ರಿಪಕ್ಷಗಳ ನಾಯಕರು ದೋಷಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.