'ರಾಯ್‌ಬರೇಲಿಯಿಂದ ಸ್ಪರ್ಧಿಸಲು ರಾಹುಲ್ ಗಾಂಧಿ ತೀವ್ರ ಹೆದರಿದ್ದರು; SP ಇಲ್ಲದಿದ್ದರೇ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ'
ಒಂದು ಹಂತದಲ್ಲಿ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಡಲು ನಿರ್ಧರಿಸಿದ್ದರು. ಆದರೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಧೈರ್ಯ ತುಂಬಿ, ಸ್ಪರ್ಧಿಸದೇ ಇದ್ದರೆ ತಾವೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಎಚ್ಚರಿಸಿದ್ದರು.

ಲಕ್ನೋ: 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಮೇಥಿ ಕ್ಷೇತ್ರ ಬಿಟ್ಟು ರಾಯ್‌ಬರೇಲಿಯಿಂದ ಸ್ಪರ್ಧಿಸಲು ತೀವ್ರ ಹೆದರಿದ್ದರು ಎಂದು ಸಮಾಜವಾದಿ ಪಕ್ಷದ (SP) ಪ್ರತಾಪ್‌ಗಢ ಸಂಸದ ಶಿವಪಾಲ್ ಸಿಂಗ್ ಪಟೇಲ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಇರದಿದ್ದರೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.
ಒಂದು ಹಂತದಲ್ಲಿ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಡಲು ನಿರ್ಧರಿಸಿದ್ದರು. ಆದರೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಧೈರ್ಯ ತುಂಬಿ, ಸ್ಪರ್ಧಿಸದೇ ಇದ್ದರೆ ತಾವೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಎಚ್ಚರಿಸಿದ ಬಳಿಕವಷ್ಟೇ ರಾಹುಲ್ ಗಾಂಧಿ ರಾಯ್‌ಬರೇಲಿಯಿಂದ ಸ್ಪರ್ಧಿಸಲು ಒಪ್ಪಿಕೊಂಡರು ಎಂದು ಪಟೇಲ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಎಸ್‌ಪಿ ಕಾರ್ಯಕರ್ತರೆಲ್ಲರೂ ಕಾಂಗ್ರೆಸ್‌ಗೆ ಪೂರ್ಣ ಬೆಂಬಲ ನೀಡಿದ್ದರಿಂದಲೇ ಅವರು ಆರು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಮೈತ್ರಿ ಇಲ್ಲದೆ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದರೆ ಶೂನ್ಯಕ್ಕೆ ಕುಸಿಯಲಿದೆ ಎಂದು ಶಿವಪಾಲ್ ಸಿಂಗ್ ಹೇಳಿದ್ದಾರೆ. ಕಾಂಗ್ರೆಸ್‌ಗೆ ಸ್ಥಾನಗಳನ್ನು ಹಂಚಿಕೆ ಮಾಡಿದಲ್ಲೆಲ್ಲಾ, ಸಮಾಜವಾದಿ ಪಕ್ಷದ ಪ್ರತಿಯೊಂದು ಮತವೂ ಅವರಿಗೆ ಸಿಕ್ಕಿತು. ಹೀಗಾಗಿಯೇ ಅವರು ಆ ಆರು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು," ಎಂದು ಅವರು ಹೇಳಿದರು.
ನಾವು 37 ಸ್ಥಾನಗಳನ್ನು ಗೆದ್ದಿದ್ದೇವೆ. ನಾವು ಪ್ರತಿಯೊಂದು ವಿಷಯದಲ್ಲೂ ಕಾಂಗ್ರೆಸ್‌ಗಿಂತ ಬಹಳ ಮುಂದಿದ್ದೇವೆ. ಅವರು 50ಕ್ಕಿಂತ ಹೆಚ್ಚು ಸ್ಥಾನಗಳನ್ನು ಕೇಳಬಾರದು ಮತ್ತು (ಸಿಕ್ಕಿರುವುದಕ್ಕೆ) ಸಂತೋಷಪಡಬೇಕು. ಕಾಂಗ್ರೆಸ್ ರೀತಿಯ ಅಸಂಬದ್ಧ ಅಥವಾ ನಕಾರಾತ್ಮಕ ಹೇಳಿಕೆಗಳನ್ನು ನೀಡುವ ಬದಲು ಸಹಕರಿಸಬೇಕು ಎಂದು ಪಟೇಲ್ ತಿಳಿಸಿದ್ದಾರೆ.
ಇನ್ನೊಂದೆಡೆ ಶಿವಪಾಲ್ ಸಿಂಗ್ ಅವರ ಈ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂಡಿಯಾ ಮೈತ್ರಿಕೂಟದ ಬಲದಿಂದಲೇ ಸಂಸದರಾಗಿರುವ ಶಿವಪಾಲ್ ಸಿಂಗ್ ಪಟೇಲ್ ತಮ್ಮ ಮಿತಿಯಲ್ಲಿ ಮಾತನಾಡಬೇಕು ಮತ್ತು ಎಸ್‌ಪಿ ನಾಯಕತ್ವ ಇಂತಹ ಜವಾಬ್ದಾರಿರಹಿತ ಹೇಳಿಕೆ ನೀಡುವವರನ್ನು ನಿಯಂತ್ರಿಸಬೇಕು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಅಂಶು ಅವಸ್ಥಿ ತಿರುಗೇಟು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



