ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟ: ರಾಹುಲ್ ಗಾಂಧಿ ಮಧ್ಯಪ್ರವೇಶಕ್ಕೆ ಶಾಸಕ ಬಿ.ಆರ್ ಪಾಟೀಲ್ ಒತ್ತಾಯ; ಇದೇ ಕಾರಣ!
ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ "ರೈತ ವಿರೋಧಿ ಕಾನೂನುಗಳನ್ನು" ರದ್ದುಪಡಿಸಿ, ಭೂ ಸುಧಾರಣಾ ಕಾಯ್ದೆಯಡಿ ಇದ್ದ ರಕ್ಷಣಾತ್ಮಕ ಕ್ರಮಗಳನ್ನು ಮರುಸ್ಥಾಪಿಸುವುದಾಗಿ ಕಾಂಗ್ರೆಸ್ ತನ್ನ 2023ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು

ಬೆಂಗಳೂರು: ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಯೋಜನೆ ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕ ಬಿಆರ್ ಪಾಟೀಲ್ ಪತ್ರ ಬರೆದಿದ್ದು, ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. 2020ರಲ್ಲಿ ಹಿಂದಿನ ಬಿಜೆಪಿ ಸರ್ಕಾರ ರದ್ದುಪಡಿಸಿದ್ದ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 79A, 79B ಮತ್ತು 79C ಅನ್ನು ಮರುಸ್ಥಾಪಿಸುವಂತೆ ಆಗ್ರಹಿಸಿದ್ದಾರೆ.
ಸೆಪ್ಟೆಂಬರ್ 29ರಂದು ರಾಹುಲ್ ಗಾಂಧಿ ಅವರಿಗೆ ಇ-ಮೇಲ್ ಮತ್ತು ನೋಂದಾಯಿತ ಅಂಚೆ ಮೂಲಕ ಕಳುಹಿಸಿದ ಪತ್ರದಲ್ಲಿ, ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ "ರೈತ ವಿರೋಧಿ ಕಾನೂನುಗಳನ್ನು" ರದ್ದುಪಡಿಸಿ, ಭೂ ಸುಧಾರಣಾ ಕಾಯ್ದೆಯಡಿ ಇದ್ದ ರಕ್ಷಣಾತ್ಮಕ ಕ್ರಮಗಳನ್ನು ಮರುಸ್ಥಾಪಿಸುವುದಾಗಿ ಕಾಂಗ್ರೆಸ್ ತನ್ನ 2023ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು ಎಂದು ಪಾಟೀಲ್ ನೆನಪಿಸಿದ್ದಾರೆ.
ಆ ಮೂರು ನಿಬಂಧನೆಗಳನ್ನು ಮರುಸ್ಥಾಪಿಸುವ ಯಾವುದೇ ಪ್ರಸ್ತಾವನೆ ಸದ್ಯ ಸರ್ಕಾರದ ಮುಂದಿಲ್ಲ ಎಂದು ರಾಜ್ಯ ಕಂದಾಯ ಇಲಾಖೆಯು ಇತ್ತೀಚೆಗೆ ವಿಧಾನಸಭೆಯಲ್ಲಿ ಅಧಿಕೃತವಾಗಿ ತಿಳಿಸಿದೆ ಎಂದು ಪಾಟೀಲ್ ಹೇಳಿದ್ದಾರೆ.
ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಕೃಷಿ ಭೂಮಿ ವರ್ಗಾವಣೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, 2021 ಮತ್ತು ಆಗಸ್ಟ್ 2026ರ ನಡುವೆ ಕರ್ನಾಟಕದಲ್ಲಿ ಸುಮಾರು 19.92 ಲಕ್ಷ ಎಕರೆ ಕೃಷಿ ಭೂಮಿ ಮಾರಾಟ ಮತ್ತು ವರ್ಗಾವಣೆಯಾಗಿದೆ ಎಂದು ತಿಳಿಸಿದ್ದಾರೆ.
ಪಾಟೀಲ್ ಉಲ್ಲೇಖಿಸಿದ ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ ಮಾರಾಟವಾದ ಕೃಷಿ ಭೂಮಿಯಲ್ಲಿ ಉತ್ತರ ಕರ್ನಾಟಕದ ಪಾಲು ಸುಮಾರು ಶೇ. 60ರಷ್ಟಿದೆ. ವಿಜಯಪುರ ಜಿಲ್ಲೆಯು 2.04 ಲಕ್ಷ ಎಕರೆಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಕಲಬುರಗಿ (1.81 ಲಕ್ಷ ಎಕರೆ), ಬೆಳಗಾವಿ (1.31 ಲಕ್ಷ ಎಕರೆ), ರಾಯಚೂರು (1.19 ಲಕ್ಷ ಎಕರೆ) ಮತ್ತು ತುಮಕೂರು (1.01 ಲಕ್ಷ ಎಕರೆ) ಜಿಲ್ಲೆಗಳಿವೆ.
ನಿರ್ಬಂಧಗಳನ್ನು ತೆಗೆದುಹಾಕುವುದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರು, ಭೂಮಾಲೀಕತ್ವವನ್ನು ಕಳೆದುಕೊಳ್ಳುವ ಪ್ರಕ್ರಿಯೆ ವೇಗಗೊಳ್ಳಬಹುದು ಎಂದು ಪಾಟೀಲ್ ಹೇಳಿದ್ದಾರೆ. ಅಂತಹ ರೈತರು ಅಂತಿಮವಾಗಿ ಭೂಹೀನ ಕೃಷಿ ಕಾರ್ಮಿಕರಾಗುವ ಪರಿಸ್ಥಿತಿ ಎದುರಾಗಬಹುದು. ಅಲ್ಲದೆ, ಬೃಹತ್ ಪ್ರಮಾಣದ ಭೂಮಿ ವರ್ಗಾವಣೆ ಮತ್ತು ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತನೆಯು ಕರ್ನಾಟಕದ ದೀರ್ಘಕಾಲೀನ ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದ್ದಾರೆ.
"ಉಳುವವನೇ ಭೂಮಿಯ ಒಡೆಯ" ಎಂಬ ತತ್ವದ ಆಧಾರದ ಮೇಲೆ ಭೂ ಸುಧಾರಣಾ ಕಾಯ್ದೆಯನ್ನು ರೂಪಿಸುವಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಪಾತ್ರವನ್ನು ಸ್ಮರಿಸಿರುವಪಾಟೀಲ್, ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ಮತ್ತು ರಾಜ್ಯ ಸರ್ಕಾರವು ಈ ವಿಷಯವನ್ನು ತಕ್ಷಣವೇ ಪರಿಶೀಲಿಸಬೇಕು; ಖರೀದಿದಾರರ ವಿವರಗಳೂ ಸೇರಿದಂತೆ ಭೂಮಿ ವರ್ಗಾವಣೆಯ ವ್ಯಾಪ್ತಿ ಮತ್ತು ಸ್ವರೂಪದ ಬಗ್ಗೆ ಸಮಗ್ರ ಮೌಲ್ಯಮಾಪನ ನಡೆಸಬೇಕು ಹಾಗೂ ಸೂಕ್ತ ರಕ್ಷಣಾತ್ಮಕ ಕ್ರಮಗಳೊಂದಿಗೆ 79A, 79B ಮತ್ತು 79C ವಿಭಾಗಗಳನ್ನು ಮರುಸ್ಥಾಪಿಸಲು ಶಾಸನಬದ್ಧ ಕಾರ್ಯಯೋಜನೆಯನ್ನು ರೂಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಣಾಳಿಕೆ ಭರವಸೆಗಳನ್ನು ಈಡೇರಿಸದೆ ಸರ್ಕಾರ ಮರೆತಿದೆ: ಸ್ವಪಕ್ಷ ವಿರುದ್ಧವೇ ಹಿರಿಯ ಶಾಸಕ ಬಿ.ಆರ್ ಪಾಟೀಲ್ ಗರಂ
ಕರ್ನಾಟಕದ ರೈತ ಸಮುದಾಯವನ್ನು ರಕ್ಷಿಸಲು ಕಾಂಗ್ರೆಸ್ ಬದ್ಧವಾಗಿರಬೇಕು ಮತ್ತು 2023ರ ಚುನಾವಣಾ ಭರವಸೆಯನ್ನು ಈಡೇರಿಸಬೇಕು ಎಂದು ಪಾಟೀಲ್ ಪ್ರತಿಪಾದಿಸಿದ್ದು, ಈ ವಿಷಯದ ಬಗ್ಗೆ ವೈಯಕ್ತಿಕ ಗಮನಹರಿಸುವಂತೆ ರಾಹುಲ್ ಗಾಂಧಿ ಅವರನ್ನು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


