ದೇಶ

ಬರ ನಿರ್ವಹಣೆಗೆ ಕೇಂದ್ರದಿಂದ ಬಾರದ ಆರ್ಥಿಕ ನೆರವು: ಜುಲೈನಲ್ಲಿ ಕರ್ನಾಟಕದ ಅರ್ಜಿ ವಿಚಾರಣೆ- ಸುಪ್ರೀಂ ಕೋರ್ಟ್

ಬರ ನಿರ್ವಹಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್ ಡಿಆರ್ ಎಫ್) ನಿಂದ ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜುಲೈನಲ್ಲಿ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.

ಬರ ನಿರ್ವಹಣೆಗೆ ಕೇಂದ್ರದಿಂದ ಬಾರದ ಆರ್ಥಿಕ ನೆರವು: ಜುಲೈನಲ್ಲಿ ಕರ್ನಾಟಕದ ಅರ್ಜಿ ವಿಚಾರಣೆ- ಸುಪ್ರೀಂ ಕೋರ್ಟ್
ಸುಪ್ರೀಂಕೋರ್ಟ್ ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಬರ ನಿರ್ವಹಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್ ಡಿಆರ್ ಎಫ್) ನಿಂದ ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜುಲೈನಲ್ಲಿ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಸೋಮವಾರ ತಿಳಿಸಿದೆ. ಬರ ನಿರ್ವಹಣೆಗಾಗಿ ಕರ್ನಾಟಕ ಸರ್ಕಾರಕ್ಕೆ ಸುಮಾರು ರೂ. 3,400 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಏಪ್ರಿಲ್ 29 ರಂದು ಉನ್ನತ ನ್ಯಾಯಾಲಯಕ್ಕೆ ಹೇಳಿತ್ತು.

ಇಂದು ಈ ವಿಚಾರ ಕೈಗೆತ್ತಿಕೊಂಡ ನ್ಯಾಯಾಧೀಶರಾದ ಬಿಆರ್ ಗವಾಯಿ ಹಾಗೂ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಕರ್ನಾಟಕದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಈ ವಿಚಾರದಲ್ಲಿ ಸರ್ಕಾರ ಅಫಿಡವಿಟ್ ಸಲ್ಲಿಸಲಿದೆ ಎಂದು ಹೇಳಿದರು. ನ್ಯಾಯಪೀಠ ವಿಚಾರಣೆಯನ್ನು ಜುಲೈಗೆ ಮುಂದೂಡಿತು. ಕಳೆದ ವಾರ ನಡೆದ ವಿಚಾರಣೆ ಸಂದರ್ಭದಲ್ಲಿ ಕರ್ನಾಟಕಕ್ಕೆ ರೂ. 3,450 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರ ರೂ. 18,000 ಕೋಟಿ ರೂ. ಬಿಡುಗಡೆಗೆ ಮನವಿ ಮಾಡಿರುವುದಾಗಿ ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ಹೇಳಿದರು.

ಎನ್‌ಡಿಆರ್‌ಎಫ್ ಪ್ರಕಾರ ಬರ ಪರಿಹಾರಕ್ಕೆ ಹಣಕಾಸು ನೆರವು ಬಿಡುಗಡೆ ಮಾಡದಿರುವ ಕೇಂದ್ರದ ಕ್ರಮವು ಸಂವಿಧಾನದ 14 ಮತ್ತು 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿದ ರಾಜ್ಯದ ಜನರ ಮೂಲಭೂತ ಹಕ್ಕುಗಳ "ಪೂರ್ವಭಾವಿ ಉಲ್ಲಂಘನೆ" ಎಂದು ಘೋಷಿಸಲು ಅರ್ಜಿಯಲ್ಲಿ ಕೋರಲಾಗಿದೆ.

ರಾಜ್ಯ ತೀವ್ರ ಬರದಲ್ಲಿ ತತ್ತರಿಸುತ್ತಿದ್ದು, ಜನರ ಜೀವನ ಮತ್ತು 2023ರ ಮುಂಗಾರಿನ ಮೇಲೆ ಪರಿಣಾಮ ಬೀರಿದೆ. ಜೂನ್ ನಲ್ಲಿ ಆರಂಭವಾಗುವ ಮುಂಗಾರು, ಸೆಪ್ಟೆಂಬರ್ ನಲ್ಲಿ ಕೊನೆಯಾಗಿದ್ದು, ಒಟ್ಟಾರೇ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. 196 ತಾಲ್ಲೂಕುಗಳನ್ನು ತೀವ್ರ ಪೀಡಿತ ಮತ್ತು ಉಳಿದ 27 ಮಧ್ಯಮ ಪೀಡಿತ ಎಂದು ವರ್ಗೀಕರಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

2023ರ ಮುಂಗಾರು ಹಂಗಾಮಿಗೆ ಒಟ್ಟಾರೆಯಾಗಿ 48 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟವಾಗಿದ್ದು, ಅಂದಾಜು 35,162 ಕೋಟಿ ರೂಪಾಯಿ ನಷ್ಟ (ಕೃಷಿ ವೆಚ್ಚ) ಆಗಿದೆ ಎಂದು ವಕೀಲ ಡಿ ಎಲ್ ಚಿದಾನಂದ ಸಲ್ಲಿಸಿದ ಅರ್ಜಿಯಲ್ಲಿ ಹೇಳಲಾಗಿದೆ. ಎನ್‌ಡಿಆರ್‌ಎಫ್ ಯಡಿ ಕೇಂದ್ರದಿಂದ ರೂ. 18,171.44 ಕೋಟಿ ನೆರವು ಕೋರಲಾಗಿದೆ ಎಂದು ಅದು ಹೇಳಿದೆ.

ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು 2020 ರಲ್ಲಿ ನವೀಕರಿಸಿದ ಬರ ನಿರ್ವಹಣೆಯ ಕೈಪಿಡಿಯಡಿ ಕರ್ನಾಟಕಕ್ಕೆ ಬರ ನಿರ್ವಹಣೆಗೆ ಹಣಕಾಸಿನ ನೆರವು ನಿರಾಕರಿಸುವ ಕೇಂದ್ರದ "ನಿರಂಕುಶ ಕ್ರಮಗಳ" ವಿರುದ್ಧ ರಾಜ್ಯವು ಸುಪ್ರೀಂ ಕೋರ್ಟ್‌ಗೆ ಹೋಗಲು ಒತ್ತಾಯಿಸಲಾಗಿದೆ. ಇದಲ್ಲದೆ, ಕೇಂದ್ರ ಸರ್ಕಾರದ ಆಕ್ಷೇಪಾರ್ಹ ಕ್ರಮವು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಶಾಸನಬದ್ಧ ಯೋಜನೆ, ಬರ ನಿರ್ವಹಣೆಯ ಕೈಪಿಡಿ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯ ಸಂವಿಧಾನ ಮತ್ತು ಆಡಳಿತದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.