'ಸುಧಾರಣೆ, ಸಾಧನೆ ಮತ್ತು ಪರಿವರ್ತನೆ': ಕಳೆದ ಐದು ವರ್ಷಗಳಲ್ಲಿ ದೇಶ ದೊಡ್ಡ ಬದಲಾವಣೆ ಕಂಡಿದೆ- ಪ್ರಧಾನಿ ಮೋದಿ
17ನೇ ಲೋಕಸಭೆಯ ಐದು ವರ್ಷಗಳು 'ಸುಧಾರಣೆ, ಸಾಧನೆ ಮತ್ತು ಪರಿವರ್ತನೆ'ಯ ಅವಧಿಯಾಗಿದ್ದು, ದೇಶ "ದೊಡ್ಡ ಬದಲಾವಣೆಯ" ವೇಗದಲ್ಲಿ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.

ನವದೆಹಲಿ: 17ನೇ ಲೋಕಸಭೆಯ ಐದು ವರ್ಷಗಳು 'ಸುಧಾರಣೆ, ಸಾಧನೆ ಮತ್ತು ಪರಿವರ್ತನೆ'ಯ ಅವಧಿಯಾಗಿದ್ದು, ದೇಶ "ದೊಡ್ಡ ಬದಲಾವಣೆಯ" ವೇಗದಲ್ಲಿ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಸಂಸತ್ ಬಜೆಟ್ ಅಧಿವೇಶಕ್ಕೆ ಇಂದು ತೆರೆ ಬಿದ್ದಿದ್ದು, 17ನೇ ಲೋಕಸಭೆ ಅಧಿವೇಶನದ ಕೊನೆಯ ಕಲಾಪವನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ ಐದು ವರ್ಷಗಳಲ್ಲಿ ದೇಶ ದೊಡ್ಡ ಬದಲಾವಣೆ ಕಂಡಿದೆ. ಈ ಲೋಕಸಭೆಯು ಕೋವಿಡ್‌ನ ಸವಾಲನ್ನು ಎದುರಿಸಿ ಹೊಸ ರೀತಿಯಲ್ಲಿ ಕೆಲಸ ಮಾಡಿದೆ ಎಂದು ಹೇಳಿದರು.
"ದೇಶವು ತ್ವರಿತ ಗತಿಯಲ್ಲಿ ದೊಡ್ಡ ಬದಲಾವಣೆಗಳತ್ತ ಸಾಗಿದೆ ಮತ್ತು ಸದನದ ಎಲ್ಲಾ ಸದಸ್ಯರು ಮಹತ್ವದ ಕೊಡುಗೆ ನೀಡಿದ್ದಾರೆ. ಜನರು ಶತಮಾನಗಳಿಂದ ಕಾಯುತ್ತಿದ್ದ ಮಹತ್ವದ ಕೆಲಸಗಳು ಪೂರ್ಣಗೊಂಡಿವೆ" ಎಂದು ಲೋಕಸಭೆ ಚುನಾವಣೆಗೆ ಮುನ್ನ ನಡೆದ ಕೊನೆಯ ಅಧಿವೇಶನದಲ್ಲಿ ಪ್ರಧಾನಿ ಹೇಳಿದರು.
ಜನ ತಲೆಮಾರುಗಳಿಂದ ಒಂದೇ ಸಂವಿಧಾನದ ಕನಸು ಕಂಡಿದ್ದರು. ಆದರೆ ಈ ಸದನವು 370ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಅದನ್ನು ಸಾಧ್ಯವಾಗಿಸಿದೆ. 17ನೇ ಲೋಕಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೋದಿ ತಿಳಿಸಿದರು.
ಹಲವಾರು ಸವಾಲುಗಳನ್ನು ಎದುರಿಸಿ ದೇಶಕ್ಕೆ ಸೂಕ್ತ ನಿರ್ದೇಶನ ನೀಡಲಾಗಿದೆ. ಈ ಐದು ವರ್ಷಗಳು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯಾಗಿದೆ. ನಾವು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯನ್ನು ನೋಡುವುದು ಅಪರೂಪ. ದೇಶವು 17ನೇ ಲೋಕಸಭೆಯನ್ನು ಆಶೀರ್ವದಿಸುತ್ತಲೇ ಇರುತ್ತದೆ" ಎಂದು ಪ್ರಧಾನಿ ಹೇಳಿದರು.
17ನೇ ಲೋಕಸಭೆಯ ಕೊನೆಯ ಅಧಿವೇಶನದಲ್ಲಿ ಎಲ್ಲರಿಗೂ, ವಿಶೇಷವಾಗಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ, "ಏನೇ ಸಂಭವಿಸಿದರೂ ನಿಮ್ಮ ಮುಖದಲ್ಲಿ ಯಾವಾಗಲೂ ನಗು ಇರುತ್ತಿತ್ತು. ನೀವು ನಿಷ್ಪಕ್ಷಪಾತವಾಗಿ ಈ ಸದನವನ್ನು ಮುನ್ನಡೆಸಿದ್ದೀರಿ ಮತ್ತು ಅದಕ್ಕಾಗಿ ನಾನು ನಿಮ್ಮನ್ನು ಶ್ಲಾಘಿಸುತ್ತೇನೆ. ಕೋಪ ಮತ್ತು ಆರೋಪಗಳ ಸಂದರ್ಭಗಳು ಇದ್ದವು. ಆದರೆ ನೀವು ಈ ಸಂದರ್ಭಗಳನ್ನು ತಾಳ್ಮೆಯಿಂದ ನಿಭಾಯಿಸಿದ್ದೀರಿ ಮತ್ತು ಬುದ್ಧಿವಂತಿಕೆಯಿಂದ ಕಲಾಪವನ್ನು ನಡೆಸಿದ್ದೀರಿ" ಎಂದು ಬಿರ್ಲಾ ಅವರನ್ನು ಅಭಿನಂದಿಸಿದರು.
ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ ಮೋದಿ, 370ನೇ ವಿಧಿಯನ್ನು ರದ್ದುಗೊಳಿಸಿರುವುದು, ತ್ರಿವಳಿ ತಲಾಖ್ ಮಸೂದೆಯ ಅಂಗೀಕಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಮಹಿಳಾ ಮೀಸಲಾತಿ ಮಸೂದೆಯೊಂದಿಗೆ ಹೊಸ ಸಂಸತ್ ಕಟ್ಟಡ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಮುಂಬರುವ 25 ವರ್ಷಗಳು ದೇಶಕ್ಕೆ ಬಹಳ ನಿರ್ಣಾಯಕವಾಗಿದೆ, ಒಂದು ಕಡೆ, ರಾಜಕೀಯ ಆಕಾಂಕ್ಷೆಗಳಿವೆ, ಮತ್ತೊಂದೆಡೆ ದೇಶಕ್ಕಾಗಿ ಕನಸುಗಳಿವೆ. ಮುಂದಿನ 25 ವರ್ಷಗಳಲ್ಲಿ ಭಾರತವು ‘ವಿಕಸಿತ್ ಭಾರತ’ ಆಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


