‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರಸಾರ ಮಾಡದಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸೂಚನೆ
ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ದೂರದರ್ಶನದಲ್ಲಿ ಪ್ರಸಾರ ಮಾಡುವ ನಿರ್ಧಾರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡಿಸಿದ್ದು, ವಿವಾದಾತ್ಮಕ ಸಿನಿಮಾ ಪ್ರದರ್ಶನ ಮಾಡದಂತೆ ಸೂಚಿಸಿದ್ದಾರೆ.

ತಿರುವನಂತಪುರಂ: ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ದೂರದರ್ಶನದಲ್ಲಿ ಪ್ರಸಾರ ಮಾಡುವ ನಿರ್ಧಾರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡಿಸಿದ್ದು, ವಿವಾದಾತ್ಮಕ ಸಿನಿಮಾ ಪ್ರದರ್ಶನ ಮಾಡದಂತೆ ಸೂಚಿಸಿದ್ದಾರೆ.
ಲೋಕಸಭೆ ಚುನಾವಣೆ ನಡೆಯಲಿರುವ ಈ ಸಮಯದಲ್ಲಿ ಈ ಸಿನಿಮಾ ಪ್ರದರ್ಶನವು ಕೋಮು ಉದ್ವಿಗ್ನತೆಯನ್ನು ಉಲ್ಬಣಗೊಳಿಸುತ್ತದೆ. ಬಿಜೆಪಿ ಮತ್ತು ಆರ್ಎಸ್ಎಸ್ಗೆ ಪ್ರಚಾರ ಯಂತ್ರ ಆಗಬೇಡಿ. ಕೂಡಲೇ ಈ ಸಿನಿಮಾ ಪ್ರಸಾರದ ನಿರ್ಧಾರವನ್ನು ಹಿಂಪಡೆಯಿರಿ ಎಂದು ಅವರು ದೂರದರ್ಶನದ ರಾಷ್ಟ್ರೀಯ ಪ್ರಸಾರಕರನ್ನು ಕೇಳಿಕೊಂಡಿದ್ದಾರೆ.
'ಧ್ರುವೀಕರಣವನ್ನು ಪ್ರಚೋದಿಸುವ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರಸಾರ ಮಾಡುವ ಡಿಡಿ ನ್ಯಾಷನಲ್ನ ನಿರ್ಧಾರವು ಅತ್ಯಂತ ಖಂಡನೀಯವಾಗಿದೆ. ಲೋಕಸಭೆ ಚುನಾವಣೆಗೆ ಮುನ್ನ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸುವ ಇಂತಹ ಸಿನಿಮಾ ಪ್ರದರ್ಶನದ ನಿರ್ಧಾರದಿಂದ ಕೂಡಲೇ ಹಿಂದೆ ಸರಿಯಬೇಕು. ದ್ವೇಷ ಬಿತ್ತುವ ಇಂತಹ ದುರುದ್ದೇಶಪೂರಿತ ಪ್ರಯತ್ನಗಳನ್ನು ವಿರೋಧಿಸುವಲ್ಲಿ ಕೇರಳ ದೃಢವಾಗಿ ಉಳಿಯುತ್ತದೆ' ಎಂದು ಪಿಣರಾಯಿ ವಿಜಯನ್ ಅವರು ಎಕ್ಸ್ನಲ್ಲಿ ಬರೆದಿದ್ದಾರೆ.
ಏಪ್ರಿಲ್ 5 ರಂದು ದಿ ಕೇರಳ ಸ್ಟೋರಿ ಸಿನಿಮಾ ಪ್ರಸಾರವಾಗಲಿದೆ ಎಂದು ದೂರದರ್ಶನ ಪ್ರಕಟಿಸಿದೆ.
ಆಡಳಿತಾರೂಢ ಸಿಪಿಐ(ಎಂ) ಸಹ ಸಿನಿಮಾ ಪ್ರಸಾರ ಮಾಡುವ ನಿರ್ಧಾರದಿಂದ ಹಿಂದೆ ಸರಿಯುವಂತೆ ದೂರದರ್ಶನಕ್ಕೆ ಸೂಚಿಸಿದೆ. ಜಾತ್ಯತೀತ ಕೇರಳ ಸಮಾಜವನ್ನು ಧ್ರುವೀಕರಿಸುವ ಬಿಜೆಪಿಯ ಪ್ರಯತ್ನದೊಂದಿಗೆ ನಿಲ್ಲದಂತೆ ಪಕ್ಷವು ಕೇಳಿಕೊಂಡಿದೆ.
ಕೇರಳ ಸಮಾಜದಲ್ಲಿ ಕೇಸರಿ ಪಕ್ಷಕ್ಕೆ ಕಾಲಿಡಲು ಸಾಧ್ಯವಾಗದ ಕಾರಣ ತಮ್ಮ ರಾಜಕೀಯ ಅಜೆಂಡಾವನ್ನು ಮುನ್ನಡೆಸುವ ಆಶಯದೊಂದಿಗೆ ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ ವಿವಾದಾತ್ಮಕ ಸಿನಿಮಾ ಪ್ರದರ್ಶಿಸಲು ಬಿಜೆಪಿ ನಿರ್ಧರಿಸಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಆರೋಪಿಸಿದ್ದಾರೆ.
'ಇದು ಕೇರಳಕ್ಕೆ ಸವಾಲೆಸೆದಂತಿದೆ. ಸಿನಿಮಾ ಬಿಡುಗಡೆಯಾದಾಗ ಕೇರಳದಲ್ಲಿ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಸೆನ್ಸಾರ್ ಮಂಡಳಿಯೇ ಚಲನಚಿತ್ರದಿಂದ 10 ದೃಶ್ಯಗಳನ್ನು ತೆಗೆದುಹಾಕಿದೆ. ಸಾರ್ವಜನಿಕ ವಲಯದ ಪ್ರಸಾರ ಸೇವೆಯು ಜಾತ್ಯತೀತ ಕೇರಳ ಸಮಾಜವನ್ನು ಧ್ರುವೀಕರಿಸುವ ಬಿಜೆಪಿಯ ಪ್ರಯತ್ನದೊಂದಿಗೆ ನಿಲ್ಲಬಾರದು' ಎಂದು ಸಿಪಿಐ(ಎಂ) ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




