ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟ ಹಿಂಸಾಚಾರ ಸ್ವರೂಪ: ಕರ್ನಾಟಕದ ಬಸ್‌ಗೆ ಬೆಂಕಿ, ಸಂಚಾರ ಸ್ಥಗಿತ
ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟ ಹಿಂಸಾಚಾರ ಸ್ವರೂಪ ಪಡೆದುಕೊಂಡಿದ್ದು, ಕರ್ನಾಟಕಕ್ಕೆ ಸೇರಿದ ಕೆಕೆಆರ್‌ಟಿಸಿ ಬಸ್ಸಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಹೊರಡುವ ರಾಜ್ಯದ ಅಂತರಾಜ್ಯ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬೆಂಗಳೂರು: ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟ ಹಿಂಸಾಚಾರ ಸ್ವರೂಪ ಪಡೆದುಕೊಂಡಿದ್ದು, ಕರ್ನಾಟಕಕ್ಕೆ ಸೇರಿದ ಕೆಕೆಆರ್‌ಟಿಸಿ ಬಸ್ಸಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಹೊರಡುವ ರಾಜ್ಯದ ಅಂತರಾಜ್ಯ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಮೀಸಲಾತಿ ಸಂಬಂಧ ಹೋರಾಟ ನಡೆಯುತ್ತಿದ್ದು, ಸೋಮವಾರ ಕಾರ್ಯಾಚರಣೆಯಲ್ಲಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಕೆಕೆಆರ್‌ಟಿಸಿ ಬಸ್ಸಿಗೆ ಬೆಂಕಿ ಹಚ್ಚಿದ ಪರಿಣಾಮ ಅಂತರ ರಾಜ್ಯ ಬಸ್ ಕಾರ್ಯಾಚರಣೆಯನ್ನು ತಾತ್ಮಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅವರು ಹೇಳಿದ್ದಾರೆ.
ಸೋಮವಾರ ಬೀದರ್ ಜಿಲ್ಲೆಯ ಭಾಲ್ಕಿಯಿಂದ ಪುಣೆಗೆ ಹೊರಟಿದ್ದ ಬಸ್ ಗೆ (ಸಂಖ್ಯೆ ಕೆ.ಎ-38 ಎಫ್-1201 ) ಮಹಾರಾಷ್ಟ್ರದ ಉಮರ್ಗಾ ಬಳಿಯ ತರುರಿ ಗ್ರಾಮದಲ್ಲಿ ಪ್ರತಿಭಟನಾಕಾರರು ಬಸ್ ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ.
ಈ ಹಿನ್ನೆಲೆಯಲ್ಲಿ ತುಳಜಾಪುರ ಯಾತ್ರೆ ಸೇರಿದಂತೆ ಮಹಾರಾಷ್ಟ್ರಕ್ಕೆ ಅಂತರಾಜ್ಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಳಿಕ ಸ್ಥಳೀಯ ಪೊಲೀಸರ ನೆರವಿನಿಂದ ಬಸ್ ನಲ್ಲಿದ್ದ 39 ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ತಲುಪುವ ಸ್ಥಳಕ್ಕೆ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆಯಲ್ಲಿರುವ ಬಸ್ ಗಳನ್ನು ಹತ್ತಿರ ಪೊಲೀಸ್ ಠಾಣೆ, ಬಸ್ ಡಿಪೋ ಗಳಲ್ಲಿ ಪಾರ್ಕ್ ಮಾಡಲು ಸಂಸ್ಥೆ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮರಾಠ ಮೀಸಲಾತಿಗೆ ಒತ್ತಾಯಿಸಿ ಕಳೆದ ಆಗಸ್ಟ್ ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಕ್ಟೋಬರ್ 25ರಂದು ಜಲ್ನಾ ಜಿಲ್ಲೆಯ ಅಂತರವಾಲಿ ಸಾರತಿ ಗ್ರಾಮದಲ್ಲಿ ಅನಿರ್ದಿಷ್ಟವಾಧಿ ಉಪವಾಸ ಸತ್ಯಾಗ್ರಹ ಆರಂಭಗೊಂಡಿತ್ತು. ಇದರಿಂದಾಗಿ ಮತ್ತೆ ರಾಜ್ಯಾದ್ಯಂತ ಮರಾಠ ಮೀಸಲಾತಿ ಹೋರಾಟ ತೀವ್ರಗೊಂಡಿದೆ. ಇದೀಗ ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಶಾಸಕರ ಮನೆ ಮೇಲೆ ಕಲ್ಲು ತೂರಾಟ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗೆ ಪ್ರತಿಭಟನಾಕಾರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೀಸಲಾತಿಗಾಗಿ ಆಗ್ರಹಿಸಿ ಹೋರಾಟಗಾರ ಮನೋಜ್ ಜಾರಂ ಇಲ್ಲಿನ ಮುಂಬೈನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ಇವರ ಉಪವಾಸ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿಟ್ಟಿದೆ.
ಇನ್ನು ಪ್ರತಿಭಟನೆ ಹಿಂಸಾಚಾರ ಸ್ವರೂಪ ಪಡೆದುಕೊಂಡಿದ್ದು, ಬೀಡ್ ಜಿಲ್ಲೆಯಲ್ಲಿ ಮೂವರು ಶಾಸಕರ ಮನೆ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಇಬ್ಬರು ಎನ್ಸಿಪಿ ಶಾಸಕರ ಮನೆ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು, ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ದಾರೆ.
ಎನ್ಸಿಪಿ ಅಜಿತ್ ಪವಾರ್ ಬಣದ ಶಾಸಕ ಪ್ರಕಾಶ್ ಸೋಲಂಕೆ ಅವರ ಮನೆ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಜೊತೆಗೆ ಶಾಸಕ ಅಮರ್ ಸಿಂಗ್ ಪಂಡಿತ್ ಮನೆ ಮುಂದೆ ಜಮಾಯಿಸಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈ ನಡುವೆ ಮರಾಠ ಮೀಸಲಾತಿಗೆ ಒತ್ತಾಯಿಸಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಲ್ನಾದ ಕಚ್ರೇವಾಡಿ ಎಂಬಲ್ಲಿ ನಡೆದಿದೆ.
ಮೃತ ಯುವಕನನ್ನು ಸೋಪನ್ ಬಾಬುರಾವ್ ಕಚ್ರೆ (30) ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿನ ಬಾವಿಗೆ ಹಾರಿ ಸೊಪನ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


