ದೇಶ

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಾನೂನು, ಉಚಿತ ವಿದ್ಯುತ್ ಪೂರೈಕೆ: ಅರವಿಂದ ಕೇಜ್ರಿವಾಲ್ ಭರವಸೆ

ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದಿದ್ದೇ ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಕಾನೂನನ್ನು ಜಾರಿಗೆ ತರಲಾಗುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವಲ್ಲಿ ಭಾಗಿಯಾಗುವವರಿಗೆ ಎಎಪಿ ಕಾನೂನಿನ ಮೂಲಕ ಶಿಕ್ಷೆ ನೀಡುತ್ತದೆ ಮತ್ತು ರಾಜ್ಯದ ಎಲ್ಲಾ ಯುವಕರಿಗೆ ಉದ್ಯೋಗ ನೀಡಲಾಗುತ್ತದೆ ಎಂದು ಭಾನುವಾರ ತಿಳಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಾನೂನು, ಉಚಿತ ವಿದ್ಯುತ್ ಪೂರೈಕೆ: ಅರವಿಂದ ಕೇಜ್ರಿವಾಲ್ ಭರವಸೆ
ಅರವಿಂದ ಕೇಜ್ರಿವಾಲ್
Published On :

ಅಹಮದಾಬಾದ್: ಪ್ರತಿಯೊಬ್ಬರಿಗೂ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಇದೇ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದಿದ್ದೇ ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಕಾನೂನನ್ನು ಜಾರಿಗೆ ತರಲಾಗುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವಲ್ಲಿ ಭಾಗಿಯಾಗುವವರಿಗೆ ಎಎಪಿ ಕಾನೂನಿನ ಮೂಲಕ ಶಿಕ್ಷೆ ನೀಡುತ್ತದೆ ಮತ್ತು ರಾಜ್ಯದ ಎಲ್ಲಾ ಯುವಕರಿಗೆ ಉದ್ಯೋಗ ನೀಡಲಾಗುತ್ತದೆ ಎಂದು ಭಾನುವಾರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪಕ್ಷವು ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಯುವಕರಿಗೆ 10 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತದೆ. ಪ್ರತಿಯೊಬ್ಬರಿಗೂ ಕೆಲಸ ಸಿಗುವವರೆಗೆ, ರಾಜ್ಯದಲ್ಲಿನ ನಿರುದ್ಯೋಗಿಗಳಿಗೆ ತಿಂಗಳಿಗೆ 3 ಸಾವಿರವನ್ನು ನೀಡಲಾಗುತ್ತದೆ. ಸದ್ಯ ಉದ್ಯೋಗಗಳು ಸಹಕಾರಿ ಕ್ಷೇತ್ರದಲ್ಲಿದ್ದು, ಅವುಗಳನ್ನು ಸಂಬಂಧಿಕರಿಗೆ ನೀಡಲಾಗುತ್ತಿದೆ. ಇದನ್ನು ಬದಲಿಸಲಾಗುತ್ತದೆ ಮತ್ತು ನೇಮಕಾತಿಯು ಪಾರದರ್ಶಕವಾಗಿ ನಡೆಯುತ್ತದೆ' ಎಂದು ತಿಳಿಸಿದರು.

ಮೊದಲ ಭರವಸೆಯಾಗಿ ರಾಜ್ಯದಲ್ಲಿ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿದ ಅವರು, 'ಗುಜರಾತ್‌ನಲ್ಲಿ ಹೆಚ್ಚಿನ ವಿದ್ಯುತ್ ಬಿಲ್‌ಗಳಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾವೀಗ ದೆಹಲಿಯಲ್ಲಿ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ಪಂಜಾಬ್‌ನಲ್ಲಿ 25 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಪಂಜಾಬ್‌ನಲ್ಲಿ 51 ಲಕ್ಷ ಮನೆಗಳು ಉಚಿತ ವಿದ್ಯುತ್ ಸಂಪರ್ಕವನ್ನು ಪಡೆಯಲಿವೆ. ಅದರಂತೆ ಗುಜರಾತ್‌ನಲ್ಲಿ ದಿನದ 24 ಗಂಟೆಯೂ ವಿದ್ಯುತ್ ನೀಡುವುದಲ್ಲದೆ, ಹಿಂದಿನ ವರ್ಷದ ಬಿಲ್ ಅನ್ನು ಕೂಡ ಮನ್ನಾ ಮಾಡುತ್ತೇವೆ' ಎಂದು ತಿಳಿಸಿದರು.

'ಗುಜರಾತ್‌ನಲ್ಲಿ ಜೀವನೋಪಾಯಕ್ಕೆ ತೊಂದರೆ ಎದುರಿಸುತ್ತಿರುವ ಎಲ್ಲರಿಗೂ ಎಎಪಿ ಸರ್ಕಾರ ಉದ್ಯೋಗಗಳನ್ನು ನೀಡುತ್ತದೆ. ಕಳೆದ ಕೆಲವೇ ವರ್ಷಗಳಲ್ಲಿ ದೆಹಲಿಯಲ್ಲಿ 12 ಲಕ್ಷ ಯುವಕರಿಗೆ ಉದ್ಯೋಗ ನೀಡಿದ್ದೇವೆ. ಉದ್ಯೋಗ ಸಿಗುವವರೆಗೂ, ನಿರುದ್ಯೋಗಿಗಳಿಗೂ ತಿಂಗಳಿಗೆ 3 ಸಾವಿರ ರೂಪಾಯಿಯನ್ನು ನೀಡಲಾಗುತ್ತಿದೆ' ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.