ದೇಶ

ಬೆದರಿಕೆ ಪೋಸ್ಟರ್ ಗಳು: ಸತತ ಮೂರನೇ ದಿನ ಕಾಶ್ಮೀರ ಕಣಿವೆಯಲ್ಲಿ ವ್ಯಾಪಾರ-ವಹಿವಾಟು ಸ್ಥಗಿತ 

ಸಹಜ ಸ್ಥಿತಿಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಸತತ ಮೂರನೇ ದಿನವಾದ ಶುಕ್ರವಾರ ಕೂಡ ಬಹುತೇಕ ಅಂಗಡಿ-ಮುಂಗಟ್ಟುಗಳು ಮತ್ತು ವಾಣಿಜ್ಯ ಕೇಂದ್ರಗಳನ್ನು ಮುಚ್ಚಲಾಗಿತ್ತು.

ಬೆದರಿಕೆ ಪೋಸ್ಟರ್ ಗಳು: ಸತತ ಮೂರನೇ ದಿನ ಕಾಶ್ಮೀರ ಕಣಿವೆಯಲ್ಲಿ ವ್ಯಾಪಾರ-ವಹಿವಾಟು ಸ್ಥಗಿತ 
ಶ್ರೀನಗರದ ಲಾಲ್ ಚೌಕ್ ನಲ್ಲಿ ಕಂಡುಬಂದ ದೃಶ್ಯ
Published On :

ಶ್ರೀನಗರ: ಸಹಜ ಸ್ಥಿತಿಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಸತತ ಮೂರನೇ ದಿನವಾದ ಶುಕ್ರವಾರ ಕೂಡ ಬಹುತೇಕ ಅಂಗಡಿ-ಮುಂಗಟ್ಟುಗಳು ಮತ್ತು ವಾಣಿಜ್ಯ ಕೇಂದ್ರಗಳನ್ನು ಮುಚ್ಚಲಾಗಿತ್ತು.


ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸುವ ಮತ್ತು ಸಾರ್ವಜನಿಕ ಸಾರಿಗೆಗಳನ್ನು ರಸ್ತೆಗಿಳಿಸದಂತೆ ಕಳೆದ ಬುಧವಾರ ಪೋಸ್ಟರ್ ಗಳ ಮೂಲಕ ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು ಕಳೆದ ಕೆಲ ದಿನಗಳಿಂದ ಸಹಜ ಸ್ಥಿತಿಯಲ್ಲಿದ್ದ ಕಾಶ್ಮೀರದಲ್ಲಿ ಇದೀಗ ಮತ್ತೆ ವಿಶೇಷ ಗಮನ ನೀಡುವ ಪರಿಸ್ಥಿತಿ ಬಂದಿದೆ.


ಮಾರುಕಟ್ಟೆಯ ಮುಖ್ಯ ಪ್ರದೇಶಗಳು ಮತ್ತು ಇತರ ಪ್ರಗೇಶಗಳಲ್ಲಿ ಅಂಗಡಿಗಳು ಇಂದು ಕೂಡ ಮುಚ್ಚಿದ್ದವು. ಸಾರ್ವಜನಿಕ ಸಾರಿಗೆ ಕೂಡ ಬಹುತೇಕ ರಸ್ತೆಗಿಳಿಯಲಿಲ್ಲ. ಕೆಲವು ಖಾಸಗಿ ವಾಹನಗಳು ಮಾತ್ರ ಸಂಚರಿಸುತ್ತಿದ್ದವು. ಕೆಲ ಆಟೋ ರಿಕ್ಷಾಗಳು ಮತ್ತು ಅಂತರ ಜಿಲ್ಲಾ ಕ್ಯಾಬ್ ಗಳ ಸಂಚಾರ ಕಂಡುಬಂತು.


ಕಾಶ್ಮೀರದ ಬಹುದೊಡ್ಡ ಮಸೀದಿ ಜಮಿಯಾ ಮಸ್ಜಿದ್ ಸತತ 16ನೇ ವಾರದ ಶುಕ್ರವಾರವಾದ ಇಂದು ಕೂಡ ಮುಚ್ಚಿತ್ತು. ಸಂವಿಧಾನ ವಿಧಿ 370ನ್ನು ತೆಗೆದುಹಾಕಿ ಕೇಂದ್ರ ಸರ್ಕಾರ ಕಳೆದ ಆಗಸ್ಟ್ 5ರಂದು ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಈ ಮಸೀದಿ ಮುಚ್ಚಿದ್ದು ಪ್ರಾರ್ಥನೆ ನಡೆಯುತ್ತಿಲ್ಲ. ಮಸೀದಿ ಬಳಿ ಬೃಹತ್ ಪ್ರಮಾಣದಲ್ಲಿ ಜನರು ಸೇರಿದರೆ ಪಟ್ಟಭದ್ರ ಹಿತಾಸಕ್ತಿಗಳು ಗುಂಪು ಗಲಭೆ, ಘರ್ಷಣೆ ನಡೆಸಬಹುದು ಎಂಬ ಭೀತಿ ಅಧಿಕಾರಿಗಳದ್ದಾಗಿದೆ.


ಆಗಸ್ಟ್ 5ರಿಂದ ಎಲ್ಲಾ ಪ್ರಿಪೇಯ್ಡ್ ಫೋನ್ ಮತ್ತು ಇಂಟರ್ನೆಟ್ ಸೇವೆಗಳನ್ನು ರದ್ದುಪಡಿಸಲಾಗಿದೆ. ಬಹುತೇಕ ಉನ್ನತ ಮಟ್ಟದ ನಾಯಕರು ಮತ್ತು ಎರಡನೇ ದರ್ಜೆಯ ಪ್ರತ್ಯೇಕತಾವಾದಿ ರಾಜಕಾರಣಿಗಳು ಕಸ್ಟಡಿಯಲ್ಲಿದ್ದು ಮುಖ್ಯವಾಹಿನಿಯ ನಾಯಕರಾದ ಒಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ ಮೊದಲಾದವರನ್ನು ವಶಪಡಿಸಿಕೊಂಡು ಗೃಹಬಂಧನದಲ್ಲಿರಿಸಲಾಗಿದೆ.


 ಮಾಜಿ ಮುಖ್ಯಮಂತ್ರಿ ಮತ್ತು ಲೋಕಸಭಾ ಸದಸ್ಯ ಫಾರೂಕ್ ಅಬ್ದುಲ್ಲಾ ಅವರನ್ನು ವಿವಾದಾತ್ಮಕ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧನದಲ್ಲಿಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.