ದೇಶ

'ನನಗಾಗಿ ನಾನೇ ಕತ್ತಲಲ್ಲಿ ಸಂಘರ್ಷ ಮಾಡಿದಂತಾಗಿದೆ': ಮೋದಿ ಹೆಲಿಕಾಪ್ಟರ್‌ ಪರಿಶೀಲಿಸಿದ್ದ ಅಧಿಕಾರಿ ಅಳಲು

ನನ್ನ ಕರ್ತವ್ಯ ನಿರ್ವಹಣೆ ಮಾಡಿದ್ದಕ್ಕಾಗಿ ನನ್ನನ್ನು ಅಮಾನತು ಮಾಡಲಾಗಿದೆ. ನನ್ನ ಪರಿಸ್ಥಿತಿ ಈಗ ನನಗಾಗಿ ನಾನೇ ಕತ್ತಲೆಯಲ್ಲಿ ಸಂಘರ್ಷ ಮಾಡಿದಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಪರಿಶೀಲಿಸಿದ್ದ ಐಎಎಸ್ ಅಧಿಕಾರಿ ಮೊಹಮ್ಮದ್‌ ಮೊಹಿಸಿನ್‌ ಹೇಳಿದ್ದಾರೆ.

'ನನಗಾಗಿ ನಾನೇ ಕತ್ತಲಲ್ಲಿ ಸಂಘರ್ಷ ಮಾಡಿದಂತಾಗಿದೆ': ಮೋದಿ ಹೆಲಿಕಾಪ್ಟರ್‌ ಪರಿಶೀಲಿಸಿದ್ದ ಅಧಿಕಾರಿ ಅಳಲು
ಐಎಎಸ್ ಅಧಿಕಾರಿ ಮೊಹಮ್ಮದ್‌ ಮೊಹಿಸಿನ್‌
Published On :
ಬೆಂಗಳೂರು: ನನ್ನ ಕರ್ತವ್ಯ ನಿರ್ವಹಣೆ ಮಾಡಿದ್ದಕ್ಕಾಗಿ ನನ್ನನ್ನು ಅಮಾನತು ಮಾಡಲಾಗಿದೆ. ನನ್ನ ಪರಿಸ್ಥಿತಿ ಈಗ ನನಗಾಗಿ ನಾನೇ ಕತ್ತಲೆಯಲ್ಲಿ ಸಂಘರ್ಷ ಮಾಡಿದಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಪರಿಶೀಲಿಸಿದ್ದ ಐಎಎಸ್ ಅಧಿಕಾರಿ ಮೊಹಮ್ಮದ್‌ ಮೊಹಿಸಿನ್‌ ಹೇಳಿದ್ದಾರೆ.
ಇಡೀ ದೇಶದ ಗಮನ ಸೆಳೆದಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಐಎಎಸ್ ಅಧಿಕಾರಿ ಮೊಹಮ್ಮದ್‌ ಮೊಹಿಸಿನ್‌ ಖಾಸಗಿ ಮಾಧ್ಯಮವೊಂದರೊಂದಿಗೆ ಪ್ರತಿಕ್ರಿಯೆ ನೀಡಿದ್ದು, 'ನಾನು ಕರ್ತವ್ಯದಲ್ಲಿ ಮಗ್ನನಾಗಿದ್ದೆ. ದಿಢೀರನೆ ನನ್ನನ್ನು ಅಮಾನತು ಮಾಡಲಾಯಿತು. ನಾನು ಮಾಡಿದ್ದಾದರೂ ಏನು? ಈ ಬಗ್ಗೆ ಒಂದು ಸಣ್ಣ ವರದಿಯೂ ನನಗೆ ತಲುಪಿಲ್ಲ. ನಾನು ಕತ್ತಲೆಯಲ್ಲಿ ನನಗಾಗಿ ಹೋರಾಟ ನಡೆಸಿದಂತಾಗಿದೆ ಎಂದು ಹೇಳಿದ್ದಾರೆ.
'ಚುನಾವಣಾ ಆಯೋಗದ ಮಾರ್ಗಸೂಚಿಯ ಅನುಸಾರ ವಿಡಿಯೊ ಮಾಡುವಂತೆ ಸೂಚನೆ ನೀಡಿದ್ದೆ. ತಪ್ಪು ಮಾಡಿರಬಹುದಾದ ವ್ಯಕ್ತಿಗೆ ಶಿಕ್ಷೆಯಾಗಿಲ್ಲ, ಆದರೆ ನಾನು ಶಿಕ್ಷೆ ಅನುಭವಿಸುತ್ತಿದ್ದೇನೆ. ನನ್ನ ಕರ್ತವ್ಯವನ್ನು ನಾನು ನಿರ್ವಹಿಸಿರುವುದಕ್ಕೆ ನಾನೇಕೆ ಶಿಕ್ಷೆಗೆ ಗುರಿಯಾಗಬೇಕು? ಅಮಾನತು ಕಾನೂನು ಬಾಹಿರವಾದುದು, ಇದನ್ನು ನಾನು ನ್ಯಾಯಮಂಡಳಿಯಲ್ಲಿ ಎದುರಿಸುತ್ತೇನೆ. ಚಿತ್ರೀಕರಣ ನಡೆಸಲು ಎಸ್ ಪಿಜಿ ವಿರೋಧ ವ್ಯಕ್ತಪಡಿಸಲಿಲ್ಲ. ನಾನು ಎಸ್ ಪಿಜಿ ಸಂಪರ್ಕಿಸಿಯೇ ಈ ಸೂಚನೆ ನೀಡಿದ್ದು, ನಾವು ಭದ್ರತೆ ನೀಡಿರುವ ವ್ಯಕ್ತಿಗಳಿಗೆ ಬೇರೆ ನಿಯಮಗಳು ಅನ್ವಯವಾಗುತ್ತವೆ ಎಂದು ಎಸ್ ಪಿ ಜಿ ಅಧಿಕಾರಿಗಳೇಕೆ ತಿಳಿಸಲಿಲ್ಲ?... ನಾನು 22 ವರ್ಷಗಳಿಂದ ಆಡಳಿತ ಸೇವೆಯಲ್ಲಿದ್ದೇನೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಎಂದು ಮೊಹಿಸಿನ್‌ ಹೇಳಿದ್ದಾರೆ.
ಇನ್ನು ಚುನಾವಣಾ ಕರ್ತವ್ಯಲೋಪಕ್ಕಾಗಿ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿರುವ ಕೇಂದ್ರ ಚುನಾವಣಾ ಆಯೋಗದ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸಲು ನಿರ್ಧರಿಸಿರುವ ಮೊಹಮ್ಮದ್‌ ಮೊಹಿಸಿನ್‌ ಅವರು, ಕೇಂದ್ರ ಆಡಳಿತ ನ್ಯಾಯಮಂಡಳಿ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಚುನಾವಣಾ ಕಾರ್ಯದಿಂದ ಅಮಾನತುಗೊಳಿಸಿದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಆ ಮೂಲಕ ಶುಕ್ರವಾರ ಮೊಹಿಸಿನ್‌ ಅವರು ಹಿಂದುಳಿದ ಕಲ್ಯಾಣಗಳ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ಮರಳಿದ್ದಾರೆ. 
ಒಡಿಶಾದ ಸಂಬಲ್ ಪುರ ಜಿಲ್ಲೆಯಲ್ಲಿ ಚುನಾವಣಾ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 1996ರ ಕರ್ನಾಟಕ ಮೂಲದ ಐಎಎಸ್‌ ಅಧಿಕಾರಿ ಮೊಹಮದ್‌ ಮೊಹಿಸಿನ್‌, ಕಳೆದ ಫೆಬ್ರವರಿ 16ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್‌ ತಪಾಸಣೆ ಮಾಡಿದ್ದರು. ಅಲ್ಲದೆ ವಿಡಿಯೊ ಮಾಡುವಂತೆ ಸಹ ಅಧಿಕಾರಿಗಳಿಗೆ ಸೂಚಿಸಿದ್ದರು. ವರದಿಗಳ ಪ್ರಕಾರ, ಈ ಪರಿಶೀಲನೆಯಿಂದಾಗಿ ಪ್ರಧಾನಿ ಮೋದಿ ಅವರಿಗೆ ನಿಗದಿತ ಸಮಯಕ್ಕಿಂತಲೂ 15 ನಿಮಿಷ ತಡವಾಗಿತ್ತು. ಪ್ರಧಾನಿ ಹೆಲಿಕಾಪ್ಟರ್‌ ಪರಿಶೀಲನೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮೊಹಮ್ಮದ್‌ ಮೊಹಿಸಿನ್‌ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿತ್ತು. 
ವಿಶೇಷ ರಕ್ಷಣಾ ಪಡೆಯ (ಎಸ್‌ಪಿಜಿ) ಭದ್ರತೆಯಲ್ಲಿ ಇರುವವರನ್ನು ಚುನಾವಣಾ ಸಂಚಾರಿ ತನಿಖಾ ದಳದ ಸಿಬ್ಬಂದಿ ಪರಿಶೀಲಿಸುವಂತಿಲ್ಲ. ಈ ನಿಯಮವನ್ನು ಮೊಹಿಸಿನ್ ಉಲ್ಲಂಘಿಸಿದ್ದಾರೆ ಎನ್ನಲಾಗಿತ್ತು. ಎಸ್‌ಪಿಜಿ ಭದ್ರತೆ ಇರುವ ಪ್ರಧಾನಿಯವರ ಹೆಲಿಕಾಪ್ಟರ್‌ ಅನ್ನು ಮೊಹಿಸಿನ್ ಪರಿಶೀಲಿಸಿದ್ದಾರೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿತ್ತು. ಇದೀಗ ಅಮಾನತು ಆದೇಶ ಹಿಂಪಡೆದಿರುವ ಚುನಾವಣಾ ಆಯೋಗ, ಶಿಸ್ತುಕ್ರಮಕ್ಕೆ ಸೂಚಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.