ದೇಶ

ಶಬರಿ ಮಲೆ ವಿವಾದ: ನಿಳಕ್ಕಲ್ ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ, ಮಹಿಳಾ ಭಕ್ತರಿಂದಲೇ ವಾಹನ ತಪಾಸಣೆ!

ಶಬರಿಮಲೆ ಪ್ರವೇಶಕ್ಕಾಗಿ ಮಹಿಳಾ ಪರ ಸಂಘಟನೆಗಳು ತುದಿಗಾಲಲ್ಲಿ ನಿಂತಿರುವಂತೆಯೇ ಅವರನ್ನು ತಡೆಯಲು ಅಯ್ಯಪ್ಪ ಸ್ವಾಮಿ ಭಕ್ತರ ದಂಡು ಕೂಡ ಸಕಲ ರೀತಿಯಲ್ಲೂ ಸಿದ್ಧವಾಗಿ ನಿಂತಿದ್ದಾರೆ.

ಶಬರಿ ಮಲೆ ವಿವಾದ: ನಿಳಕ್ಕಲ್ ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ, ಮಹಿಳಾ ಭಕ್ತರಿಂದಲೇ ವಾಹನ ತಪಾಸಣೆ!
ನಿಳಕ್ಕಲ್ ಕ್ಯಾಂಪ್ ನಲ್ಲಿ ಪೊಲೀಸ್ ಬಂದೋಬಸ್ತ್
Published On :
ತಿರುವನಂತಪುರಂ: ಖ್ಯಾತ ಯಾತ್ರಾ ಸ್ಥಳ ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಿ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಶಬರಿಮಲೆ ದೇಗುಲದ ಬಾಗಿಲು ತೆರೆಯಲಾಗುತ್ತಿದ್ದು, ಶಬರಿಮಲೆ ಪ್ರವೇಶಕ್ಕಾಗಿ ಮಹಿಳಾ ಪರ ಸಂಘಟನೆಗಳು ತುದಿಗಾಲಲ್ಲಿ ನಿಂತಿರುವಂತೆಯೇ ಅವರನ್ನು ತಡೆಯಲು ಅಯ್ಯಪ್ಪ ಸ್ವಾಮಿ ಭಕ್ತರ ದಂಡು ಕೂಡ ಸಕಲ ರೀತಿಯಲ್ಲೂ ಸಿದ್ಧವಾಗಿ ನಿಂತಿದ್ದಾರೆ.
ಪರಿಣಾಮ ಶಬರಿಮಲೆ ಬೇಸ್ ಕ್ಯಾಂಪ್ ನಿಳಕ್ಕಲ್ ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಕೇರಳ ಸರ್ಕಾರ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಿದೆ. ಇಂದು ಸಂಜೆ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತಿದ್ದು, ನಿನ್ನೆಯಿಂದಲೇ ನಿಳಕ್ಕಲ್ ಕ್ಯಾಂಪ್ ಗೆ ಸಾವಿರಾರು ಮಂದಿ ಅಯ್ಯಪ್ಪ ಸ್ವಾಮಿ ಭಕ್ತರು ಇರುಮುಡಿ ಸಮೇತ ಆಗಮಿಸಿದ್ದಾರೆ. ಅಂತೆಯೇ ಶಬರಿ ಮಲೆ ಪ್ರವೇಶಕ್ಕಾಗಿ ಮಹಿಳಾ ಸಂಘಟನೆಗಳ ಕಾರ್ಯಕರ್ತರೂ ಕೂಡ ನಿಳಕ್ಕಲ್ ಕ್ಯಾಂಪ್ ಗೆ ಆಗಮಿಸಿದ್ದು, ಅವರನ್ನು ತಡೆಯಲು ಇದೇ ಕ್ಯಾಂಪ್ ನಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಕೂಡ ಮೊಕ್ಕಾಂ ಹೂಡಿವೆ.
ಪ್ರಮುಖವಾಗಿ ಶಿವಸೇನೆ, ಹಿಂದೂ ಮಕ್ಕಳ್ ಕಚ್ಚಿ ಸೇರಿದಂತೆ 30ಕ್ಕೂ ಹೆಚ್ಚು ಹಿಂದೂಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಪ್ರತಿಭಟನಾ ನಿರತ ಮಹಿಳಾ ಕಾರ್ಯಕರ್ತರೇ ಪೊಲೀಸರು ಮಾಡಬೇಕಾದ ಕಾರ್ಯ ಮಾಡುತ್ತಿದ್ದಾರೆ. ನಿಳಕ್ಕಲ್ ಕ್ಯಾಂಪ್ ಗೆ ಆಗಮಿಸುತ್ತಿರುವ ಎಲ್ಲ ವಾಹನಗಳನ್ನು ಮಹಿಳಾ ಕಾರ್ಯಕರ್ತರೇ ಪರಿಶೀಲನೆ ನಡೆಸುತ್ತಿದ್ದು, 10 ರಿಂದ 50 ವರ್ಷ ಮೇಲ್ಪಟ್ಟ ಮಹಿಳೆಯರನ್ನು ವಾಹನದಿಂದ ಕೆಳಗಿಳಿಸಿ ವಾಹನ ಸಾಗಲು ಅನುವು ಮಾಡಿಕೊಡುತ್ತಿದ್ದಾರೆ. ಬೆಂಗಳೂರಿನ ಕಾಲೇಜೊಂದರ ಯುವತಿಯರಿದ್ದ ವಾಹನವನ್ನು ವಾಪಸ್‌ ಕಳುಹಿಸಲಾಗಿದೆ.  ದೇಗುಲದ ಬಳಿ ವರದಿಗಾರಿಕೆಗೆಂದು ತೆರಳಿದ್ದ ಸುದ್ದಿವಾಹಿನಿಯೊಂದರ ಪತ್ರಕರ್ತೆಯನ್ನೂ ಪ್ರತಿಭಟನಕಾರರು ವಾಪಸ್‌ ಕಳುಹಿಸಿದ್ದಾರೆ. ಇನ್ನು ಕಾರ್ಯಕರ್ತರ ಈ ಕಾರ್ಯಕ್ಕೆ ಪೊಲೀಸರು ಅಡ್ಡಿ ಪಡಿಸಿದಾಗ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಟ್ಟರೆ ತಮ್ಮನ್ನು ತಾವೇ ದಹಿಸಿಕೊಳ್ಳುತ್ತೇವೆ ಎಂದು ಶಿವಸೇನೆ ಮಹಿಳಾ ಘಟಕದ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಮಾತುಕತೆ ವಿಫ‌ಲ
ಈ ಎಲ್ಲ ಬೆಳವಣಿಗೆಗಳ ಮಧ್ಯೆ ತಿರುವಾಂಕೂರು ದೇವಸ್ವಂ ಮಂಡಳಿ, ಪಂದಳ ರಾಜಮನೆತನ, ದೇಗುಲದ ಮುಖ್ಯ ಅರ್ಚಕರು, ಅಯ್ಯಪ್ಪ ಸೇವಾ ಸಮಾಜ, ಯೋಗ ಕ್ಷೇಮ ಸಮಾಜ ಹಾಗೂ ಪ್ರತಿಭಟನೆ ನಡೆಸುತ್ತಿರುವ ನಾನಾ ಸಂಘಟನೆಗಳ ಪ್ರಮುಖರ ಜತೆ ಮಾತುಕತೆ ನಡೆಸಿದೆ. ರಾಜಮನೆತನ, ತಂತ್ರಿಗಳು ಮತ್ತು ದೇವಸ್ವಂ ಮಂಡಳಿಯ ಅಧ್ಯಕ್ಷ ಎ. ಪದ್ಮಕುಮಾರ್‌ ನಡುವೆ ಸಹಮತ ಮೂಡದೇ ಇದ್ದುದರಿಂದ ಮಾತುಕತೆ ವಿಫ‌ಲವಾಯಿತು.
22ರ ವರೆಗೆ ಮಾತ್ರ
ಶಬರಿಮಲೆ ಸ್ವಾಮಿ ಅಯ್ಯಪ್ಪನ ದೇಗುಲವು ಬುಧವಾರದಿಂದ ಸೋಮವಾರದವರೆಗೆ ತೆರೆದಿರುತ್ತದೆ. ಮಲಯಾಳಂ ತಿಂಗಳಾದ ತುಲಂ ನಿಮಿತ್ತ ದೇಗುಲದ ಬಾಗಿಲು ತೆರೆಯಲಾಗುತ್ತಿದೆ. 22ಕ್ಕೆ ಬಾಗಿಲು ಮುಚ್ಚಿದರೆ ಮತ್ತೆ ನ. 5ರಂದು ಶ್ರೀ ಚಿತ್ರ ಅತ್ತತ್ತಿರುನಾಳ್‌ಗಾಗಿ ಬಾಗಿಲನ್ನು ತೆರೆಯಲಾಗುತ್ತದೆ. ಮಾರನೇ ದಿನವೇ ಬಾಗಿಲು ಮುಚ್ಚಲಾಗುತ್ತದೆ. 
ಸುಪ್ರೀಂ ಆದೇಶ ಪಾಲನೆಗೆ ಸಿದ್ಧ
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು, ಸುಪ್ರೀಂ ತೀರ್ಪಿಗೆ ವಿರುದ್ಧವಾಗಿ ಹೋಗಲು ಅವಕಾಶ ನೀಡುವುದಿಲ್ಲ. ಶಬರಿಮಲೆ ದೇಗುಲ ಪ್ರವೇಶಿಸುವ ಭಕ್ತರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ  ಪೊಲೀಸ್‌ ಬಂದೋಬಸ್ತ್ ಮಾಡಲಾಗುವುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆದೇಶಿಸಿದ್ದೇನೆ. ಸರ್ಕಾರದ ನಿಲುವಿನಲ್ಲಿಯೂ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.