ಎಐಎಡಿಎಂಕೆ, ಟಿಡಿಪಿ ಸದಸ್ಯರಿಂದ ಅಡ್ಡಿ : ಲೋಕಸಭೆ, ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ
ಎಐಎಡಿಎಂಕೆ ಸದಸ್ಯರು ಹಾಗೂ ಟಿಡಿಪಿ ಸದಸ್ಯರು ತಮ್ಮ ಬೇಡಿಕೆ ಈಡೇರಿಕೆಗಾಗಿ ಭಾರೀ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಸುಗಮ ಕಲಾಪ ಸಾಧ್ಯವಾಗದೆ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ನವದೆಹಲಿ : ಸಂಸತ್ತಿನ ಉಭಯ ಸದನಗಳಲ್ಲಿ ಇಂದೂ ಕೂಡಾ ತಮಿಳುನಾಡಿನ ಎಐಎಡಿಎಂಕೆ ಸದಸ್ಯರು ಹಾಗೂ ಟಿಡಿಪಿ ಸದಸ್ಯರು ತಮ್ಮ ಬೇಡಿಕೆ ಈಡೇರಿಕೆಗಾಗಿ ಭಾರೀ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಸುಗಮ ಕಲಾಪ ಸಾಧ್ಯವಾಗದೆ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
ಬೆಳಿಗ್ಗೆ ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಹಾಗೂ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಕ್ರಮವಾಗಿ ತಮಿಳುನಾಡಿನ ಎಐಎಡಿಎಂಕೆ ಹಾಗೂ ಆಂಧ್ರಪ್ರದೇಶದ ಟಿಡಿಪಿ ಸದಸ್ಯರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಇದರಿಂದಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೂ ಮುಂದೂಡಿದ್ದರು. ಬಳಿಕ ಸಮಾವೇಶಗೊಂಡಾಗಲೂ ಸುಗಮ ಕಲಾಪ ಸಾಧ್ಯವಾಗದೇ ಸ್ಪೀಕರ್ ಸುಮಿತ್ರಾ ಮಹಾಜನ್ ನಾಳೆಗೆ ಕಲಾಪವನ್ನು ಮುಂದೂಡಿದರು.
ಇತ್ತ ರಾಜ್ಯಸಭೆಯಲ್ಲಿಯೂ ಎಐಎಡಿಎಂಕೆ ಹಾಗೂ ಟಿಡಿಪಿ ಸದಸ್ಯರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದರು.
15 ನಿಮಿಷಗಳ ಕಾಲ ಕಲಾಪ ಮುಂದೂಡಿದ ಸಭಾಪತಿ ಎಂ. ವೆಂಕಯ್ಯನಾಯ್ಡು. ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡರು. ಆದಾಗ್ಯೂ, ಎಐಎಡಿಎಂಕೆ ಸದಸ್ಯರು ಎದ್ದುನಿಂತು ಪ್ರಧಾನಿ ನರೇಂದ್ರಮೋದಿ ಅವರ ಮಧ್ಯಪ್ರವೇಶಕ್ಕೆ ಆಗ್ರಹಿಸಿದರು.
ಎಐಡಿಎಂಕೆ ಸದಸ್ಯರನ್ನು ಮನವೊಲಿಸುವಲ್ಲಿ ವಿಫಲರಾದ ಸಭಾಪತಿ ಎಂ. ವೆಂಕಯ್ಯನಾಯ್ಡು ದಿನದ ಮಟ್ಟಿಗೆ ಕಲಾಪ ಮುಂದೂಡಿದ್ದರು. ಹಠಾತ್ ಕಲಾಪ ಮುಂದೂಡಿದ್ದ ಬಗ್ಗೆ ಪ್ರತಿಪಕ್ಷಗಳ ನಾಯಕರು ಕುತೂಹಲ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷಗಳ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಮಾರ್ಚ್ 5 ರಂದು ಆರಂಭವಾದ ಬಜೆಟ್ ಅಧಿವೇಶನದ ಎರಡನೇ ಹಂತದಲ್ಲಿ ಯಾವುದೇ ಚರ್ಚೆಯಾಗದೆ ಕೋಲಾಹಲ, ಗದ್ಧಲ, ಪ್ರತಿಭಟನೆಗಳ ಮಧ್ಯೆಯೇ ಕಲಾಪ ವ್ಯರ್ಥವಾಗುತ್ತಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


