ಭಾರತದಲ್ಲಿ ಸೌರಶಕ್ತಿ ಕ್ರಾಂತಿಗೆ ಬುನಾದಿ, 275 ಗೀಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ
ಫ್ರಾನ್ಸ್ ಸಹಯೋಗದಲ್ಲಿ ಭಾರತ ಭಾನುವಾರ ತನ್ನ ಸೌರಶಕ್ತಿ ಕ್ರಾಂತಿಗೆ ಬುನಾದಿ ಹಾಕಿದ್ದು, ಭಾರತವು ನವೀಕರಿಸ ಬಹುದಾದ ಮೂಲಗಳಿಂದ 2022ರ ವೇಳೆಗೆ 175 ಗೀಗಾ ವ್ಯಾಟ್ ಹಾಗೂ ಸೌರಶಕ್ತಿಯಿಂದ 100 ಗಿ.ವ್ಯಾ.ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.

Published On :
ನವದೆಹಲಿ: ಫ್ರಾನ್ಸ್ ಸಹಯೋಗದಲ್ಲಿ ಭಾರತ ಭಾನುವಾರ ತನ್ನ ಸೌರಶಕ್ತಿ ಕ್ರಾಂತಿಗೆ ಬುನಾದಿ ಹಾಕಿದ್ದು, ಭಾರತವು ನವೀಕರಿಸ ಬಹುದಾದ ಮೂಲಗಳಿಂದ 2022ರ ವೇಳೆಗೆ 175 ಗೀಗಾ ವ್ಯಾಟ್ ಹಾಗೂ ಸೌರಶಕ್ತಿಯಿಂದ 100 ಗಿ.ವ್ಯಾ.ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.
ರಾಜಧಾನಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ಅಂತಾರಾಷ್ಟ್ರೀಯ ಸೌರ ಮೈತ್ರಿ(ಇಂಟರ್‍ನ್ಯಾಷನಲ್ ಸೋಲಾರ್ ಅಲೈಯನ್ಸ್-ಐಎಸ್‍ಎ) ಸಂಸ್ಥಾಪನಾ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ, ಮಹತ್ವದ ಸೌರಶಕ್ತಿ ಯೋಜನೆಗಳನ್ನು ಪ್ರಕಟಿಸಿದರು. ಮಹತ್ವಾಕಾಂಕ್ಷಿ ಸೌರ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗಾಗಿ ರಿಯಾಯಿತಿ ಹಾಗೂ ಕಡಿಮೆ ಹೊಣೆಗಾರಿಕೆಯ ಹಣಕಾಸು ಕ್ರೋಢೀಕರಣಕ್ಕಾಗಿ ಪ್ರಧಾನಿ ಮೋದಿ ಅವರು ಉದ್ಯಮಗಳಿಗೆ ಸಲಹೆ ಮಾಡಿದರು. 10 ಅಂಶಗಳ ಕ್ರಿಯಾ ಅಂಶಗಳನ್ನು ಇದೇ ಸಂದರ್ಭದಲ್ಲಿ ಮೋದಿ ಪ್ರಕಟಿಸಿದ್ದು, ಎಲ್ಲ ದೇಶಗಳಿಗೆ ಕೈಗೆಟುಕುವ ಅತ್ಯಾಧುನಿಕ ಸೌರ ತಂತ್ರಜ್ಞಾನ, ಶಕ್ತಿ ಸಂಪನ್ಮೂಲದಲ್ಲಿ ಫೋಟೋವೊಲ್ಟಾಯಿಕ್ ಸೆಲ್‍ಗಳಿಂದ ವಿದ್ಯುತ್ ಉತ್ಪಾದನೆ ಪಾಲುದಾರಿಕೆ, ಸರಳ ನಿಬಂಧನೆಗಳು ಮತ್ತು ಉತ್ಕೃಷ್ಟ ಗುಣಮಟ್ಟಗಳನ್ನು ರೂಪಿಸುವುದು, ಸೌರಶಕ್ತಿ ಯೋಜನೆಗಳಿಗೆ ಆರ್ಥಿಕ ನೆರವು ಪ್ರಕ್ರಿಯೆಗಳು ಹಾಗೂ ಉತ್ಕೃಷ್ಟತೆಗಾಗಿ ಕೇಂದ್ರಗಳ ಜಾಲ ಸೃಷ್ಟಿ ಸೇರಿದಂತೆ ಹಲವು ಅಂಶಗಳು ಈ ಕ್ರಿಯಾ ಯೋಜನೆಯಲ್ಲಿ ಒಳಗೊಂಡಿವೆ.
2030ರ ವೇಳೆಗೆ 1,000 ಗಿ.ವ್ಯಾ ಸೌರ ವಿದ್ಯುತ್ ಉತ್ಪಾದನೆ ಸಾಮಥ್ರ್ಯ ಮತ್ತು 1 ಲಕ್ಷ ಕೋಟಿ ಡಾಲರ್ ಬಂಡವಾಳ ಕ್ರೋಢೀಕರಣದ ಗುರಿ ಸಾಧನೆಗಾಗಿ ಇಂಥ ಯೋಜನೆಗಳಿಗೆ ರಿಯಾಯಿತಿ ದರದ ಹಾಗೂ ಹೆಚ್ಚು ಹೊರೆಯಿಲ್ಲದ ಹಣಕಾಸು ನೆರವಿನ ಅಗತ್ಯವಿದೆ ಎಂದು ಹೇಳಿದ ಪ್ರಧಾನಿ ಮೋದಿ, ಐಎಸ್‍ಎ ಸದಸ್ಯ ರಾಷ್ಟ್ರಗಳಿಗಾಗಿ 500ಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ದಿಗಾಗಿ ಸೋಲಾರ್ ಟೆಕ್ನಾಲಜಿ ಮಿಷನ್ ಆರಂಭಿಸಲಾಗುವುದು ಎಂದು ಹೇಳಿದರು. ಸೌರಶಕ್ತಿಯನ್ನು ಉತ್ಪಾದನೆ ಮತ್ತು ಸದ್ಭಳಕೆ ಮಾಡಿಕೊಳ್ಳಲು ತಮ್ಮ ಸರ್ಕಾರವು ಸಂಪೂರ್ಣ ಬದ್ದವಾಗಿದೆ. ಕಳೆದ ಮೂರು ವರ್ಷಗಳಲ್ಲಿ 28 ಕೋಟಿ ಎಲ್‍ಇಡಿ ಬಲ್ಬ್ ಗಳನ್ನು ವಿತರಿಸಿ ಆ ಮೂಲಕ 2 ಶತಕೋಟಿ ಡಾಲರ್ (ಸುಮಾರು 13,000 ಕೋಟಿ ರೂ.ಗಳು) ಹಾಗೂ 4 ಗಿಗಾ ವ್ಯಾಟ್ ವಿದ್ಯುತ್ ಉಳಿಸಿದೆ ಎಂದು ಹೇಳಿದರು.
ನಾವು ವಿಶ್ವದೆಲ್ಲೆಡೆ ಸೌರಕ್ರಾಂತಿಯನ್ನು ಬಯಸುತ್ತೇವೆ. ಎಲ್ಲರೂ ಒಂದಾದರೇ ಸೌರ ಕ್ರಾಂತಿ ಸಾಧಿಸಬಹುದು. ಸೌರ ವಿದ್ಯುತ್ ಕ್ಷೇತ್ರದಲ್ಲಿ ಹೊಸ ಹೊಸ ಅನ್ವೇಷಣೆಗಳು ಮತ್ತು ಹೆಚ್ಚಿನ ಅಭಿವೃದ್ಧಿ ಅಗತ್ಯವಿದೆ ಎಂದು ಅವರು ತಿಳಿಸಿದರು. ನಮ್ಮ ಸೌರ ವಿದ್ಯುತ್ ಯೋಜನೆಗೆ ಸೂರ್ಯ ಪಾಲುದಾರ. ಸೂರ್ಯ ದೇವನು ನಮ್ಮೊಂದಿಗೆ ಪಾಲುದಾರನಾಗಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಸಾಥ್ ನೀಡುತ್ತಿದ್ದಾನೆ ಎಂದು ಪ್ರಧಾನಿ ಬಣ್ಣಿಸಿದರು.
ಭಾರತವು ಸಂಸ್ಥಾಪನಾ ಸಮ್ಮೇಳನದ ಆತಿಥ್ಯ ವಹಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡ ಪ್ರಧಾನಿ ಮೋದಿ, ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಪ್ರಥಮ ಒಪ್ಪಂದ ಆಧಾರಿತ ಅಂತಾರಾಷ್ಟ್ರೀಯ ಅಂತರ್ ಸರ್ಕಾರಿ ಸಂಘಟನೆಯಾಗಿದೆ. ಇದರ ಕೇಂದ್ರ ಕಚೇರಿ ಭಾರತದ ಗುರಗಾಂವ್ ನಲ್ಲಿ ಇದೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಕೇಂದ್ರ ಸರ್ಕಾರದ ದೂರದೃಷ್ಟಿಯ ಫಲವಾಗಿದ್ದು, ಸೌರಶಕ್ತಿಯನ್ನು ಸಂಗ್ರಹಿಸಲು ವಿಶ್ವವನ್ನು ಒಗ್ಗೂಡಿಸುವುದು ಮತ್ತು ಜನಸಮುದಾಯಕ್ಕೆ ಕೈಗೆಟುಕುವ ದರದಲ್ಲಿ ಈ ವಿಶ್ವವ್ಯಾಪಿ ಸೌರಶಕ್ತಿ ಸಂಪರ್ಕವನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಉಷ್ಣವಲಯದಲ್ಲಿ ಪೂರ್ಣವಾಗಿ ಅಥವಾ ಭಾಗಶಃ ಸ್ಥಿತವಾಗಿರುವ ಸೌರಶಕ್ತಿ ಸಂಪನ್ಮೂಲಭರಿತ ರಾಷ್ಟ್ರಗಳ ಒಕ್ಕೂಟ ಇದಾಗಿದೆ. ಈ ಉಪಕ್ರಮದ ಮೂಲಕ ಸೌರಶಕ್ತಿ ಬಳಕೆ ಪ್ರಮಾಣವನ್ನು ಹೆಚ್ಚಿಸಲು ಸದಸ್ಯ ರಾಷ್ಟ್ರಗಳು ಸಾಮೂಹಿಕವಾಗಿ ಕಾರ್ಯೋನ್ಮುಖವಾಗಿ ಎದುರಾಗುವ ಪ್ರಮುಖ ಸವಾಲುಗಳನ್ನು ನಿವಾರಿಸಲಿವೆ ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiindiaಭಾರತPM Modiಪ್ರಧಾನಿ ಮೋದಿFranceಫ್ರಾನ್ಸ್Emmanuel MacronSolar Allianceಸೌರಶಕ್ತಿ ಮೈತ್ರಿಕೂಟಇಮ್ಯಾನ್ಯುಯಲ್ ಮ್ಯಾಕ್ರನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


