ದೇಶ

'ವಸುದೈವ ಕುಟುಂಬಕಂ' ಚೈತನ್ಯವನ್ನು ಅರ್ಥ ಮಾಡಿಕೊಳ್ಳಲು ಯೋಗ ನೆರವಾಯಿತು: ಪ್ರಧಾನಿ ಮೋದಿ

ಜಾತಿ, ಮತಗಳೆಂಬ ಯಾವುದೇ ತಾರತಮ್ಯಗಳಿಲ್ಲದೆ, ಇಡೀ ವಿಶ್ವದಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗಿದ್ದು, 'ವಸುದೈವ ಕುಟುಂಬಕಂ' ಚೈತನ್ಯವನ್ನು ಅರ್ಥ ಮಾಡಿಕೊಳ್ಳಲು ಯೋಗ ನೆರವಾಯಿತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು...

'ವಸುದೈವ ಕುಟುಂಬಕಂ' ಚೈತನ್ಯವನ್ನು ಅರ್ಥ ಮಾಡಿಕೊಳ್ಳಲು ಯೋಗ ನೆರವಾಯಿತು: ಪ್ರಧಾನಿ ಮೋದಿ
ಪ್ರಧಾನಿ ಮೋದಿ
Published On :
ನವದೆಹಲಿ: ಜಾತಿ, ಮತಗಳೆಂಬ ಯಾವುದೇ ತಾರತಮ್ಯಗಳಿಲ್ಲದೆ, ಇಡೀ ವಿಶ್ವದಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗಿದ್ದು, 'ವಸುದೈವ ಕುಟುಂಬಕಂ' ಚೈತನ್ಯವನ್ನು ಅರ್ಥ ಮಾಡಿಕೊಳ್ಳಲು ಯೋಗ ನೆರವಾಯಿತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ. 
45ನೇ ಆವೃತ್ತಿಯ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ ಜನತೆಯನ್ನುದ್ದೇಶಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಅಂತರಾಷ್ಟ್ರೀಯ ಯೋಗ ದಿನಾಚರಣೆವೇಳೆ ವಿಶ್ವದ ವಿವಿಧ ಭಾಗಗಳಲ್ಲಿ ಯೋಗಾಭ್ಯಾಸ ನಡೆದ ರೀತಿಗಳ ಬಹಳ ಸಂತಸವನ್ನು ತಂದಿದೆ. ಪ್ರಸಕ್ತ ಸಾಲಿನ ಯೋಗದಿನಾಚರಣೆ ಸಂಭ್ರಮವನ್ನು ಮೂಡಿಸಿತ್ತು. ಯೋಗದಿಂದ ಆರೋಗ್ಯಕರ ಜೀವನ ಶೈಲಿಯ ಕ್ರಾಂತಿಯಾಗಿದೆ. ವಿಶ್ವದೆಲ್ಲೆಡೆ ನಡೆದ ಯೋಗಭ್ಯಾಸದ ರೀತಿಗಳು ಭಾರತೀಯರನ್ನು ಹೆಮ್ಮೆ ಪಡುವಂತೆ ಮಾಡಿದೆ ಎಂದು ಹೇಳಿದ್ದಾರೆ. 
ಬಳಿಕ ಬೆಂಗಳೂರಿನಲ್ಲಿ ನಡೆದ ಭಾರತ-ಅಫ್ಘಾನಿಸ್ತಾನ ನಡುವಿನ ಪಂದ್ಯ ಕುರಿತಂತೆ ಮಾತನಾಡಿದ ಅವರು, ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ನಗರದಲ್ಲಿ ಐತಿಹಾಸಿಕ ಪಂದ್ಯವೊಂದು ನಡೆದಿತ್ತು. ಭಾರತ-ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಕುರಿತಂತೆ ನಾನು ಮಾತನಾಡುತ್ತಿದ್ದೇನೆ. ಭಾರತದ ವಿರುದ್ಧ ಅಫ್ಘಾನಿಸ್ತಾನ ಮೊದಲ ಕ್ರಿಕೆಟ್ ಪಂದ್ಯವನ್ನು ಆಡಿದ್ದಕ್ಕೆ ನಾವು ಹೆಮ್ಮೆ ಪಡಬೇಕಿದೆ ಎಂದು ಹೇಳಿದ್ದಾರೆ. 
ಇದೇ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಅಫ್ಘಾನಿಸ್ತಾನದ ತಂಡದ ಆಟಗಾರ ರಶೀದ್ ಖಾನ್ ಅವರನ್ನು ಕೊಂಡಾಡಿರುವ ಅವರು, ಕ್ರಿಕೆಟ್ ಜಗತ್ತಿಗೆ ರಶೀದ್ ಖಾನ್ ಅವರು ಆಸ್ತಿಯಾಗಿದ್ದಾರೆ. ರಶೀದ್ ಅತ್ಯುತ್ತಮ  ಕ್ರಿಕೆಟಿಗ. ಐಪಿಎಲ್ ನಲ್ಲಿಯೂ ಉತ್ತಮವಾಗಿ ಆಡಿದ್ದಾರೆಂದು ಹೇಳಿದ್ದಾರೆ. 
ಜು.1 ರಂದು ವೈದ್ಯರ ದಿನ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಮಾತನಾಡಿರುವ ಮೋದಿಯವರು, ವೈದ್ಯರು ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ವೈದ್ಯರಿಕೆ ಶುಭಾಶಯಗಳನ್ನು ಕೋರಿದ್ದಾರೆ. 
ಸಂತ ಕಬೀರರ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಮಗಧ್ ನಲ್ಲಿ ಸಾಯುವವರು ಸ್ವರ್ಗಕ್ಕೆ ಹೋಗುವುದಲ್ಲ ಎಂಬ ನಂಬಿಕೆಗಳಿತ್ತು. ಆದರೆ, ಅಂತಹ ಮೂಢನಂಬಿಕೆಗಳನ್ನು ತೊಡೆದುಹಾಕಲು ಸಂತ ಕಬೀರರು ಶ್ರಮಪಟ್ಟಿದ್ದರು ಎಂದಿದ್ದಾರೆ. 
ನಮ್ಮಲ್ಲಿ ಮತ್ತೊಬ್ಬರು ಗುರುಗಳಿದ್ದು, ಅವರೇ ಗುರು ನಾನಕ್, ಜಾತಿವಾದಗಳನ್ನು ತೊಡೆದು ಹಾಕಲು ಗುರುನಾನಕ್ ಅವರು ಕೆಲಸ ಮಾಡಿದ್ದರು. ಬಡವರಿಗೆ ಸೇವೆ ಮಾಡಿದರೆ, ದೇವರಿಗೆ ಸೇವೆ ಮಾಡಿದಂತೆ ಎಂದು ಹೇಳುತ್ತಿದ್ದರು. ಅನ್ನದಾನ ಸೇವೆಗಳನ್ನು ಆರಂಭಿಸಿದ್ದರು. 
2019ರಲ್ಲಿ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಶತಮಾನೋತ್ಸವ ನಡೆಯಲಿದೆ. ಶಾಂತಿ, ತ್ಯಾಗ ಹಾಗೂ ಅಹಿಂಸೆ ಎಂದಿಗೂ ವಿಜಯ ಸಾಧಿಸಲಿದೆ. ಇಡೀ ಮನುಕುಲವೇ ಬೆಚ್ಚಿಬೀಳಿಸುವ ಕ್ರೂರ ಘಟನೆಯಿಂದ ನಮಗೆ ತಿಳಿಯುವ ಸಂದೇಶ- ಹಿಂಸೆಗಳಿಂದ ಎಂದಿಗೂ ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದು ಎಂದು ಹೇಳಿದ್ದಾರೆ. 
ಇದೇ ವೇಳೆ ಜನ ಸಂಘದ ಸ್ಥಾಪಕ ಶ್ಯಾಮ ಪ್ರಸಾದ ಮುಖರ್ಜಿಯವರನ್ನು ನೆನೆದ ಮೋದಿಯವರು, ದೇಶದ ಶೈಕ್ಷಣಿಕ ಹಾಗೂ ಕೈಗಾರಿಕಾ ವಲಯಕ್ಕೆ ಮುಖರ್ಜಿಯವರ ಕೊಡುಗೆಯನ್ನು ಸ್ಮರಿಸಿದ್ದಾರೆ. 
ಕೆಲ ದಿನಗಳ ಹಿಂದೆ ನಾನು ಸಾಕಷ್ಟು ಜನರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆಸಿದ್ದೆ. ಅವರ ಜೀವನಗಳ ಬಗ್ಗೆ ಸಾಕಷ್ಟು ತಿಳಿದುಕೊಂಡೆ. ಜಾರ್ಖಾಂಡ್ ನಲ್ಲಿರುವ ಅಂಜನ್ ಕುಮಾರ್ ಎಂಬುವವರು ಕಡಿಮೆ ಬೆಲೆಯಲ್ಲಿ ಗ್ರಾಮಸ್ಥರಿಗೆ ಔಷಧಿಗಳನ್ನು ನೀಡುತ್ತಿದ್ದಾರೆ. ಪಶ್ಚಿಮ ಬಂಗಾಳದಿಂದ ತಮಿಳುನಾಡು ರಾಜ್ಯದವರೆಗೂ ಇಂತಹದ್ದೇ ನಮ್ಮ ದೇಶದಲ್ಲಿ ಸಾಕಷ್ಟು ಕಥೆಗಳಿವೆ ಎಂದು ತಿಳಿಸಿದ್ದಾರೆ. 
ಇಡೀ ದೇಶಕ್ಕೆ ಒಂದೇ ತೆರಿಗೆ ಹೊಂದುವುದು ಬಹಳ ದಿನಗಳ ಕನಸಾಗಿತ್ತು. ಈ ನಿಟ್ಟಿನಲ್ಲಿ ಜಾರಿಗೆ ತರಲಾದ ಜಿಎಸ್'ಟಿಯಿಂದಾಗಿ ಸಾಕಷ್ಟು ಚೆಕ್'ಪೋಸ್ಟ್ ಗಳನ್ನು ತೆರವುಗೊಳಿಸಿದ್ದು, ಸರಕು ಸಾಗಾಟಕ್ಕೆ ಇನ್ನಷ್ಟು ವೇಗವನ್ನು ನೀಡಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಜಗತ್ತಿನ ಅತೀದೊಡ್ಡ ತೆರಿಗೆ ಸುಧಾರಣೆಯಾಗಿದೆ. ಸಹಕಾರೀ ಒಕ್ಕೂಟ ವ್ಯವಸ್ಥೆಗೆ ಜಿಎಸ್'ಟಿ ಜ್ವಲಂತ ನಿದರ್ಶನವಾಗಿದೆ. ಜಿಎಸ್'ಟಿ ಪ್ರಾಮಾಣಿಕತೆಯ ಆಚರಣೆಯಾಗಿದೆ ಎಂದು ತಿಳಿಸಿದ್ದಾರೆ. 
ವಿಪಕ್ಷಗಳ ವಿರುದ್ದ ಮೋದಿ ಕಿಡಿ
ಬಳಿಕ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿಯವರು ಕೆಲ ಜನರ ಸಮಾಜ ಒಡೆಯಲು ಬಯಸುತ್ತಿದ್ದಾರೆ. ಇಂತಹ ಜನರಲ್ಲಿ ಯಾವಾಗಲೂ ನಕಾರಾತ್ಮಕ ಚಿಂತನೆಗಳೇ ಇರುತ್ತವೆ. ಆದರೆ, ಭಾರತದ ಎಲ್ಲಾ ಭಾಗಗಳಲ್ಲಿರುವ ಯಶಸ್ವಿ ಜನರು ಸಮಾಜದ ಪ್ರತೀಕವಾಗಿದ್ದಾರೆಂದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.