ನಾಯಕರು ಮಾತನಾಡುತ್ತಾರೆ ಆದರೆ, ಸೇನೆ ಶೌರ್ಯದಿಂದಲೇ ಉತ್ತರ ನೀಡುತ್ತದೆ: ಪ್ರಧಾನಿ ಮೋದಿ
ದೇಶದಲ್ಲಿರುವ ನಾಯಕರು ಕೇವಲ ಮಾತನಾಡುತ್ತಾರೆ. ಆದರೆ, ಭಾರತೀಯ ಸೇನೆ ಮಾತನಾಡುವುದಿಲ್ಲ. ಬದಲಾಗಿ ತಮ್ಮ ಶೌರ್ಯದಿಂದಲೇ ಪ್ರತಿಕ್ರಿಯೆ ನೀಡಿತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ...

ನವದೆಹಲಿ: ದೇಶದಲ್ಲಿರುವ ನಾಯಕರು ಕೇವಲ ಮಾತನಾಡುತ್ತಾರೆ. ಆದರೆ, ಭಾರತೀಯ ಸೇನೆ ಮಾತನಾಡುವುದಿಲ್ಲ. ಬದಲಾಗಿ ತಮ್ಮ ಶೌರ್ಯದಿಂದಲೇ ಪ್ರತಿಕ್ರಿಯೆ ನೀಡಿತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
ಮನ್ ಕಿ ಬಾತ್'ನ 24 ಆವೃತ್ತಿಯಲ್ಲಿ ಮಾತನಾಡಿರುವ ಅವರು, ಉರಿ ಉಗ್ರ ದಾಳಿಯಲ್ಲಿ ಧೀರ ಹಾಗೂ ಶೂರರಾಗಿದ್ದ 18 ಮಕ್ಕಳನ್ನು ಭಾರತ ಕಳೆದುಕೊಂಡಿದೆ. ನಮಗೆ ನಮ್ಮ ದೇಶದ ಸೇನೆ ಮೇಲೆ ಅಪಾರವಾದ ನಂಬಿಕೆ ಹಾಗೂ ವಿಶ್ವಾಸವಿದೆ. ನಮ್ಮ ಸೈನಿಕರು ನಮಗೆ ಹೆಮ್ಮೆ.ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಈ ಮೂಲಕ ಸೆಲ್ಯೂಟ್ ಹೊಡೆಯುತ್ತಿದ್ದೇನೆ. ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ. ದಾಳಿ ಮಾಡಿದವರಾರನ್ನು ನಾವು ಬಿಡುವುದಿಲ್ಲ. ಅಪರಾಧಿಗಳಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ.
ದೇಶದಲ್ಲಿರುವ ನಾಯಕರು ಮಾತನಾಡುತ್ತಾರಷ್ಟೇ. ಆದರೆ, ಸೇನೆ ಮಾತನಾಡುವುದಿಲ್ಲ. ನಮ್ಮ ಸೇನೆ ತನ್ನ ಶೌರ್ಯವನ್ನು ಪ್ರದರ್ಶಿಸುವ ಮೂಲಕವೇ ಪ್ರತಿಕ್ರಿಯೆಯನ್ನು ನೀಡುತ್ತದೆ. ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಮರುಕಳಿಸುವುದಿಲ್ಲ ಎಂಬುದು ಅಲ್ಲಿನ ಜನರಿಗೆ ಅರ್ಥವಾಗಿದೆ. ಕಾಶ್ಮೀರದ ಜನರು ತಮ್ಮ ಮಕ್ಕಳು ಮತ್ತೆ ಶಾಲೆಗೆ ಕಳುಹಿಸಬೇಕೆಂದು ಇಚ್ಛಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಭದ್ರತೆಯೊದಗಿಸುವುದು ಕೇಂದ್ರದ ಜವಾಬ್ದಾರಿ. ಹೀಗಾಗಿ ಕೆಲವೊಮ್ಮೆ ಕಟ್ಟುನಿಟ್ಟಾಗಿ ಕಠಿಣವಾದ ಕ್ರಮಗಳನ್ನು ಕೈಗೊಳ್ಳಲೇಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ಯಾರಾಲಿಂಪಿಕ್ ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುತ್ತಿರುವ ಭಾರತೀಯರನ್ನು ಕೊಂಡಾಡಿದ ಅವರು, ಈ ಹಿಂದೆ ದೀಪಾ ಮಲಿಕ್ ಅವರು ಪದಕವನ್ನು ಗೆದ್ದಾಗ ಒಂದು ಮಾತನ್ನು ಹೇಳಿದ್ದರು. ಈ ಗೆಲುವಿನ ಮೂಲಕ ನನ್ನ ಅಂಗವೈಕಲ್ಯವನ್ನು ಸೋಲಿಸಿದ್ದೇನೆಂದು ಹೇಳಿದ್ದರು. ಈ ಹೇಳಿಕೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ದೇಶದಲ್ಲಿರುವ ಪ್ರತೀ ಪ್ರಜೆಗೂ ಪ್ಯಾರಾಲಿಂಪಿಕ್ ಹಾಗೂ ನಮ್ಮ ಕ್ರೀಡಾಪಟುಗಳ ಮೇಲೆ ಭಾವನಾತ್ಮಕ ಸಂಬಂಧ ಏರ್ಪಡುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ಅಕ್ಟೋಬರ್ 2ಕ್ಕೆ ನಮ್ಮ ಸ್ವಚ್ಛ ಭಾರತ ಅಭಿಯಾನಕ್ಕೆ 2 ವರ್ಷವಾಗುತ್ತದೆ. ಭಾರತದಲ್ಲಿರುವ ಕೊಳಕಿನ ವಿರುದ್ಧ ದ್ವೇಷದ ವಾತಾವರಣ ನಮ್ಮಲ್ಲಿ ನಿರ್ಮಾಣವಾಗಬೇಕು. ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮಾಧ್ಯಮಗಳೂ ಧನಾತ್ಮಕವಾಗಿ ಸ್ಪಂದಿಸುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ 2.48 ಕೋಟಿ ಶೌಚಾಲಯಗಳು ನಿರ್ಮಾಣವಾಗಿವೆ. 1.5 ಕೋಟಿ ಶೌಚಾಲಯಗಳನ್ನು ಮುಂದಿನ ವರ್ಷದಲ್ಲಿ ನಿರ್ಮಾಣ ಮಾಡಲಾಗುತ್ತದೆ. ದೇಶದ ಸ್ವಚ್ಛತಾ ಬೆಳವಣಿಗೆಗಳ ಬಗ್ಗೆ ಜನರು 1969 ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಭಾರತದ ಯುವಕರು ತ್ಯಾಜ್ಯವನ್ನೇ ಬಳಸಿಕೊಂಡು ಅದನ್ನು ಸಂಪತ್ತಾಗಿ ಮಾರ್ಪಾಡು ಮಾಡಬೇಕಿದೆ. ಸ್ವಚ್ಛ ಭಾರತ ಕುರಿತಂತೆ ಅಮಿತಾಭ್ ಬಚ್ಚನ್ ಅವರ ಶ್ರಮ ಶ್ಲಾಘಿಸುವಂತಾಹದ್ದಾಗಿದೆ ಎಂದಿದ್ದಾರೆ. ಅಲ್ಲದೆ, ಸರ್ಕಾರದ ಅಭಿವೃದ್ಧಿ ಕಾರ್ಯಕ್ಕೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 2 ಬಾಪು ಜನ್ಮದಿನವಾಗಿದ್ದು, ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ನೆನೆದು. ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಸಂಕಲ್ಪವನ್ನು ಮಾಡೋಣ. ಪರಮ್ ವೀರ್ ಸಿಂಗ್ ಅವರು ದೇವ್ ಪ್ರಯಾಗ್ ನಿಂದ ಗಂಗಾ ನದಿಯವರೆಗೂ 2800 ಕಿಮೀ ಗಳವರೆಗೂ ಸ್ವಚ್ಛತೆ ಕುರಿತಂತೆ ಸಂದೇಶವನ್ನು ಜನತೆಗೆ ನೀಡುವ ಸಲುವಾಗಿ ಈಜಲು ಹೊರಟಿದ್ದಾರೆ. ನೀವೂ ಕೂಡ ಅ.2 ರಂದು ನಡೆಯುವ ಸ್ವಚ್ಛತಾ ಅಭಿಯಾನದೊಂದಿಗೆ ನಮ್ಮೊಂದಿಗೆ ಕೈಜೋಡಿಸಿ. 2-4 ಗಂಟೆಗಳ ಕಾಲವನ್ನು ಇದಕ್ಕಾಗಿ ಸಮರ್ಪಿಸಿ ಎಂದು ಮನವಿ ಮಾಡಿದ್ದಾರೆ.
ಎರಡು ವರ್ಷಗಳ ಹಿಂದೆ ವಿಜಯದಶಮಿ ಹಬ್ಬದ ದಿನದಂದು ಮನ್ ಕಿ ಬಾತ್ ಕಾರ್ಯಕ್ರಮವನ್ನು ನಾನು ಆರಂಭಿಸಿದ್ದೆ. ಕಾರ್ಯಕ್ರಮ ಆರಂಭ ಮಾಡುವುದಕ್ಕೂ ಮುನ್ನ ಈ ಕಾರ್ಯಕ್ರಮ ಆರೋಪ ಹಾಗೂ ಪ್ರತ್ಯಾರೋಪಗಳ ಕಾರ್ಯಕ್ರಮವಾಗಬಾರದು ಎಂದು ಮೊದಲೇ ಯೋಚಿಸಿದ್ದೆ. ಮನ್ ಕಿ ಬಾತ್ ಕೇವಲ 15-20 ನಿಮಿಷಗಳ ಕಾಲ ನಡೆಯುವ ಸಂವಾದ ಕಾರ್ಯಕ್ರಮವಲ್ಲ. ಇಂದು ಮನ್ ಕಿ ಬಾತ್ ಸಮಾಜ ಪರಿವರ್ತನಾ ಕಾರ್ಯಕ್ರಮವಾಗಿ ಹೊರ ಹೊಮ್ಮಿದೆ ಎಂದಿದ್ದಾರೆ. ಇದೇ ವೇಳೆ ದೀನ್ ದಯಾಳ್ ಉಪಧ್ಯಾಯ ಅವರನ್ನು ಸ್ಮರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಾಲುಸಾಲಾಗಿ ಬರುತ್ತಿರುವ ಹಬ್ಬಗಳ ಕುರಿತಂತೆ ಮಾತನಾಡಿರುವ ಅವರು, ಬರುವ ವಾರ ನಾವು ದುರ್ಗಾ ಪೂಜೆ ಹಾಗೂ ನವರಾತ್ರಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಈ ಹಬ್ಬ ನಮ್ಮ ಏಕತೆ, ಸಾಮರಸ್ಯ ಹಾಗೂ ಶಕ್ತಿಯ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


