ಗೋವಾದಲ್ಲಿ ಇಂದು ಬ್ರಿಕ್ಸ್ ಶೃಂಗಸಭೆ ಆರಂಭ: ಭಯೋತ್ಪಾದನೆ ಹತ್ತಿಕ್ಕಲು ಭಾರತದಿಂದ ರಾಜತಾಂತ್ರಿಕ ಕ್ರಮ
ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನವನ್ನು ಮತ್ತಷ್ಟು ಏಕಾಂಗಿ ಮಾಡಲು ಹೊರಟಿರುವ ಭಾರತ ಗೋವಾದಲ್ಲಿ....

Published On :
ನವದೆಹಲಿ: ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನವನ್ನು ಮತ್ತಷ್ಟು ಏಕಾಂಗಿ ಮಾಡಲು ಹೊರಟಿರುವ ಭಾರತ ಗೋವಾದಲ್ಲಿ ಶನಿವಾರ ಆರಂಭವಾಗಲಿರುವ 8ನೇ ವಾರ್ಷಿಕ ಶೃಂಗಸಭೆಯನ್ನು ಪ್ರಮುಖ ವೇದಿಕೆಯಾಗಿ ಬಳಸಿಕೊಳ್ಳಲಿದೆ.
ಭಯೋತ್ಪಾದನೆಯನ್ನು ಹತ್ತಿಕ್ಕಲು ವಿಶ್ವಮಟ್ಟದಲ್ಲಿ ಬೇರೆ ರಾಷ್ಟ್ರಗಳಿಂದ ಸಹಕಾರ ಬಯಸುತ್ತಿರುವ ಭಾರತ ರಾಜತಾಂತ್ರಿಕವಾಗಿ ಅದನ್ನು ಹತ್ತಿಕ್ಕಲು ಮಾರ್ಗಗಳನ್ನು ಕಂಡುಹಿಡಿಯುತ್ತಿದೆ ಎನ್ನಬಹುದು.
ಇಂದಿನ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಬ್ರೆಝಿಲ್ ಹಾಗೂ ದಕ್ಷಿಣ ಆಫ್ರಿಕಾದ ನಾಯಕರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಭಯೋತ್ಪಾದನೆ, ವ್ಯಾಪಾರ ವಹಿವಾಟು ಮತ್ತು ಹೂಡಿಕೆಯ ವಿಷಯಗಳು ಚರ್ಚೆಗೆ ಬರುವ ಸಾಧ್ಯತೆಯಿದೆ.
ಬ್ರಿಕ್ಸ್ ರಾಷ್ಟ್ರಗಳನ್ನು ಒಟ್ಟಾಗಿ ಸೇರಿಸಿದರೆ ಇಲ್ಲಿ 3.6 ಶತಕೋಟಿ ಜನರಿದ್ದು ವಿಶ್ವದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನ ಈ ಐದು ದೇಶಗಳಲ್ಲಿದ್ದಾರೆ. ಈ ದೇಶಗಳ ಸರಾಸರಿ ಅಭಿವೃದ್ಧಿ ದರ 16.6 ಟ್ರಿಲಿಯನ್ ಇರಬಹುದು.
ವಿಶ್ವಸಂಸ್ಥೆಯ ಸವಿಸ್ತಾರವಾದ ಅಂತಾರಾಷ್ಟ್ರೀಯ ಭಯೋತ್ಪಾದನೆ ಸಭೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಯನ್ನು ಹೋಗಲಾಡಿಸಲು ಮತ್ತು ಪರಿಣಾಮಕಾರಿಯಾಗಿ ಸದೆಬಡಿಯಲು ಬ್ರಿಕ್ಸ್ ರಾಷ್ಟ್ರಗಳ ಮಧ್ಯೆ ಏಕತೆಗೆ ಭಾರತ ಉತ್ತೇಜನ ನೀಡುತ್ತದೆ.
ಶೃಂಗಸಭೆ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ಭಯೋತ್ಪಾದನೆ ವಿಷಯವನ್ನು ಇತರ ನಾಯಕರೊಂದಿಗೆ ಪ್ರಸ್ತಾಪಿಸುವ ನಿರೀಕ್ಷೆಯಿದೆ. ಕಳೆದ ತಿಂಗಳು ಪಾಕಿಸ್ತಾನ ಮೂಲದ ಭಯೋತ್ಪಾದಕರು ಕಾಶ್ಮೀರದ ಉರಿಯಲ್ಲಿ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಉಗ್ರಗಾಮಿಗಳನ್ನು ಹತ್ತಿಕ್ಕಲು ಭಾರತ ಮತ್ತಷ್ಟು ಒತ್ತು ನೀಡುವ ನಿರೀಕ್ಷೆಯಿದೆ.
ಉಗ್ರಗಾಮಿಗಳಿಗೆ ಪ್ರೋತ್ಸಾಹ ಮತ್ತು ಸುರಕ್ಷಿತ ತಾಣವಾಗಿರುವ ದೇಶಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಾಯ ಮಾಡುತ್ತಾ ಬಂದಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ಜಿ-20 ರಾಷ್ಟ್ರಗಳ ಸಭೆಯಲ್ಲಿ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿತ್ತು. ಜಿ-20 ಶೃಂಗಸಭೆಯಲ್ಲಿ ನೇರವಾಗಿ ಪಾಕಿಸ್ತಾನದ ಹೆಸರನ್ನು ಪ್ರತಿಪಾದಿಸದ ಮೋದಿ, ದಕ್ಷಿಣ ಏಷ್ಯಾದಲ್ಲಿನ ಒಂದು ದೇಶ ಭಯೋತ್ಪಾದನೆಯನ್ನು ಹಬ್ಬಿಸುತ್ತಿದ್ದು ಅದನ್ನು ಪ್ರತ್ಯೇಕವಾಗಿಡಬೇಕು ಎಂದು ಒತ್ತಾಯದ ಮನವಿ ಮಾಡಿಕೊಂಡಿದ್ದರು.
ಬ್ರಿಕ್ಸ್-ಬಿಮ್ಸ್ಟೆಕ್ ಶೃಂಗಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಾಯಕರು ಮಾತ್ರವಲ್ಲದೆ ಭೂತಾನ್, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಥೈಲ್ಯಾಂಡ್ ಮತ್ತು ಮಯನ್ಮಾರ್ ದೇಶಗಳ ಪ್ರಧಾನ ಮಂತ್ರಿಗಳು ಭಾಗವಹಿಸಲಿದ್ದಾರೆ.
ಬಹು ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರದ(ಬಿಮ್ಸ್ಟೆಕ್) ಬಂಗಾಳಕೊಲ್ಲಿಯ ಪುನಶ್ಚೇತನಕ್ಕೂ ಕೂಡ ಭಾರತ ಎಲ್ಲಾ ರೀತಿಯ ಪ್ರಯತ್ನ ಮಾಡಲಿದೆ.
ಇಂದು ಮತ್ತು ನಾಳೆ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಮುಖ ವಿಷಯಗಳ ಕುರಿತ ಚರ್ಚೆ, ಒಪ್ಪಂದ ನಾಳೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


