ದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಇಂತಹ ಮೈಲಿಗಲ್ಲನ್ನು ತಲುಪುತ್ತೇನೆ ಎಂದು ತಾವು ಊಹಿಸಿರಲಿಲ್ಲ ಎಂದು ಮೋದಿ ಸ್ಮರಿಸಿದರು.

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video
ದೆಹಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ
Published On :

ನವದೆಹಲಿ: ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳ ಸುದೀರ್ಘ ಸೇವೆ ವೈಯಕ್ತಿಕ ಸಾಧನೆ ಅಥವಾ ವೈಭವೀಕರಣದ ವಿಚಾರವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ವೈಯಕ್ತಿಕ ಮಹತ್ವಾಕಾಂಕ್ಷೆಗಿಂತಲೂ ಒಂದು ಧ್ಯೇಯದಿಂದ ಪ್ರೇರಿತರಾಗಿ ತಾವು ಜೀವನ ನಡೆಸಿದ್ದಾಗಿ ಅವರು ತಿಳಿಸಿದ್ದಾರೆ.

ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ಸೇವೆ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ನಡೆದ ‘ವಿಕಸಿತ ಭಾರತ ಸಂಕಲ್ಪ ಸಭೆ’ಯಲ್ಲಿ ಮಾತನಾಡಿದ ಮೋದಿ, ತಾವು ಮುಂದೆ ಏನಾಗಬೇಕು ಅಥವಾ ಭವಿಷ್ಯದಲ್ಲಿ ಏನಾಗಬಹುದು ಎಂಬುದರ ಬಗ್ಗೆ ಎಂದಿಗೂ ಯೋಚಿಸುತ್ತಾ ಕುಳಿತುಕೊಂಡಿರಲಿಲ್ಲ ಎಂದು ಹೇಳಿದರು.

“ಇಂದು ನಾನು ಸರ್ಕಾರದ ಮುಖ್ಯಸ್ಥನಾಗಿ ನಿರಂತರ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದೇನೆ. ಇದು ಜನರ ಆಶೀರ್ವಾದ. ದೇಶದ ಜನರ ಮುಂದೆ ನಾನು ತಲೆಬಾಗುತ್ತೇನೆ” ಎಂದು ಅವರು ಹೇಳಿದರು.

2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಇಂತಹ ಮೈಲಿಗಲ್ಲನ್ನು ತಲುಪುತ್ತೇನೆ ಎಂದು ತಾವು ಊಹಿಸಿರಲಿಲ್ಲ ಎಂದು ಮೋದಿ ಸ್ಮರಿಸಿದರು.

ಸರ್ಕಾರದ ಮುಖ್ಯಸ್ಥನಾಗಿ ಮಾತನಾಡುವುದಾದರೆ, 25 ವರ್ಷಗಳ ಈ ನಿರಂತರ ಪಯಣವನ್ನು ಜನರು ಸಾಧನೆ ಎಂದು ನೋಡುತ್ತಾರೆ. ಆದರೆ ನಾನು ಇದನ್ನು ಹೇಗೆ ನೋಡುತ್ತೇನೆ? ನನಗೆ ಇದು ವೈಯಕ್ತಿಕ ವೈಭವೀಕರಣದ ವಿಚಾರವಲ್ಲ, ಅದಕ್ಕೆ ಇದು ಸಂದರ್ಭವೂ ಅಲ್ಲ ಎಂದು ಹೇಳಿದರು.

ಚುನಾವಣಾ ರಾಜಕೀಯ ಪ್ರವೇಶಕ್ಕೂ ಮುನ್ನ ದಿನಗಳ ಸ್ಮರಣೆ

ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ದಿನಗಳನ್ನು ಸ್ಮರಿಸಿದ ಮೋದಿ, 50ನೇ ವಯಸ್ಸಿನಲ್ಲಿ ತಾವು ಅರಣ್ಯ ಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯಗಳ ಸೇವೆ ಮಾಡುತ್ತಾ ಹಾಗೂ ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತಾ ಕಾಲ ಕಳೆದಿದ್ದೆ. ಬಳಿಕ ಭಾರತೀಯ ಜನತಾ ಪಕ್ಷದಲ್ಲಿ ಸಂಘಟನಾ ಕಾರ್ಯವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ತಿಳಿಸಿದರು.

ನನ್ನ ರಾಜಕೀಯ ವರದಿಪತ್ರದಲ್ಲಿ ಸಂಘಟನಾ ಕಾರ್ಯಕರ್ತನಾಗಿ ಮಾಡಿದ ಕೆಲಸ ಮಾತ್ರ ಇತ್ತು. ನಾನು ಚುನಾವಣೆಗಳಲ್ಲಿ ತೊಡಗಿಸಿಕೊಂಡಿದ್ದೆ, ಆದರೆ ನಾನೇ ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ ಎಂದು ಹೇಳಿದರು.

ಚುನಾವಣಾ ರಾಜಕೀಯದಲ್ಲಿ ಛಾಪು ಮೂಡಿಸುವ ಆಸೆ ಇದ್ದಿದ್ದರೆ ತಾವು ಅದಕ್ಕೆ ಮೊದಲೇ ಪ್ರವೇಶಿಸಬಹುದಿತ್ತು. ಆದರೆ ವೈಯಕ್ತಿಕ ರಾಜಕೀಯ ಮಹತ್ವಾಕಾಂಕ್ಷೆಯನ್ನು ಬೆನ್ನಟ್ಟುವುದು ತಮ್ಮ ಸ್ವಭಾವವಾಗಿರಲಿಲ್ಲ ಎಂದು ಮೋದಿ ಹೇಳಿದರು.

ನಾನು ವೈಯಕ್ತಿಕ ಮಹತ್ವಾಕಾಂಕ್ಷೆಗಾಗಿ ಅಲ್ಲ, ಒಂದು ಧ್ಯೇಯಕ್ಕಾಗಿ ಬದುಕಿದ ವ್ಯಕ್ತಿ. ಬಾಲ್ಯದಿಂದಲೇ ತಮ್ಮಲ್ಲಿ ಬಿತ್ತಲಾದ ಮೌಲ್ಯಗಳು ಈ ದೃಷ್ಟಿಕೋನಕ್ಕೆ ಕಾರಣ ಎಂದು ತಿಳಿಸಿದರು.

ಜನರು, ಬಿಜೆಪಿ ಕಾರ್ಯಕರ್ತರಿಗೆ ಶ್ರೇಯ

ತಮ್ಮ ಪಯಣಕ್ಕೆ ಜನರು ಮತ್ತು ಬಿಜೆಪಿ ಕಾರ್ಯಕರ್ತರೇ ಕಾರಣ ಎಂದು ಮೋದಿ ಹೇಳಿದ್ದಾರೆ. ಕೋಟ್ಯಂತರ ನಾಗರಿಕರ ವಿಶ್ವಾಸ ಮತ್ತು ಲಕ್ಷಾಂತರ ಪಕ್ಷದ ಕಾರ್ಯಕರ್ತರ ಪರಿಶ್ರಮವೇ ತಮ್ಮ ದೊಡ್ಡ ಶಕ್ತಿ. ನನಗೆ ‘ಜನತಾ ಜನಾರ್ದನ’ ಎಂದರೆ ಸಾಕ್ಷಾತ್ ದೇವರ ಸ್ವರೂಪವೇ ಎಂದು ಹೇಳಿದರು.

25 ವರ್ಷಗಳ ಸಾರ್ವಜನಿಕ ವಿಶ್ವಾಸ ಮತ್ತು ಅನುಭವವು ತಮ್ಮ ವೈಯಕ್ತಿಕ ಆಸ್ತಿಯಲ್ಲ, ಅದು ದೇಶಕ್ಕೆ ಸೇರಿದ ಸಂಪತ್ತು ಎಂದು ಅವರು ಹೇಳಿದರು.

ನಾನು ಇಂದು ಏನಾಗಿದ್ದೇನೆಯೋ, ಯಾವ ಸ್ಥಾನದಲ್ಲಿದ್ದೇನೆಯೋ, ಯಾವ ಪಾತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆಯೋ, ಅದರಲ್ಲಿ ಅತಿ ದೊಡ್ಡ ಕೊಡುಗೆ ‘ಜನತಾ ಜನಾರ್ದನ’ದಾಗಿದೆ ಎಂದು ಹೇಳಿದರು.

‘ನಾನು ಜೀವನಪೂರ್ತಿ ವಿದ್ಯಾರ್ಥಿ’

ತಾವು ಜೀವನಪೂರ್ತಿ ವಿದ್ಯಾರ್ಥಿಯಾಗಿಯೇ ಉಳಿದಿದ್ದೇನೆ ಎಂದು ಹೇಳಿದ ಮೋದಿ, ವಡನಗರದ ತಮ್ಮ ಶಾಲಾ ಶಿಕ್ಷಕರು ಕಲಿಯುವ ಉತ್ಸುಕತೆಯ ಮಹತ್ವವನ್ನು ಕಲಿಸಿದ್ದನ್ನು ಸ್ಮರಿಸಿದರು.

ದೇಶಕ್ಕೆ ಹೆಚ್ಚಿನ ಕೊಡುಗೆ ನೀಡಲು ಪ್ರತಿದಿನವೂ ಹೊಸದನ್ನು ಕಲಿಯಲು ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿದರು.

ತಮ್ಮನ್ನು ಬೆಂಬಲಿಸಿದವರು ವಿಶ್ವಾಸದ ಶಕ್ತಿಯನ್ನು ಕಲಿಸಿದರೆ, ಟೀಕಿಸಿದವರು ಆತ್ಮಾವಲೋಕನದ ಶಕ್ತಿಯನ್ನು ಕಲಿಸಿದ್ದಾರೆ ಎಂದು ಮೋದಿ ಹೇಳಿದರು.

ನನ್ನೊಂದಿಗೆ ನಿಂತವರು ವಿಶ್ವಾಸದ ಶಕ್ತಿಯನ್ನು ತೋರಿಸಿದರು. ನನ್ನನ್ನು ವಿರೋಧಿಸಿದವರು ಪ್ರಜಾಪ್ರಭುತ್ವದ ಶಕ್ತಿಯನ್ನು ಕಲಿಸಿದರು ಎಂದು ಹೇಳಿದರು.

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ವಿಶ್ವಾಸವಿಟ್ಟಿರುವ ಬಿಜೆಪಿ, ಎನ್‌ಡಿಎ ಹಾಗೂ ರಾಜಕೀಯ ಸಹೋದ್ಯೋಗಿಗಳಿಗೂ ಮೋದಿ ಕೃತಜ್ಞತೆ ಸಲ್ಲಿಸಿದರು.

ತಾವು ರಾಜ್ಯ ವಿಧಾನಸಭೆಗಳು ಹಾಗೂ ಲೋಕಸಭೆಗೆ ಸ್ಪರ್ಧಿಸಿದ ಚುನಾವಣೆಗಳನ್ನು ಉಲ್ಲೇಖಿಸಿದ ಮೋದಿ, ಜನರು ನಿರಂತರವಾಗಿ ತಮ್ಮನ್ನು ಸೇವೆ ಮಾಡಲು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು. ಇದೇ ವೇಳೆ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಗೌರವ ಸಲ್ಲಿಸಿದರು.

‘ದೇಶ ಸೇವೆಗೆ ಇನ್ನಷ್ಟು ಶಕ್ತಿ ನೀಡಲಿ’

ದಿನದ ಆರಂಭದಲ್ಲಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇಶ ಮತ್ತು ದೇಶದ ಜನರಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾಗಿ ಮೋದಿ ಹೇಳಿದರು. ಇನ್ನಷ್ಟು ಶಕ್ತಿಯಿಂದ ದೇಶಕ್ಕೆ ಸೇವೆ ಸಲ್ಲಿಸಲು ಅಗತ್ಯವಾದ ಸಾಮರ್ಥ್ಯವನ್ನು ನೀಡುವಂತೆ ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಮುಂದಿನ ಗುರಿಗಳ ಕುರಿತು ಮಾತನಾಡಿದ ಮೋದಿ, 2047ರ ವೇಳೆಗೆ ವಿಕಸಿತ ಭಾರತ, ಆತ್ಮನಿರ್ಭರ ಭಾರತ, ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದು, ಒಲಿಂಪಿಕ್ಸ್ ಆಯೋಜಿಸುವುದು ಹಾಗೂ ಮಾನವ ಸಹಿತ ಬಾಹ್ಯಾಕಾಶ ಯಾನ ಕ್ಷೇತ್ರಕ್ಕೆ ಪ್ರವೇಶಿಸುವ ಗುರಿಗಳನ್ನು ಪ್ರಸ್ತಾಪಿಸಿದರು.

ಈ ಶಕ್ತಿ ಮತ್ತು ಆತ್ಮವಿಶ್ವಾಸ ಅದ್ಭುತವಾಗಿದೆ ಎಂದು ಹೇಳಿದ ಅವರು, ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಹೊಸ ಸಂಕಲ್ಪದೊಂದಿಗೆ ಮುನ್ನಡೆಯುವಂತೆ ಕರೆ ನೀಡಿದರು.

ಕೆಂಪುಕೋಟೆಯಿಂದ ತಾವು ಈ ಹಿಂದೆ ಮಾತನಾಡುವಾಗ ಸಾಮೂಹಿಕ ಪ್ರಯತ್ನದ ಶಕ್ತಿಯ ಬಗ್ಗೆ ಪ್ರಸ್ತಾಪಿಸಿದ್ದನ್ನು ಮೋದಿ ಸ್ಮರಿಸಿದರು. “ನಾವು ಇದನ್ನು ಸಾಧಿಸುತ್ತೇವೆ” ಎಂದು ಹೇಳುವ ಮೂಲಕ ರಾಷ್ಟ್ರೀಯ ಸಂಕಲ್ಪಕ್ಕೆ ಮತ್ತೊಮ್ಮೆ ಕರೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.