ಈಗ ವಿದ್ಯಾರ್ಥಿಗಳೇ ತಮ್ಮ ಶಿಕ್ಷಕರ ಮೌಲ್ಯಮಾಪನ ಮಾಡಬಹುದು!
ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮುಂದಾಗಿದ್ದು, ವಿದ್ಯಾರ್ಥಿಗಳೇ ತಮ್ಮ ಶಿಕ್ಷಕರ ಮೌಲ್ಯಮಾಪನ ಮಾಡುವ ಅವಕಾಶವನ್ನು ನೀಡಲು ಮುಂದಾಗಿದೆ.

ನವದೆಹಲಿ: ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮುಂದಾಗಿದ್ದು, ವಿದ್ಯಾರ್ಥಿಗಳೇ ತಮ್ಮ ಶಿಕ್ಷಕರ ಮೌಲ್ಯಮಾಪನ ಮಾಡುವ ಅವಕಾಶವನ್ನು ನೀಡಲು ಚಿಂತಿಸಿದೆ.
ಶೈಕ್ಷಣಿಕ ಸಾಧನಾ ಸೂಚಕ (ಎಪಿಐ) ಮಾನದಂಡದಲ್ಲಿ ಮಹತ್ತರ ಬದಲಾವಣೆ ತರಲು ನಿರ್ಧರಿಸಿರುವ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ಎಪಿಐಗೆ ವಿದ್ಯಾರ್ಥಿಗಳ ಶಿಕ್ಷಕರ ಮೌಲ್ಯಮಾಪನ ಪ್ರಕ್ರಿಯೆಯನ್ನು ಸೇರಿಸಲು ನಿರ್ಧರಿಸಿದೆ. ಪ್ರಸ್ತುತ ಶಿಕ್ಷಕರ ಶೈಕ್ಷಣಿಕ ಸಾಧನಾ ಸೂಚಕದಲ್ಲಿ ಪಠ್ಯೇತರ ಚಟುವಟಿಗಳು ಮತ್ತು ಸಂಶೋಧನಾ ಪ್ರಕ್ರಿಯೆಗಳು ಮಾನದಂಡವಾಗಿದ್ದು, ಇದರೊಂದಿಗೆ ವಿದ್ಯಾರ್ಥಿಗಳ ಶಿಕ್ಷಕರ ಮೌಲ್ಯಮಾಪನವನ್ನು ಕೂಡ ಸೇರಿಸಲು ಮಾನವ ಸಂಪನ್ಮೂಲ ಇಲಾಖೆ ನಿರ್ಧರಿಸಿದೆ.
ಮಾನವ ಸಂಪನ್ಮೂಲ ಇಲಾಖೆಯ ನೂತನ ಕಾನೂನಿನ ಅನ್ವಯ ಶೇ.75ರಷ್ಟು ಹಾಜರಾತಿ ಇರುವ ವಿದ್ಯಾರ್ಥಿಗಳು ತಮ್ಮ-ತಮ್ಮ ಶಿಕ್ಷಕರನ್ನು ಮೌಲ್ಯಮಾಪನ ಮಾಡಿ, ಶಿಕ್ಷಕರ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ. ಇದರಿಂದ ಶಿಕ್ಷಕರು ತಮ್ಮ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ. ತನ್ನ ಈ ನಿರ್ಧಾರಕ್ಕೆ ಕಾರಣವನ್ನೂ ಸ್ಪಷ್ಟಪಡಿಸಿರುವ ಮಾನವ ಸಂಪನ್ಮೂಲ ಇಲಾಖೆ, ಈ ಹಿಂದೆ ಎರಡು ವಿಭಾಗದಲ್ಲಿ ಎಪಿಐ ಅಂಕಗಳನ್ನು ನೀಡಲಾಗುತ್ತಿತ್ತು. ಅದರಂತೆ ಶೇ.30ರಷ್ಟು ಅಂಕ ಪಠ್ಯೇತರ ಚಟುವಟಿಕೆಗಳದ್ದಾದರೆ, ಮತ್ತೆ ಶೇ.30ರಷ್ಟು ಅಂಕ ಸಂಶೋಧನಾ ಪ್ರಕ್ರಿಯೆ ಮೇಲೆ ಆಧಾರವಾಗಿರುತ್ತಿತ್ತು.
2010ರಲ್ಲಿ ಜಾರಿಯಾದ ಈ ನಿಯಮವನ್ನು ಸಾಕಷ್ಟು ಶಿಕ್ಷಕರ ಸಂಘಗಳು ವಿರೋಧಿಸಿದ್ದವು. ಅಲ್ಲದೆ ಸರ್ಕಾರದ ಈ ಕ್ರಮ ನ್ಯಾಯಸಮ್ಮತವಾಗಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದವು. ಹೀಗಾಗಿ ಈ ನೂತನ ನಿಯಮವನ್ನು ಜಾರಿಗೆ ತರಲಾಗುತ್ತಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಶೈಕ್ಷಣಿಕ ಸಾಧನಾ ಸೂಚಕ (ಎಪಿಐ)ನ ಆಧಾರದ ಮೇಲೆ ಶಿಕ್ಷಕರ ಮೌಲ್ಯಮಾಪನ ಮಾಡುವ ಸರ್ಕಾರ, ಅವರ ಭಡ್ತಿ, ಭತ್ಯೆ ಇತ್ಯಾದಿ ಅಂಶಗಳನ್ನು ಈ ಎಪಿಐ ಮಾನದಂಡದ ಮೇಲೆ ನಿರ್ಧರಿಸುತ್ತದೆ. ಹೀಗಾಗಿ 2010ರಲ್ಲಿ ಜಾರಿಯಾಗಿದ್ದ ಕೇಂದ್ರ ಸರ್ಕಾರದ ನಿಯಮವನ್ನು ಸಾಕಷ್ಟು ಸರ್ಕಾರಿ ಶಿಕ್ಷಕರು ವಿರೋಧಿಸಿದ್ದರು. ಇದೀಗ ಸಚಿವೆ ಸ್ಮೃತಿ ಇರಾನಿ ನೇತೃತ್ವದ ಮಾನವ ಸಂಪನ್ಮೂಲ ಇಲಾಖೆ ತನ್ನ ನಿಯಮಕ್ಕೆ ತಿದ್ದುಪಡಿ ತಂದು ಹೊಸ ಮಾನದಂಡವನ್ನು ಅದಕ್ಕೆ ಸೇರಿಸಿದೆ. ಅದರಂತೆ ಇನ್ನು ಮುಂದೆ ಶಿಕ್ಷಕರ ಭಡ್ತಿ ಮತ್ತು ಭತ್ಯೆ ಹೆಚ್ಚಳದ ವಿಚಾರದಲ್ಲಿ ವಿದ್ಯಾರ್ಥಿಗಳ ಮೌಲ್ಯಮಾಪನ ಕೂಡ ಗಣನೆಗೆ ಬರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


