ದೇಶ

ಗೊಡೆಯೊಳಗೂ ಇಣುಕಬಲ್ಲ "ರಾಡಾರ್" ಸಂಶೋಧಿಸಿದ ಭಾರತೀಯ ವಿಜ್ಞಾನಿಗಳು

ಭಾರತದ ದೇಶದ ಹೆಮ್ಮೆಯ ರಕ್ಷಣಾ ಸಂಶೋಧನಾ ಸಂಸ್ಥೆ ಡಿಆರ್ ಡಿಒ ಮತ್ತೊಂದು ಸಾಧನೆ ಮಾಡಿದ್ದು, ಗೊಡೆಯೊಳಗೂ ಇಣುಕಿ ಅಲ್ಲಿನ ಚಟುವಟಿಕೆಗಳನ್ನು ವೀಕ್ಷಿಸಬಲ್ಲ ಪ್ರಬಲ ರಾಡಾರ್ ವ್ಯವಸ್ಥೆಯನ್ನು ಭಾರತೀಯ ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ಗೊಡೆಯೊಳಗೂ ಇಣುಕಬಲ್ಲ "ರಾಡಾರ್" ಸಂಶೋಧಿಸಿದ ಭಾರತೀಯ ವಿಜ್ಞಾನಿಗಳು
ಅತ್ಯಾಧುನಿಕ ರಾಡಾರ್ ವ್ಯವಸ್ಥೆ ದಿವ್ಯಚಕ್ಷು (ಸಾಂದರ್ಭಿಕ ಚಿತ್ರ)
Published On :

ನವದೆಹಲಿ: ಭಾರತದ ದೇಶದ ಹೆಮ್ಮೆಯ ರಕ್ಷಣಾ ಸಂಶೋಧನಾ ಸಂಸ್ಥೆ ಡಿಆರ್ ಡಿಒ ಮತ್ತೊಂದು ಸಾಧನೆ ಮಾಡಿದ್ದು, ಗೊಡೆಯೊಳಗೂ ಇಣುಕಿ ಅಲ್ಲಿನ ಚಟುವಟಿಕೆಗಳನ್ನು ವೀಕ್ಷಿಸಬಲ್ಲ ಪ್ರಬಲ  ರಾಡಾರ್ ವ್ಯವಸ್ಥೆಯನ್ನು ಭಾರತೀಯ ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ಡಿಆರ್ ಡಿಒದ ಈ ಬಹು ಉದ್ದೇಶಿತ ಯೋಜನೆಗೆ "ದಿವ್ಯಚಕ್ಷು" (ದಿವ್ಯ ದೃಷ್ಟಿ) ನಾಮಕರಣ ಮಾಡಲಾಗಿದ್ದು, ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್  ಡೆವೆಲೆಪ್ ಮೆಂಟ್ ವಿಭಾಗದ ವಿಜ್ಞಾನಿಗಳು ಈ ನೂತನ ರಾಡಾರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿರುವ ಡಿಆರ್ ಡಿಒ ಕಚೇರಿಯಲ್ಲಿ ಇದರ ಪ್ರಯೋಗಾತ್ಮಕ  ಪರೀಕ್ಷೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ವಿಜ್ಞಾನಿಗಳು ಸಂಶೋಧಿಸಿರುವ ಈ ನೂತನ ರಾಡಾರ್ ವ್ಯವಸ್ಥೆ ಸುಮಾರು 20-30 ಸೆಂ.ಮೀ ದಪ್ಪವಿರುವ ಗೊಡೆಯನ್ನು ಭೇಧಿಸಿ ಅದರೊಳಗಿನ ಚಲನವಲನಗಳನ್ನು  ದಾಖಲಿಸುತ್ತದೆ. ಇದಕ್ಕೆ ರಾಡಾರ್ ಗೆ ಅಳವಡಿಸಲಾಗಿರುವ ಥರ್ಮಲ್ ಇಮೇಜಿಂಗ್ ವ್ಯವಸ್ಥೆ ನೆರವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

"ಈ ನೂತನ ರಾಡಾರ್ ವ್ಯವಸ್ಥೆ 20 ಮೀಟರ್ ದೂರದಲ್ಲಿರುವ ಮತ್ತು ಸುಮಾರು 20-30 ಸೆಂ.ಮೀ ದಪ್ಪವಿರುವ ಗೊಡೆಯಾಚೆಗಿನ ಸಂಪೂರ್ಣ ಚಲನವಲನಗಳ ಮೇಲೆ ನಿಗಾ ಇಟ್ಟು, ಅವುಗಳ  ಸಂಪೂರ್ಣ ಚಿತ್ರಣವನ್ನು ನೀಡುತ್ತದೆ. ಅಲ್ಲದೆ ಗೊಡೆಯಾಚೆಗಿನ ಉಷ್ಣಾಂಶವನ್ನು ಕೂಡ ಇದು ದಾಖಲಿಸುವ ವ್ಯವಸ್ಥೆ ಇದ್ದು, ಭಯೋತ್ಪಾದಕ ದಾಳಿ ವೇಳೆಯಲ್ಲಿ ಉಗ್ರರಿಂದ ಅಥವಾ ಇನ್ನಾವುದೇ  ಕಠಿಣ ಸಂದರ್ಭಗಳಲ್ಲಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡ ಸಂದರ್ಭದಲ್ಲಿ ಈ ನೂತನ ರಾಡಾರ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು. ಇದರ ನೆರವಿನಿಂದ  ಭಯೋತ್ಪಾದಕರನ್ನು ಮತ್ತು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡ ವ್ಯಕ್ತಿಗಳ ವಿರುದ್ಧ ಸೈನಿಕರು ಹೋರಾಡಲು ನೆರವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ರಾಡಾರ್ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗವನ್ನು ರಹಸ್ಯ ಪ್ರದೇಶದಲ್ಲಿ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿ ನೀಡಲು ವಿಜ್ಞಾನಿಗಳು ನಿರಾಕರಿಸಿದ್ದಾರೆ.

2008ರಲ್ಲಿ ಮುಂಬೈ ಉಗ್ರ ದಾಳಿ ಪ್ರಕರಣದ ಬಳಿಕ ಇಂತಹ ವ್ಯವಸ್ಥೆಯ ಕುರಿತು ಸಂಶೋಧನೆ ನಡೆಸಲು ಕೇಂದ್ರ ಸರ್ಕಾರ ಡಿಆರ್ ಡಿಒಗೆ ಸೂಚಿಸಿತ್ತು. ಅದರಂತೆ 2010ರಲ್ಲಿ ಡಿಆರ್ ಡಿಒ  ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ಕೈಗೊಂಡಿದ್ದರು. ವಿಜ್ಞಾನಿಗಳ ಸತತ ಪರಿಶ್ರಮದ ಫಲವಾಗಿ ಈ ನೂತನ ರಾಡಾರ್ ವ್ಯವಸ್ಥೆ ಇದೀಗ ಭಾರತೀಯ ರಕ್ಷಣಾ ಪಡೆಯ ಸೇವೆಗೆ ಸಿದ್ಧವಾಗಿದ್ದು,  ಒಂದು ವೇಳೆ ಇದು ಭಾರತೀಯ ಸೇನೆಯನ್ನು ಸೇರಿದ್ದೇ ಆದರೆ ಇಂತಹ ಅತ್ಯಾಧುನಿಕ ರಾಡಾರ್ ವ್ಯವಸ್ಥೆ ಹೊಂದಿರುವ ಅಮೆರಿಕ, ರಷ್ಯಾ ಮತ್ತು ಚೀನಾ ರಾಷ್ಟ್ರಗಳ ಸಾಲಿಗೆ ಭಾರತ ಕೂಡ  ಸೇರಿಲಿದೆ.

ಇನ್ನು ಡಿಆರ್ ಡಿಒ ವಿಜ್ಞಾನಿಗಳು ಸಂಶೋಧಿಸಿರುವ ಈ ನೂತನ ರಾಡಾರ್ ವ್ಯವಸ್ಥೆ ವಿಶ್ವದ ಇತರೆ ರಾಷ್ಟ್ರಗಳ ಇಂತಹುದೇ ಮಾದರಿಯ ರಾಡಾರ್ ವ್ಯವಸ್ಥೆಯ ದರಕ್ಕಿಂತ ಕಡಿಮೆ ಇದ್ದು, ಇದಕ್ಕೆ  ಕೇವಲ 35 ಲಕ್ಷ ರು.ಗಳನ್ನು ಮಾತ್ರ ವ್ಯಯಿಸಲಾಗಿದೆ. ಆದರೆ ಇಂತಹ ರಾಡಾರ್ ವ್ಯವಸ್ಥೆಯ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕನಿಷ್ಠ 2 ಕೋಟಿ ರು.ಇದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.