ದೇಶ

ಭಾರತದ ಎನ್ ಎಸ್ ಜಿ ಸೇರ್ಪಡೆ ಪ್ರಯತ್ನ ಅವಿವೇಕದ ಕ್ರಮ: ವಿಜ್ಞಾನಿ ಎ೦.ಆರ್.ಶ್ರೀನಿವಾಸನ್

ಪರಮಾಣು ಪೂರೈಕೆದಾರರ ಒಕ್ಕೂಟ (ಎನ್ಎಸ್ ಜಿ) ಭಾರತದ ಸೇರ್ಪಡೆಗೆ ಕೇಂದ್ರ ಸರ್ಕಾರ ಅವಿರತ ಪ್ರಯತ್ನ ನಡೆಸುತ್ತಿದ್ದ, ಸರ್ಕಾರದ ಕ್ರಮವನ್ನು ಭಾರತದ ಹಿರಿಯ ವಿಜ್ಞಾನಿ ಎಂಆರ್ ಶ್ರೀನಿವಾಸನ್ ಅವರು "ಅವಿವೇಕದ ಕ್ರಮ" ಎಂದು ಟೀಕಿಸಿದ್ದಾರೆ...

ಭಾರತದ ಎನ್ ಎಸ್ ಜಿ ಸೇರ್ಪಡೆ ಪ್ರಯತ್ನ ಅವಿವೇಕದ ಕ್ರಮ: ವಿಜ್ಞಾನಿ ಎ೦.ಆರ್.ಶ್ರೀನಿವಾಸನ್
ವಿಜ್ಞಾನಿ ಎಂಆರ್ ಶ್ರೀನಿವಾಸನ್ ಮತ್ತು ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
Published On :

ಹೈದರಾಬಾದ್: ಪರಮಾಣು ಪೂರೈಕೆದಾರರ ಒಕ್ಕೂಟ (ಎನ್ಎಸ್ ಜಿ) ಭಾರತದ ಸೇರ್ಪಡೆಗೆ ಕೇಂದ್ರ ಸರ್ಕಾರ ಅವಿರತ ಪ್ರಯತ್ನ ನಡೆಸುತ್ತಿದ್ದ, ಸರ್ಕಾರದ ಕ್ರಮವನ್ನು ಭಾರತದ ಹಿರಿಯ  ವಿಜ್ಞಾನಿ ಎಂಆರ್ ಶ್ರೀನಿವಾಸನ್ ಅವರು "ಅವಿವೇಕದ ಕ್ರಮ" ಎಂದು ಟೀಕಿಸಿದ್ದಾರೆ.

ಎನ್ ಎಸ್ ಜಿ ಸೇರ್ಪಡೆ ಕುರಿತಂತೆ ಭಾರತದ ಕ್ರಮವನ್ನು ಟೀಕಿಸಿರುವ ಅವರು, ಅನಧಿಕೃತ, ಅನಗತ್ಯ ನಿರೀಕ್ಷೆ ಮತ್ತು ಅವಿವೇಕದ ಕ್ರಮ ಎಂದು ಬಣ್ಣಿಸಿದ್ದಾರೆ. ಶನಿವಾರ ಈ ಬಗ್ಗೆ  ಮಾಧ್ಯಮಗಳೊಂದಿಗೆ ಮಾತನಾಡಿರುವ ಅಣುಶಕ್ತಿ ಆಯೋಗದ ಸದಸ್ಯರು ಕೂಡ ಆಗಿರುವ ವಿಜ್ಞಾನಿ ಎ೦.ಆರ್.ಶ್ರೀನಿವಾಸನ್ ಅವರು, ಕೇಂದ್ರ ಸರ್ಕಾರದ ಕ್ರಮ ನಿಜಕ್ಕೂ ಅನಗತ್ಯ ಮತ್ತು  ಅವಿವೇಕದ ನಡೆಯಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರ ಭಾರತದ ಎನ್ ಎಸ್ ಜಿ ಸೇರ್ಪಡೆ ಕುರಿತಂತೆ ಅಣುಶಕ್ತಿ ಇಲಾಖೆಯ ಸಲಹೆ ಕೇಳಿದ್ದರೆ ಖಂಡಿತವಾಗಿಯೂ ಅದರ ಅಗತ್ಯವಿಲ್ಲ  ಎಂದು ಹೇಳುತ್ತಿದ್ದೆವು. ಏಕೆಂದರೆ ಎನ್‍ಎಸ್‍ಜಿ ಸದಸ್ಯತ್ವದಿ೦ದ ಭಾರತದ ಪರಮಾಣು ವಹಿವಾಟಿಗೆ ಯಾವುದೇ ವಿಶೇಷ ಅನುಕೂಲವಾಗುವುದಿಲ್ಲ. ಭಾರತಕ್ಕೆ ಅಗತ್ಯವಿರುವ ಪರಮಾಣು  ರಿಯಾಕ್ಟರುಗಳು ಮತ್ತು ಯುರೇನಿಯ೦ ಪೂರೈಕೆಗಾಗಿ ವಿದೇಶಗಳೊ೦ದಿಗೆ ಒಪ್ಪ೦ದ ಮಾಡಿಕೊಳ್ಳಲಾಗಿದ್ದು, ಇದಕ್ಕೆ 2008ರ ನಾಗರಿಕ ಪರಮಾಣು ಒಪ್ಪ೦ದದಲ್ಲೇ ವಿನಾಯಿತಿ ನೀಡಲಾಗಿದೆ.  ಹೀಗಿದ್ದೂ ಭಾರತ ಸರ್ಕಾರ ಅನಗತ್ಯವಾಗಿ ಈ ವಿಚಾರವನ್ನು ದೊಡ್ಡ ಸ೦ಗತಿಯನ್ನಾಗಿ ಬಿ೦ಬಿಸಿದೆ ಎ೦ದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಪರಮಾಣು ರಿಯಾಕ್ಟರುಗಳಿಗೆ ಯುರೇನಿಯಂ ಪೂರೈಕೆ ಸಂಬಂಧ ಎನ್ ಎಸ್ ಜಿ ಸಭೆಯಲ್ಲಿ ಚರ್ಚಿಸಲಾಗುತ್ತಿದೆಯಾದರೂ ಅದರಿಂದ ಯಾವುದೇ ಪ್ರಯೋಜನವಿಲ್ಲ. ಪರಮಾಣು  ರಿಯಾಕ್ಟರುಗಳಿಗೆ ಅಗತ್ಯವಾದ ಯುರೇನಿಯಂ ಪೂರೈಕೆಗಾಗಿ ಭಾರತ ಈಗಾಗಲೇ ರಷ್ಯಾ, ಫ್ರಾನ್ಸ್, ಅಮೆರಿಕ ಸೇರಿದಂತೆ ವಿವಿಧ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡು ವಿವಿಧ  ಯೋಜನೆಗಳನ್ನು ಈಗಾಗಲೇ ಆರಂಭಿಸಿದೆ. ಇದಲ್ಲದೆ ಭಾರತಕ್ಕೆ ಯುರೇನಿಯಂ ಪೂರೈಸುವ ಸಂಬಂಧ ಖಜಕೀಸ್ತಾನ, ಕೆನಡಾ ಮತ್ತು ಆಸ್ಟ್ರೇಲಿಯಾ ದೇಶದೊಂಗಿಗೆ ಒಪ್ಪಂದ  ಮಾಡಿಕೊಳ್ಳಲಾಗಿದೆ. ಹೀಗಿದ್ದು ಭಾರತ ಎನ್ ಎಸ್ ಜಿ ಒಕ್ಕೂಟ ಸೇರ್ಪಡೆಗಾಗಿ ಬೇರೆ ದೇಶಗಳ ಓಲೈಕೆಗೆ ಯತ್ನಿಸುತ್ತಿರುವುದು ನಿಜಕ್ಕೂ ಅವಿವೇಕದ ಕ್ರಮ ಎಂದು ಹೇಳಿದ್ದಾರೆ.

ಅಂತೆಯೇ ಎನ್ ಎಸ್ ಜಿ ಒಕ್ಕೂಟ ವ್ಯವಸ್ಥೆಯನ್ನೇ ಟೀಕಿಸಿರುವ ವಿಜ್ಞಾನಿ ಶ್ರೀನಿವಾಸನ್ ಅವರು, ಯಾವುದೇ ರೀತಿಯ ಪರಮಾಣು ಯೋಜನೆಗಳಲ್ಲಿಯೇ ತೊಡಗಿಕೊಳ್ಳದ ನ್ಯೂಜಿಲೆಂಡ್ ಮತ್ತು  ಐರ್ಲೆಂಡ್ ನಂತಹ ದೇಶಗಳು ಒಕ್ಕೂಟದಲ್ಲಿವೆ. ಇಂತಹ ದೇಶಗಳು ಹಲವು ಪರಮಾಣು ಯೋಜನೆಗಳಲ್ಲಿ ಈಗಾಗಲೇ ಯಶಸ್ವಿಯಾಗಿರುವ ಭಾರತದ ಒಕ್ಕೂಟ ಸೇರ್ಪಡೆಗೆ ವಿರೋಧಿಸುತ್ತಿವೆ.  ಹೀಗಿರುವಾಗ ಈ ಒಕ್ಕೂಟವನ್ನು ಅದು ಹೇಗೆ ಪರಮಾಣು ಪೂರೈಕೆದಾರರ ಉನ್ನತ ಸಮೂಹ ಎಂದು ಕರೆಯುವಿರಿ? ಎಂದು ಶ್ರೀನಿವಾಸನ್ ಪ್ರಶ್ನಿಸಿದ್ದಾರೆ.

ಅಂತೆಯೇ ಈ ಒಕ್ಕೂಟ ಸೇರ್ಪಡೆಯಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಶ್ರೀನಿವಾಸನ್ ಅವರು, "ಒಂದು ವೇಳೆ ಭಾರತ ಎನ್ ಎಸ್ ಜಿ  ಸೇರ್ಪಡೆಗೊಳ್ಳಲು ವಿಫಲರಾದರೂ ಅದರಿಂದ ನಮ್ಮ ಸಂಶೋಧನೆಯಾಗಲಿ ಅಥವಾ ನಮ್ಮ ಪರಮಾಣು ಯೋಜನೆಗಳ ಮೇಲೆಯಾಗಲಿ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ನಮ್ಮ  ಕಾರ್ಯವನ್ನು ನಾವು ಮಾಡುತ್ತೇವೆ ಎಂದು ಶ್ರೀನಿವಾಸನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.