ಭಾರತ ಪ್ರಜಾಪ್ರಭುತ್ವದಲ್ಲಿಯೇ ಎನ್'ಡಿಎ ಸರ್ಕಾರದ ಆಡಳಿತ ಕರಾಳದ ಅವಧಿಯಾಗಿದೆ: ಮಮತಾ
ನೋಟು ನಿಷೇಧ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ಮತ್ತೆ ವಾಗ್ದಾಳಿ ಮುಂದುವರೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಭಾರತದ ಪ್ರಜಾಪ್ರಭುತ್ವದಲ್ಲಿಯೇ ಎನ್'ಡಿಎ ಸರ್ಕಾರದ ಆಡಳಿತದ ಅವಧಿ...

ಕೋಲ್ಕತಾ: ನೋಟು ನಿಷೇಧ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ಮತ್ತೆ ವಾಗ್ದಾಳಿ ಮುಂದುವರೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಭಾರತದ ಪ್ರಜಾಪ್ರಭುತ್ವದಲ್ಲಿಯೇ ಎನ್'ಡಿಎ ಸರ್ಕಾರದ ಆಡಳಿತದ ಅವಧಿ ಅತ್ಯಂತ ಕರಾಳದ ಅವಧಿಯಾಗಿದೆ ಎಂದು ಗುರುವಾರ ಹೇಳಿದ್ದಾರೆ.
ನೋಟು ನಿಷೇಧ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ದೇಶದಲ್ಲಿ ಮಾನವ ನಿರ್ಮಿತ ಆರ್ಥಿಕ ತುರ್ತುಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಮೋದಿಯವರು ಕೂಡಲೇ ತಮ್ಮ ನಿರ್ಧಾರ ಕುರಿತಂತೆ ಸ್ಪಷ್ಟನೆ ನೀಡಬೇಕಿದ್ದು, ಕಳೆದ ಒಂದು ತಿಂಗಳಿನಿಂದ ದೇಶದಲ್ಲಿ ನಿರ್ಮಾಣವಾಗಿರುವ ಸಂಪೂರ್ಣ ಸಮಸ್ಯೆಯ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ನೋಟು ನಿಷೇಧದ ಹಿಂದಿರುವ ತಂತ್ರವಾದರೂ ಏನು? ನೋಟು ನಿಷೇಧದಿಂದ ಲಾಭವಾಗಿರುವುದಾದರೂ ಯಾರಿಗೆ? ಕೇವಲ ಪ್ರಧಾನಿ ಮೋದಿ ಹಾಗೂ ಅವರ ಜೊತೆಗಾಗರಿಗೆ ಇದರಿಂದ ಲಾಭವಾಗಿದೆ. ಎಲ್ಲದಕ್ಕೂ ಸಂಸತ್ತು ಜವಾಬ್ದಾರಿಯುತವಾಗಿದ್ದು, ಸಂಸತ್ತನ್ನೇ ಕೇಂದ್ರ ಸರ್ಕಾರ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಪ್ರಧಾನಿ ಮೋದಿಯವರು ಯಾರಿನ್ನೂ ಲೆಕ್ಕೆಕ್ಕೆ ತೆಗೆದುಕೊಳ್ಳದೆ ದೇಶದಲ್ಲಿರುವ ಪ್ರತೀಯೊಬ್ಬರ ಹಣವನ್ನು ಲೂಟಿ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ದೇಶದ ಪ್ರಧಾನಮಂತ್ರಿ ಸ್ಥಾನಕ್ಕೆ ಸಾಕಷ್ಟು ಜನರು ಬಂದಿದ್ದಾರೆ, ಆದರೆ, ಮೋದಿ ಮಾಡಿದಂತೆ ಯಾರೊಬ್ಬರು ಈ ವರೆಗೂ ಮಾಡಿರಲಿಲ್ಲ. ಸಾರ್ವಜನಿಕರ ಹಣವನ್ನು ತಮ್ಮದೇ ಹಣವೆಂಬಂತೆ ಮೋದಿ ವರ್ತಿಸುತ್ತಿದ್ದಾರೆ. ಕಪ್ಪುಹಣ ಎಲ್ಲಿ ಹೋಯಿತು? ಪ್ರಸ್ತುತ ನೀವು ತೆಗೆದುಕೊಳ್ಳುತ್ತಿರುವ ಹಣ ಸಾರ್ವಜನಿಕರ ಹಣವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಆರ್'ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಮೌನವನ್ನು ಪ್ರಶ್ನಿಸಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಯಕತ್ವದಲ್ಲಿ ಸರ್ಕಾರ ಸಂಪೂರ್ಣವಾಗಿ ಬಿದ್ದುಹೋಗಿದೆ. ನೋಟು ನಿಷೇಧ ಕುರಿತಂತೆ ಆರ್'ಬಿಐ ಗವರ್ನರ್ ಅವರು ಒಂದು ಸಣ್ಣ ಪದವನ್ನೂ ಹೇಳದೆ ಮೌನವಹಿಸಿದ್ದಾರೆ. ನೋಟು ಕುರಿತಂತೆ ಯಾರೊಬ್ಬರು ಏನನ್ನೂ ಮಾಹಿತಿ ನೀಡುತ್ತಿಲ್ಲ. ಮೋದಿ ತಾವೊಬ್ಬ ಹುಲಿ ಎಂದು ತಿಳಿದುಕೊಂಡಿದ್ದು, ತಾವು ನಡೆದಿದ್ದೇ ಹಾದಿ, ತಾವು ತೆಗೆದುಕೊಂಡ ನಿರ್ಧಾರವೇ ಸರಿ ಎಂದು ತಿಳಿಯುತ್ತಿದ್ದಾರೆ. ಅಲಿಬಾಬಾ ನಂತೆ ಎಲ್ಲವನ್ನೂ ರಹಸ್ಯವಾಗಿ ಮಾಡುತ್ತಿದ್ದಾರೆ. ಸಂವಿಧಾನದ ಹುದ್ದೆಯೊಂದರಲ್ಲಿ ಕುಳಿತಿದ್ದೇನೆಂಬುದನ್ನು ಮೋದಿ ನೆನಪಿಸಿಕೊಳ್ಳಬೇಕಿದೆ.
ಮೋದಿಯವರ ಜೊತೆಗೆ ಆರ್'ಬಿಐ ಗವರ್ನರ್ ಕೂಡ ಕೈಜೋಡಿಸಿದ್ದಾರೆ. ನಾಳೆ ಎನಾಗುತ್ತದೆ ಎಂಬುದು ಜನರಿಗೆ ತಿಳಿಯುತ್ತಿಲ್ಲ. ಪ್ರಧಾನಿ ಮೋದಿಯವರು ಯಾವದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ. ಯಾವುದೇ ಉತ್ತರವನ್ನು ನೀಡುತ್ತಿಲ್ಲ. ಕೇವಲ ಭಾಷಣವನ್ನು ಮಾಡುತ್ತಾರೆ. ದೇಶದಲ್ಲಿ ಕಳೆದ 1 ತಿಂಗಳಿಂದ ಎದುರಾಗಿರುವ ಸಮಸ್ಯೆಗಳ ಹೊಣೆಗಾರಿಕೆಯನ್ನು ಪ್ರಧಾನಿ ಮೋದಿಯವರು ಹೊತ್ತುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


