ಎಫ್-16 ಯುದ್ಧ ವಿಮಾನ ಮಾರಾಟಕ್ಕೆ ಮುಂದಾದ ಅಮೆರಿಕ ಬೆನ್ನಿಗಿರಿದ ಪಾಕಿಸ್ತಾನ?
ರಕ್ಷಣಾ ವಿಚಾರದಲ್ಲಿ ಅಮೆರಿಕದಿಂದ ಪ್ರತೀ ವರ್ಷ ಮಿಲಿಯನ್ ಡಾಲರ್ ಗಟ್ಟಲೆ ನೆರವು ಪಡೆಯುವ ಪಾಕಿಸ್ತಾನ, ನೆರವು ನೀಡಿದ ದೊಡ್ಣಣ್ಣನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆಯೇ..?

ವಾಷಿಂಗ್ಟನ್: ರಕ್ಷಣಾ ವಿಚಾರದಲ್ಲಿ ಅಮೆರಿಕದಿಂದ ಪ್ರತೀ ವರ್ಷ ಮಿಲಿಯನ್ ಡಾಲರ್ ಗಟ್ಟಲೆ ನೆರವು ಪಡೆಯುವ ಪಾಕಿಸ್ತಾನ, ನೆರವು ನೀಡಿದ ದೊಡ್ಣಣ್ಣನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆಯೇ..?
ಇಂತಹದೊಂದು ವಾದಕ್ಕೆ ಕಾರಣವಾಗಿರುವುದು ಅಮೆರಿಕ ಎನ್ ಎಸ್ ಎ (ನ್ಯಾಷನಲ್ ಸೆಕ್ಯುರಿಟಿ ಆರ್ಕೈವ್) ಬಿಡುಗಡೆ ಮಾಡಿರುವ ಇತ್ತೀಚಿನ ವರದಿ. 2009ರಲ್ಲಿ ಆಫ್ಘಾನಿಸ್ತಾನದಲ್ಲಿರುವ ಸಿಐಎ ಶಿಬಿರದ ಮೇಲೆ ಉಗ್ರರು ನಡೆಸಿದ್ದ ದಾಳಿ ಪ್ರಕರಣಕ್ಕೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ನೆರವು ನೀಡಿದ್ದ ವಿಚಾರವನ್ನು ಅಮೆರಿಕ ಎನ್ಎಸ್ಎ ಬಹಿರಂಗ ಪಡಿಸಿದೆ. ಅಂದು ನಡೆದಿದ್ದ ಭೀಕರ ದಾಳಿಯಲ್ಲಿ ಅಮೆರಿಕದ 7 ಮಂದಿ ತಜ್ಞ ಏಜೆಂಟರು, ಕಾಂಟ್ರಾಕ್ಟರ್ಗಳು ಮತ್ತು ಇತರ ಮೂವರು ಧಾರುಣವಾಗಿ ಸಾವನ್ನಪ್ಪಿದ್ದರು.
ಇದೀಗ ಈ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಅಮೆರಿಕ ಎನ್ಎಸ್ಎ ಸಂಸ್ಥೆ, ದಾಳಿಯ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಕೈವಾಡವಿದ್ದು, ಸಿಐಎ ಶಿಬಿರದ ಮೇಲೆ ನಡೆದ ಭಯಾನಕ ದಾಳಿಗೆ ಐಎಸ್ಐ ಹಣಕಾಸಿನ ನೆರವು ಒದಗಿಸಿತ್ತು ಎಂದು ಹೇಳಿದೆ. ಎನ್ಎಸ್ಎ ಬಹಿರಂಗ ಪಡಿಸಿರುವ 2010ರ ರಹಸ್ಯ ಕಡತಗಳಲ್ಲಿ ಈ ಮಾಹಿತಿ ಇರುವುದು ಈಗ ಬೆಳಕಿಗೆ ಬಂದಿದ್ದು, ಹಖಾನಿ ಉಗ್ರ ಸಂಘಟನೆಯ ದಾಳಿಗಳಿಗೆ ಪಾಕಿಸ್ತಾನ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಡೈರೆಕ್ಟೋರೇಟ್ (ಐಎಸ್ಐ) ನೆರವು ನೀಡಿದೆ. ಈ ನೆರವುಗಳಲ್ಲಿ 2009ರ ಡಿಸೆಂಬರ್ 30ರಂದು ಸಿಐಎ ಶಿಬಿರದ ಮೇಲೆ ನಡೆದ ದಾಳಿ ಕೂಡ ಸೇರಿದ್ದು, ದಾಳಿಗೆ ಐಎಸ್ಐ ಅಧಿಕಾರಿಗಳು ಉಗ್ರ ಸಂಘಟನೆಗೆ 2,00,000 ಡಾಲರ್ ನೆರವು ಕೂಡಾ ನೀಡಿದ್ದರು ಎಂದು ದಾಖಲೆಗಳು ತಿಳಿಸಿವೆ.
ಆಫ್ಘಾನಿಸ್ತಾನದ ಛಪ್ಮನ್ ನಲ್ಲಿರುವ ಸಿಐಎ ಶಿಬಿರದ ಮೇಲೆ ಜೋರ್ಡಾನ್ ವೈದ್ಯ ಹಾಗೂ ಉಗ್ರ ಮುಖಂಡ ಖಲೀಲ್ ಅಬು ಮುಲಾಲ್ ಅಲ್ ಬಲವಿ ನೇರ ಕೈವಾಡವಿತ್ತು. ಅಲ್ ಖೈದಾ ಉಗ್ರ ಮುಖಂಡರಾದ ಓಸಾಮಾ ಬಿನ್ ಲಾಡೆನ್ ಮತ್ತು ಅಯ್ಮಾನ್ ಅಲ್ ಜವಾಹರಿಯ ಬೇಟೆಗೆ ಸಿಐಎ ಈತನನ್ನು ಬಳಸಿಕೊಂಡಿತ್ತು. ಆದರೆ ಬಳಿಕ ಹಖಾನಿ ಉಗ್ರ ಸಂಘಟನೆ ಸೇರಿದ ಬಲವಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಸಲುವಾಗಿ ಕೆಲಸ ಮಾಡುತ್ತಿದ್ದ ಎಂದು ದಾಖಲೆಗಳು ಹೇಳಿವೆ.
ಒಟ್ಟಾರೆ ಅಮೆರಿಕದಲ್ಲಿ ಸೋರಿಕೆಯಾಗಿರುವ ರಹಸ್ಯ ಕಡತದಲ್ಲಿನ ಅಂಶಗಳು ಇದೀಗ ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಯುದ್ಧ ವಿಮಾನ ಖರೀದಿ ಒಪ್ಪಂದದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


