ದೇಶ

ದೇಶದಲ್ಲಿ ಕ್ಯಾನ್ಸರ್‌ಗೆ ಪ್ರತಿದಿನ 1,300 ಜನ ಬಲಿ

ಕ್ಯಾನ್ಸರ್ ಬಗ್ಗೆ ಸರ್ಕಾರ ಏನೆಲ್ಲ ಜಾಗೃತಿ ಮೂಡಿಸಿದರೂ ಈ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಕೇಳಿದರೆ ಎಂಥವರೂ ಬೆಚ್ಚಿಬೀಳಲೇ ಬೇಕು...

ದೇಶದಲ್ಲಿ ಕ್ಯಾನ್ಸರ್‌ಗೆ ಪ್ರತಿದಿನ 1,300 ಜನ ಬಲಿ
ಕ್ಯಾನ್ಸರ್
Published On :

ನವದೆಹಲಿ: ಕ್ಯಾನ್ಸರ್ ಬಗ್ಗೆ ಸರ್ಕಾರ ಏನೆಲ್ಲ ಜಾಗೃತಿ ಮೂಡಿಸಿದರೂ ಈ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಕೇಳಿದರೆ ಎಂಥವರೂ ಬೆಚ್ಚಿಬೀಳಲೇ ಬೇಕು. ಪ್ರತಿ ದಿನ ಕ್ಯಾನ್ಸರ್‍ಗೆ ಬಲಿಯಾಗುತ್ತಿರುವವರ ಸಂಖ್ಯೆ ಬರೋಬ್ಬರಿ 1,300! ಕಳೆದ ವರ್ಷ ಸುಮಾರು 5 ಲಕ್ಷ ಮಂದಿಯನ್ನು ಈ ರೋಗ ಆಪೋಶನ ತೆಗೆದುಕೊಂಡಿದೆ.

ಇಂಥದ್ದೊಂದು ಆಘಾತಕಾರಿ ವರದಿ ಪ್ರಕಟಿಸಿದ್ದು ನ್ಯಾಷನಲ್ ಕ್ಯಾನ್ಸರ್ ರಿಜಿಸ್ಟ್ರಿ ಪ್ರೋಗ್ರಾಂ ಆಫ್ ದಿ ಇಂಡಿಯಾ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಕೇಂದ್ರ. ಐಸಿಎಂಆರ್ ವರದಿ ಪ್ರಕಾರ 2012ರಿಂದ 2014ರ ನಡುವೆ ಕ್ಯಾನ್ಸರ್‍ಗೆ ಬಲಿಯಾದವರ ಸಂಖ್ಯೆ ಶೇ.6ರಷ್ಟು ಹೆಚ್ಚಾಗಿದೆ. ಕ್ಯಾನ್ಸರ್ (ಅರ್ಬುದ) ಬರಲು ಬಹುಮುಖ್ಯ ಕಾರಣ ಸಾಂಕ್ರಾಮಿಕ ರೋಗ ಮತ್ತು ಬದಲಾದ ಜೀವನಶೈಲಿ.

2014ರಲ್ಲಿ 28,20,179 ಮಂದಿ ಕ್ಯಾನ್ಸರ್ ಪೀಡಿತರಲ್ಲಿ 4,91,598 ಮಂದಿ ಮೃತಪಟ್ಟಿದ್ದರೆ, 2013ರಲ್ಲಿದ್ದ 29,34,314 ಕ್ಯಾನ್ಸರ್ ರೋಗಿಗಳಲ್ಲಿ 4,78,180 ಮಂದಿ ಅಸುನೀಗಿದ್ದಾರೆ. 2012ರಲ್ಲಿ 30,16,628 ರೋಗಿಗಳಲ್ಲಿ 4,65,169 ಮಂದಿ ಬಲಿಯಾಗಿದ್ದಾರೆ. 2012-2014ರಲ್ಲಿ ವಾರ್ಷಿಕವಾಗಿ ದೇಶಾದ್ಯಂತ ಕ್ಯಾನ್ಸರ್‍ಗೆ ಬಲಿಯಾದವರ ಸಂಖ್ಯೆ ಸರಿಸುಮಾರು ನಾಲ್ಕೂವರೆ ಲಕ್ಷದಿಂದ 5 ಲಕ್ಷ ಮಂದಿ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಾರಣಗಳೇನು?
ಅನಾರೋಗ್ಯಕರ ಜೀವನಶೈಲಿ, ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಬಳಕೆ, ಅನಾರೋಗ್ಯಕರ ಆಹಾರ ಸೇವನೆ, ರೋಗನಿರ್ಣಯ ಸೌಲಭ್ಯದಲ್ಲಿನ ಕೊರತೆ ಸೇರಿ ಹಲವಾರು ಕಾರಣಗಳು ಕ್ಯಾನ್ಸರ್ ರೋಗ ಹೆಚ್ಚಳಕ್ಕೆ ಕಾರಣವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಲ್ಲೂ ಪ್ರಮುಖ ಪಾತ್ರವಹಿಸಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ 2013-14ನೇ ಸಾಲಿನಲ್ಲಿ ದೇಶಾದ್ಯಂತ ಕ್ಯಾನ್ಸರ್ ರೋಗಿಗಳಿಗಾಗಿ ವಿಶೇಷ ಸಲಹಾ ಕೇಂದ್ರ ಪ್ರಾರಂಭಿಸುವ ಯೋಜನೆಗೆ ಚಾಲನೆ ನೀಡಿತು. ಇದಕ್ಕಾಗಿ 2014ರಲ್ಲಿ ಎಲ್ಲ ರಾಜ್ಯಗಳಲ್ಲಿ ಸೌಲಭ್ಯ ಬಲವರ್ಧನೆಗಾಗಿ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರಚಿಸಿತು.

ಕ್ಷಯರೋಗವೂ ಗಂಭೀರ
ಕ್ಯಾನ್ಸರ್ ನಂತರ ಅತಿ ಹೆಚ್ಚು ಮಂದಿಯನ್ನು ಬಲಿತೆಗೆದುಕೊಳ್ಳುತ್ತಿರುವುದು ಕ್ಷಯರೋಗ. 2011ರಲ್ಲಿ 63,265, 2012ರಲ್ಲಿ 61,887 ಮತ್ತು 2013ರಲ್ಲಿ 57,095 ಮಂದಿ ಈ ರೋಗದಿಂದ ಅಸುನೀಗಿದ್ದಾರೆ ಎಂದು ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಮಂಡಳಿ ತನ್ನ ಪರಿಷ್ಕೃತ ವರದಿಯಲ್ಲಿ ತಿಳಿಸಿದೆ. ಹೀಗಾಗಿ ಕೇಂದ್ರ ಸರ್ಕಾರ ಕ್ಷಯರೋಗ ನಿಯಂತ್ರಣ ಔಷಧ ಸೇರಿದಂತೆ ಉಚಿತವಾಗಿ ಪರೀಕ್ಷೆ ಮತ್ತು ಚಿಕಿತ್ಸಾ ಯೋಜನೆಯನ್ನೂ ಹಮ್ಮಿಕೊಂಡಿದೆ. ಆದರೆ, ಜಾಗೃತಿ ಕೊರತೆಯಿಂದಾಗಿ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಒಂದು ಲಕ್ಷ ಜನಸಂಖ್ಯೆ ಇರುವ ನಗರ ಪ್ರದೇಶ ಹಾಗೂ 50 ಸಾವಿರ ಜನಸಂಖ್ಯೆಯುಳ್ಳ ಬುಡಕಟ್ಟು, ಗುಡ್ಡಗಾಡು ಮತ್ತು ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ಮೈಕ್ರೋಸ್ಕೋಪಿ ಕೇಂದ್ರಗಳನ್ನು ತೆರೆದಿದ್ದು, ದೇಶದಲ್ಲಿ ಪ್ರಸ್ತುತ 13,000 ಮೈಕ್ರೋಸ್ಕೋಪಿ ಕೇಂದ್ರ ಮತ್ತು 6 ಲಕ್ಷಕ್ಕೂ ಹೆಚ್ಚು ನೇರ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದೆ.

ರಾಜ್ಯದಲ್ಲಿ 1.40 ಲಕ್ಷ ರೋಗಿಗಳು
ಬೆಂಗಳೂರು: ಕರ್ನಾಟಕದಲ್ಲೂ ಕ್ಯಾನ್ಸರ್‍ಗೆ ತುತ್ತಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಅಂಕಿಅಂಶ ಗಮನಿಸುವುದಾದರೆ ಪ್ರತಿ ವರ್ಷ ಸರಾಸರಿ 51 ಸಾವಿರ ಹೊಸ ಕ್ಯಾನ್ಸರ್ ರೋಗಿಗಳು ಸೇರ್ಪಡೆಯಾಗುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.