ಐಟಿ ಕಂಪನಿಗಳಿಗೆ ಒತ್ತುವರಿ ದಂಡ
ಬೆಳ್ಳಂದೂರು ಮತ್ತು ಆಗರ ಕೆರೆಗಳ ನಡುವೆ ಅಕ್ರಮವಾಗಿ ಮತ್ತು ನಿಯಮ ಮೀರಿ ಕಟ್ಟಡ ನಿರ್ಮಿಸಿ, ರಾಜಕಾಲುವೆ ಸೇರಿದಂತೆ ಕೆರೆಗಳ ಜಲಮೂಲಗಳಿಗೆ ಹಾನಿ ಮಾಡಿರುವ ಮಂತ್ರಿ ಟೆಕ್ ಝೋನ್ ಪ್ರೈವೇಟ್ ಲಿಮಿಟೆಡ್ ಗೆ ರು.117.35 ಕೋಟಿ ಮತ್ತು ಕೋರ್ ಮೈಂಡ್ ಸಾಫ್ಟ್ ವೇರ್...

ನವದೆಹಲಿ: ಬೆಳ್ಳಂದೂರು ಮತ್ತು ಆಗರ ಕೆರೆಗಳ ನಡುವೆ ಅಕ್ರಮವಾಗಿ ಮತ್ತು ನಿಯಮ ಮೀರಿ ಕಟ್ಟಡ ನಿರ್ಮಿಸಿ, ರಾಜಕಾಲುವೆ ಸೇರಿದಂತೆ ಕೆರೆಗಳ ಜಲಮೂಲಗಳಿಗೆ ಹಾನಿ ಮಾಡಿರುವ ಮಂತ್ರಿ ಟೆಕ್ ಝೋನ್ ಪ್ರೈವೇಟ್ ಲಿಮಿಟೆಡ್ ಗೆ ರು.117.35 ಕೋಟಿ ಮತ್ತು ಕೋರ್ ಮೈಂಡ್ ಸಾಫ್ಟ್ ವೇರ್ ಅಂಡ್ ಸರ್ವೀಸ್ ಪ್ರೈವೇಟ್ ಲಿಮಿಡೆಟ್‍ಗೆ ರು. 22.5 ಕೋಟಿ ದಂಡ ವಿಧಿಸಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶ ನೀಡಿದೆ.
ದಂಡದ ಮೊತ್ತವನ್ನು ಈ ಸಂಸ್ಥೆಗಳು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಾವತಿಸಬೇಕು. ಮಂಡಳಿಯು ಈ ಮೊತ್ತ ಬಳಸಿ ಎರಡೂ ಕಂಪನಿಗಳು ಉಂಟು ಮಾಡಿರುವ ಕೆರೆಗಳ ಜಲಮೂಲ ಮತ್ತಿತರ ಪರಿಸರ ಹಾನಿಯನ್ನು ನಿವಾರಿಸಿ, ಪರಿಸರ ಪುನಶ್ಚೇತನಗೊಳಿಸಬೇಕು ಎಂದು ಆದೇಶಿಸಿದೆ.
ಇದಷ್ಟೇ ಅಲ್ಲ, ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿ ಬೆಂಗಳೂರಿನ ಇತರ ಕೆರೆಗಳ ಒತ್ತುವರಿ ಬಗ್ಗೆಯೂ ಅಧ್ಯಯನ ಮಾಡಿ, ಅಲ್ಲಿನ ಜಲಮೂಲದ ಬಗ್ಗೆ ವರದಿ ನೀಡುವಂತೆಯೂ ಪೀಠ ಸೂಚನೆ ನೀಡಿದೆ.
ಉನ್ನತ ಮಟ್ಟದ ಸಮಿತಿ ರಚನೆ
ಎಂಟು ಸದಸ್ಯರನ್ನೊಳಗೊಂಡ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿರುವ ನ್ಯಾಯಾಧೀಕರಣವು, ಮೂರು ತಿಂಗಳೊಳಗೆ ಎರಡು ಕೆರೆಗಳ ಜಲಮೂಲಗಳಿಗೆ ಈ ಕಂಪನಿಗಳು ಮಾಡಿರುವ ಹಾನಿಯ ಅಧ್ಯಯನ ಮಾಡಬೇಕು ಮತ್ತು ಆಗಿರುವ ಹಾನಿ ನಿವಾರಿಸಿ ಮತ್ತೆ ಯಥಾಸ್ಥಿತಿ ಕಾಯ್ದುಕೊಳ್ಳುವ ಮಾರ್ಗೋಪಾಯಗಳನ್ನು
ಶಿಫಾರಸು ಮಾಡುವಂತೆ ಸೂಚಿಸಿದೆ.
ಎಲ್ಲಕ್ಕೂ ಮಿಗಿಲಾಗಿ ಉನ್ನತ ಮಟ್ಟದ ತಜ್ಞರ ಸಮಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸುವವರೆಗೆ ಬೆಂಗಳೂರಿನಲ್ಲಿ ಕೆರೆ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಹೊಸ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅನುಮೋದನೆ ನೀಡದಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹಾಗೂ ವಿವಿಧ ಸಕ್ಷಮ ಪ್ರಾಧಿಕಾರಿಗಳಿಗೆ ನಿರ್ಬಂಧ ಹೇರಿದೆ.
ಸಮಿತಿ ಕಾರ್ಯವ್ಯಾಪ್ತಿ
- ಸಮಿತಿಯು ಕೇವಲ ಬೆಳ್ಳಂದೂರು- ಆಗರ ಕೆರೆ ಅಷ್ಟೇ ಅಲ್ಲ, ಬೆಂಗಳೂರಿನ ಇತರ ಕೆರೆಗಳ ಬಗ್ಗೆಯೂ ಅಧ್ಯಯನ ಮಾಡಿ, ಜಲ ಮೂಲ ರಕ್ಷಣೆಗೆ ಮಾರ್ಗೋಪಾಯಗಳನ್ನು ಶಿಫಾರಸು ಮಾಡಬೇಕು.
- ಎರಡು ಕಂಪನಿಗಳು ಗದ್ದೆಗಳು (ತೇವ ಪ್ರದೇಶ) ಮತ್ತು ರಾಜಕಾಲುವೆಗಳನ್ನು ಒತ್ತುವರಿ ಮಾಡಿವೆಯೇ ಎಂಬುದನ್ನು ಪರಿಶೀಲಿಸಬೇಕು.
- ಮಾಡಿದ್ದರೆ, ಅದರಿಂದ ಪರಿಸರದ ಮೇಲಾಗಿರುವ ವ್ಯತಿರಿಕ್ತ ಪರಿಣಾಮ ಏನು ಎನ್ನುವುದನ್ನು ಪತ್ತೆ ಹಚ್ಚಬೇಕು. ಈ ಕಂಪನಿಗಳು ಇತರ ಯೋಜನೆಗಳಲ್ಲಿ ರಾಜಕಾಲುವೆ ಒತ್ತುವರಿ ಮಾಡಿವೆಯೇ ಅಧ್ಯಯನ ಮಾಡಬೇಕು.
- ಈ ಯೋಜನೆಯಿಂದ ಕೆರೆ ಮತ್ತು ಗದ್ದೆಗಳಿಗೆ ಯಾವುದೇ ರೀತಿಯ ಪರಿಸರ ಹಾನಿಯಾಗಿದೆಯೇ ಎಂಬುದರ ಬಗ್ಗೆ ವರದಿ ನೀಡಬೇಕು.
- ಹಾನಿಯಾಗಿದ್ದರೆ, ಯೋಜನೆಯ ಯಾವ ಭಾಗ ಮತ್ತು ಎಷ್ಟು ಪ್ರಮಾಣದಲ್ಲಿ ನೆಲಸಮ ಮಾಡಬೇಕು ಎಂಬುದನ್ನು ತಿಳಿಸಬೇಕು.
- ಕೆರೆಗಳ ಸುತ್ತಮುತ್ತಲ ಕಾಪು ವಲಯ ಎಷ್ಟಿರಬೇಕು. ಈ ನಿರ್ಮಾಣ ಯೋಜನೆಯಿಂದ ಮುಂದೆ ಸಂಚಾರ ಸಂದಣಿ ಹೆಚ್ಚಿ ಅದರಿಂದ ಕೆರೆ ಮತ್ತು ಕೆರೆಯ ಅಚ್ಚುಕಟ್ಟುಪ್ರದೇಶದ ಮೇಲೆ ಹಾನಿಯಾಗುತ್ತದೆಯೇ ಎಂಬುದನ್ನು ಅಂದಾಜಿಸಬೇಕು.
- ಬೆಂಗಳೂರಿನಲ್ಲಿರುವ ಕೆರೆಗಳನ್ನು ಸಂರಕ್ಷಿಸಿಕೊಳ್ಳಲು ಅಗತ್ಯ ಮಾರ್ಗೋಪಾಯಗಳನ್ನು ಶಿಫಾರಸು ಮಾಡಬೇಕು.
- ನಿರ್ಮಾಣ ಯೋಜನೆಯು ಅನುಮತಿ ಪಡೆದ ನಕ್ಷೆಗೆ ಅನುಗುಣವಾಗಿ ಇದೆಯೇ ಪರಿಶೀಲಿಸಬೇಕು. ನೀರು ಮರುಬಳಕೆಗೆ ಅಗತ್ಯ ಸಂಸ್ಕರಣ ಘಟಕ ಸ್ಥಾಪಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು.
ಗ್ರಾಹಕರ ಮೇಲೆ ಹೇರಬೇಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


