ದೇಶ

ರಾಜ್ಯದಾದ್ಯಂತ ಮ್ಯಾಗಿ ಮಾರಾಟಕ್ಕೆ ಅನಿರ್ದಿಷ್ಟಾವಧಿ ನಿರ್ಬಂಧ

ರಾಜ್ಯದಲ್ಲಿ ಮ್ಯಾಗಿಗೆ ಅನಿರ್ದಿಷ್ಟಾವಧಿವರೆಗೆ ನಿಷೇಧ ಹೇರಲಾಗಿದ್ದು, ಮ್ಯಾಗಿಯ ಉತ್ಪಾದನೆ- ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಖಡಕ್ಕಾಗಿ ಎಚ್ಚರಿಸಿದೆ...

ರಾಜ್ಯದಾದ್ಯಂತ ಮ್ಯಾಗಿ ಮಾರಾಟಕ್ಕೆ ಅನಿರ್ದಿಷ್ಟಾವಧಿ ನಿರ್ಬಂಧ
ರಾಜ್ಯದಾದ್ಯಂತ ಮ್ಯಾಗಿ ಮಾರಾಟಕ್ಕೆ ಅನಿರ್ದಿಷ್ಟಾವಧಿ ನಿರ್ಬಂಧ
Published On :

ಬೆಂಗಳೂರು: ರಾಜ್ಯದಲ್ಲಿ ಮ್ಯಾಗಿಗೆ ಅನಿರ್ದಿಷ್ಟಾವಧಿವರೆಗೆ ನಿಷೇಧ ಹೇರಲಾಗಿದ್ದು, ಮ್ಯಾಗಿಯ ಉತ್ಪಾದನೆ- ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಖಡಕ್ಕಾಗಿ ಎಚ್ಚರಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಮ್ಯಾಗಿಯಲ್ಲಿ ಸೀಸದ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅದನ್ನು ಎರಡು ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲಾಗಿದೆ. ಈ ನಡುವೆಯೇ ಕೇಂದ್ರ ಸರ್ಕಾರದ ಸೂಚನೆಯ ಅನುಸಾರ ರಾಜ್ಯದಲ್ಲಿ ಮ್ಯಾಗಿಯನ್ನು ನಿಷೇಧಿಸಲಾಗಿದೆ ಎಂದರು.

ರಾಜ್ಯದಲ್ಲಿ ಮಾರಾಟವಾಗುತ್ತಿರುವ ನೆಸ್ಲೆ ಕಂಪನಿಯ ಮ್ಯಾಗಿಯಲ್ಲಿ ಸೀಸದ ಅಂಶ `ಅನುಮತಿ ಮಿತಿ' ಮೀರಿಲ್ಲ ಎಂದು ಪ್ರಯೋಗಾಲಯದ ವರದಿ ಸ್ಪಷ್ಟಪಡಿಸಿದೆ. ಸೀಸದ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅದನ್ನು 2 ಪ್ರಯೋಗಾಲಯಗಳಿಗೆ ಕಳುಹಿಸಿ ಕೊಡಲಾಯಿತು. ರೋಬಸ್ಟ್ ಮೆಟಿರಿಯಲ್ಸ್ ಟೆಕ್ನಾಲಜಿಯ ಪ್ರಯೋಗಾಲಯ ನೀಡಿದ ವರದಿಯಂತೆ ಮ್ಯಾಗಿಯಲ್ಲಿ ಸೀಸದ ಮೀತಿ ಮೀರಿಲ್ಲ. ಮೊದಲ ಪುಟದಿಂದ ಟಿಡಿಯು ಎಸ್‍ಯುವಿ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆದಿದ್ದು ಸೋಮವಾರ ವರದಿ ಬರಲಿದೆ. ಹಾಗೆಯೇ ಎರಡೂ ಲ್ಯಾಬ್‍ಗಳಲ್ಲಿ ಮ್ಯಾಗಿಯಲ್ಲಿರುವ ಮೋನೋಸೋಡಿಯಂ ಗ್ಲಾಟಮೆಟ್ ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆಯೂ ವರದಿ ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಕೇಂದ್ರದ ಸೂಚನೆಯಲ್ಲೇನಿದೆ?:
ದೇಶದ ವಿವಿಧೆಡೆ ಕೆಲವು ಕಡೆಗಳಲ್ಲಿ ಮಾರಾಟವಾಗುತ್ತಿದ್ದ ಮ್ಯಾಗಿಯನ್ನು ಪರೀಕ್ಷೆಗೊಳಪಡಿಸಿದಾಗ ಅದರಲ್ಲಿ ಸೀಸದ ಅಂಶ ಹೆಚ್ಚಿರುವುದು ಕಂಡುಬಂದಿದೆ. ಹಾಗೆಯೇ ಮಿಸ್ ಬ್ರ್ಯಾಂಡ್ ಮಾಡಿದ್ದಕ್ಕೆ, ನೋ ಎಂಎಸ್‍ಜಿ ಕಂಟೆಂಟ್ ಎಂದು ಮುದ್ರಿಸುವ ಹಿನ್ನೆಲೆಯಲ್ಲಿ ಆದೇಶವೊಂದನ್ನು ಹೊರಡಿಸಿದ್ದು, ತಕ್ಷಣವೇ ಮ್ಯಾಗಿ ಉತ್ಪಾದನೆ- ಮಾರಾಟ
ನಿಲ್ಲಿಸುವಂತೆ ಸೂಚಿಸಲಾಗಿದೆ. ಈ ಆದೇಶವನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ ಎಂದರು.

ಕಟ್ಟುನಿಟ್ಟಿನ ಕ್ರಮ:
ರಾಜ್ಯದಲ್ಲಿ ಮ್ಯಾಗಿಯ ಉತ್ಪಾದನೆ ನಿಲ್ಲಿಸುವಂತೆ ಸಂಬಂಧಪಟ್ಟ ಘಟಕಕ್ಕೆ ಲಿಖಿತ ಮುಖೇನ ತಿಳಿಸಲಾಗಿದೆ. ಜೊತೆಗೆ ದಾಸ್ತಾನು ಹಿಂಪಡೆಯುವಂತೆ ಮತ್ತು ಚಿಲ್ಲರೆ ವ್ಯಾಪಾರಿಗಳು ಮಾರದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಖಾದರ್ ತಿಳಿಸಿದರು. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಡಿಎಚ್‍ಓ, ಆಹಾರ ಮತ್ತು ಸುರಕ್ಷತೆ ಅಧಿಕಾರಿಗಳು ಈ ವಿಚಾರದಲ್ಲಿ ಎಚ್ಚರಿಕೆ ವಹಿಸಿ ಮ್ಯಾಗಿ ಮಾರಾಟವಾಗದಂತೆ ಗಮನಿಸಬೇಕು. ಒಂದು ವೇಳೆ ನಿಯಮ ಮೀರಿ ಮಾರಾಟ ಮಾಡಿದ್ದು ಕಂಡು ಬಂದಲ್ಲಿ ಕಾನೂನು ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

ಮುಂದೇನು?:
ಕೇಂದ್ರದ ಸೂಚನೆಯಂತೆ ಈ ವಿಚಾರದಲ್ಲಿ ಸ್ಪಷ್ಟತೆ ಬರುವವರೆಗೆ ರಾಜ್ಯದಲ್ಲಿ ಮ್ಯಾಗಿ ಮಾರಾಟ ನಿಷೇಧ ಹೇರಲಾಗಿದೆ. ಅಲ್ಲದೇ, ಇತರೆ ಕಂಪನಿಯ ಮ್ಯಾಗಿಯನ್ನೂ ರಾಜ್ಯ ಸರ್ಕಾರ ಪರಿಶೀಲನೆಗೊಳಪಡಿಸಿದ್ದು, ವರದಿಯಾಗಿ ಕಾಯುತ್ತಿದೆ. ಇದಲ್ಲದೇ ಎರಡೂ ಪ್ರಯೋಗಾಲಯಗಳಿಂದ ಬರುವ ವರದಿಯಲ್ಲಿ ಪಶ್ಚಿಮಬಂಗಾಳದ ಸಿಎಫ್ ಟಿಆರ್‍ಐಗೆ ಕಳಿಸಲಾಗುತ್ತದೆ. ಅಲ್ಲಿಂದ ವರದಿ ಬಂದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುತ್ತದೆ. ಒಂದು ವೇಳೆ ಕೇಂದ್ರ ನಿಷೇಧ ಹಿಂಪಡೆದು ರಾಜ್ಯದ ಮ್ಯಾಗಿಯಲ್ಲಿ ಸೀಸದ ಅಂಶವಿದ್ದರೆ ನಾವು ನಿಷೇಧಿಸುತ್ತೇವೆ. ಹಾಗೆಯೇ ಕೇಂದ್ರ ನಿಷೇಧ ಹೇರಿ, ರಾಜ್ಯದ ಮ್ಯಾಗಿಯಲ್ಲಿ ಸೀಸದ ಅಂಶವಿಲ್ಲವೆಂದರೆ ನಿಷೇಧ ಹಿಂತೆಗೆಯುವ ಬಗ್ಗೆಯೂ ನಿರ್ಧರಿಸುತ್ತೇವೆ ಎಂದರು.

ನೆಸ್ಲೆ ಮ್ಯಾಗಿ ಮಾತ್ರವಲ್ಲ:

ಸದ್ಯ ರಾಜ್ಯದ ಮಾರುಕಟ್ಟೆಯಲ್ಲಿರುವ 7 ಬ್ರ್ಯಾಂಡ್ ಮ್ಯಾಗಿಯನ್ನು ಪ್ರಯೋಗಕ್ಕೆ ಕಳಿಸಲಾಗಿದ್ದು, ಅವುಗಳ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ಅಷ್ಟೇ ಅಲ್ಲದೇ, ಮ್ಯಾಗಿ ತಯಾರಾಗುವ ಹಂತದಲ್ಲಿನ ಸ್ಥಿತಿಯನ್ನು ಪ್ರಯೋಗಕ್ಕೆ ಒಡ್ಡಲು ಆಸಕ್ತಿ ವಹಿಸಿದ್ದೇವೆ. ಇದಕ್ಕಾಗಿ ಒಬ್ಬ ಅಧಿಕಾರಿಯನ್ನು ನಿಯೇಜಿಸಿದ್ದು ಅವರು ಮ್ಯಾಗಿ ತಯಾರಿಕೆಯ ವಿವಿಧ ಹಂತಗಳಲ್ಲೂ ಪರೀಕ್ಷೆ ನಡೆಸಿ ಯಾವುದೇ ಗೊಂದಲ ಸೃಷ್ಟಿಯಾಗದಂತೆ ವಸ್ತುಸ್ಥಿತಿ ಅರಿಯುವ ವಿಶೇಷ ಪ್ರಯತ್ನವನ್ನೂ ಮಾಡಲಾಗಿದೆ ಎಂದರು.

ಸಿಎಫ್ ಟಿಆರ್‍ಐಗೆ ವಿರುದ್ಧ ಪತ್ರ:
ಮ್ಯಾಗಿ ಕುರಿತು ಗೊಂದಲ ಎದ್ದಾಗ ಪರೀಕ್ಷಿಸಿಕೊಡುವಂತೆ ಮೈಸೂರಿನಲ್ಲಿರುವ ಸಿಎಫ್ ಟಿಆರ್‍ಐಗೆ ಕೋರಲಾಗಿತ್ತು. ಆದರೆ ಅವರು ನಿಯಮಗಳನ್ನು ಹೇಳಿ ತಿರಸ್ಕರಿಸಿ, ಅಗತ್ಯಬಿದ್ದರೆ ಪಶ್ಚಿಮಬಂಗಾಲದ ಸಿಎಫ್ ಟಿಆರ್‍ಐಗೆ ಕಳಿಸುವಂತೆ ಸಲಹೆ ನೀಡಿದರು.

ಅಲ್ಲವಾದರೆ ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿಕೊಳ್ಳುವಂತೆ ಸಲಹೆ ನೀಡಿದರು. ವಾಸ್ತವವಾಗಿ ಈ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಂಡು ಪರೀಕ್ಷಿಸಿಕೊಡಬೇಕಾಗಿತ್ತು ಎಂದು ಯು.ಟಿ.ಖಾದರ್ ಅಬಿsಪ್ರಾಯಪಟ್ಟರು. ಅನಿವಾರ್ಯ ಸಂದರ್ಭದಲ್ಲಿ ಸಹಕಾರ ನೀಡಿದ ಈ ಸಂಸ್ಥೆಯಿಂದ ಉಪಕಾರವಾಗಲಿ ಎಂದು
ಅಧಿಕಾರಿಗಳೊಂದಿಗೆ ಮಾತುಕತೆ ಸಹ ನಡೆದಿತ್ತು. ಒಂದು ಸಂದರ್ಭದಲ್ಲಿ ಅನುಮತಿಯೂ ನೀಡಿದ್ದರು. ಆದರೆ, ಈಗ ತಿರಸ್ಕರಿಸಿದ್ದಾರೆ. ಇಂತಹ ಸಂಸ್ಥೆಯಿಂದ ಉಪಕಾರವಾಗುವ ಬದಲು ಉಪದ್ರ ಆಗಬಾರದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಿರುವುದಾಗಿ ತಿಳಿಸಿದರು.' ಯಾವುದೇ ಆಹಾರ ಉತ್ಪನ್ನಗಳನ್ನು ಪರೀಕ್ಷಿಸುವ ಅಧಿಕಾರ ರಾಜ್ಯಕ್ಕಿದೆ. ಆದರೆ, ಹೀಗಾಗುತ್ತದೆ ಎಂದು ಎಣಿಸಿರಲಿಲ್ಲ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಇನ್ನು ಮುಂದೆ ಗಂಭೀರವಾಗಿ ಪರಿಗಣಿಸುತ್ತೇವೆ.

- ಯು.ಟಿ.ಖಾದರ್, ಆರೋಗ್ಯ ಸಚಿವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.