ಗಡಿ ಶಾಂತಿಗೆ ನೀತಿ ಸಂಹಿತೆ ಅಗತ್ಯ: ಚೀನಾ
ಭಾರತ ಮತ್ತು ಚೀನಾ ಗಡಿಯಲ್ಲಿ ಶಾಶ್ವವಾಗಿ ಶಾಂತಿ ನೆಲೆಸಬೇಕಾದರೆ ಗಡಿ ನಿಯಂತ್ರಣ ರೇಖೆ ಬಳಿ ನೀತಿ ಸಂಹಿತೆಯ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿದೆ ಎಂದು ಚೀನಾ ಗುರುವಾರ ಹೇಳಿದೆ...

ಬೀಜಿಂಗ್: ಭಾರತ ಮತ್ತು ಚೀನಾ ಗಡಿಯಲ್ಲಿ ಶಾಶ್ವವಾಗಿ ಶಾಂತಿ ನೆಲೆಸಬೇಕಾದರೆ ಗಡಿ ನಿಯಂತ್ರಣ ರೇಖೆ ಬಳಿ ನೀತಿ ಸಂಹಿತೆಯ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿದೆ ಎಂದು ಚೀನಾ ಗುರುವಾರ ಹೇಳಿದೆ.
ಕಳೆದ ತಿಂಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚೀನಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗಡಿ ನಿಯಂತ್ರಣ ರೇಖೆ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಪ್ರತಿಪಾದಿಸಿದ್ದರು. ಮೋದಿ ಚೀನಾ ಭೇಟಿ ನಂತರ ಇದೇ ಮೊದಲ ಬಾರಿಗೆ ಚೀನಾ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿದ್ದು, ಭಾರತ ಮತ್ತು ಚೀನಾ ಗಡಿಯಲ್ಲಿ ಶಾಂತಿ ನೆಲೆಸಬೇಕಾದರೆ ಗಡಿಯಲ್ಲಿ ಉಭಯ ದೇಶಗಳು ನೀತಿ ಸಂಹಿತೆಯ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಉಭಯ ದೇಶಗಳ ಮಧ್ಯೆ ನೀತಿ ಸಂಹಿತೆ ಜಾರಿಯಾದರೆ ಭವಿಷ್ಯದಲ್ಲಿ ಗಡಿ ಸಮಸ್ಯೆಗಳು ಮತ್ತೆ ಉದ್ಭವಿಸುವುದಿಲ್ಲ ಎಂದು ಚೀನಾ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಚೀನಾ ವಿದೇಶಾಂಗ ಸಚಿವಾಲಯದ ಏಷ್ಯಾ ವ್ಯವಹಾರಗಳ ಡೆಪ್ಯುಟಿ ಜನರಲ್ ಹ್ಯುಯಾಂಗ್ ಕ್ಸಿಲಿಯಾನ್ ಅವರು, ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡುವುದರಲ್ಲಿ ನಾವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಇದೇ ರೀತಿಯಲ್ಲಿ ನಾವು ಶಾಂತಿಯನ್ನು ಕಾಪಾಡಬೇಕಿದೆ. ಎಷ್ಟೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರು ಹಲವು ಬಾರಿ ಸೂಕ್ಷ್ಮ ಪ್ರದೇಶಗಳ ಮೇಲೆ ಆಕ್ರಮಣಗಳು ನಡೆಯುತ್ತಿರುತ್ತವೆ. ಹಾಗಾಗಿ ಗಡಿಯಲ್ಲಿ ಸೂಕ್ತ ರೀತಿಯ ಭದ್ರತೆ ಹಾಗೂ ನೀತಿಗಳ ಕುರಿತಂತೆ ಉಭಯ ದೇಶಗಳು ಒಪ್ಪಂದ ಮಾಡಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಟಿಬೆಟ್ ಕುರಿತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಉಭಯ ದೇಶಗಳಿಗೆ ಕಷ್ಟಕರವಾಗಿದೆ, ಈ ಸಮಸ್ಯೆ ಬ್ರಿಟೀಷರ ಕಾಲದಿಂದಲೂ ಇದೆ. ಗಡಿ ಕುರಿತ ವಿಚಾರದಲ್ಲಿ ಕೆಲವೊಂದು ವ್ಯತ್ಯಾಸಗಳಿರುವುದು ಕಂಡು ಬಂದಿದೆ. ಈ ಹಿಂದೆ ನಡೆದ ವಿಚಾರಗಳು ಇತಿಹಾಸಕ್ಕೆ ಬಿಟ್ಟದ್ದು, ಹಿಂದೆ ನಡೆದ ಇತಿಹಾಸವನ್ನು ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರ ನಿಂದಿಸಬಾರದು. ಇದೀಗ ಇರುವ ಸಮಸ್ಯೆಗಳ ಕುರಿತಂತೆ ಇತ್ಯರ್ಥ ಮಾಡಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಹಾಗಾಗಿ ಸಮಸ್ಯೆ ಕುರಿತಂತೆ ಸೂಕ್ತ ರೀತಿಯ ಒಪ್ಪಂದಕ್ಕೆ ಉಭಯ ದೇಶಗಳು ಬರಬೇಕಿದೆ. ಆದರೆ, ಈ ಒಪ್ಪಂದವು ದ್ವಿಪಕ್ಷೀಯ ಒಪ್ಪಂದಗಳ ಮೇಲೆ ಯಾವುದೇ ಕಾರಣಕ್ಕೂ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಉಭಯ ದೇಶಗಳು ಗಡಿ ವಿಚಾರದಲ್ಲಿ ಯಾವುದೇ ನಿರ್ಧಾರ ಕೈ ಗೊಂಡರು ಅದು ಕಾರ್ಯಾತ್ಮಕವಾಗಿರಬೇಕು. ಮಾತುಕತೆ ಪ್ರಕ್ರಿಯೆ ಇತರರಿಗೆ ಶಂಕೆ ಮೂಡಿಸುವಂತಿರಬಾರದು. ಗಡಿ ವಿಚಾರದಲ್ಲಿ ಮುಂದೆ ಅಡಚಣೆ ಉಂಟಾಗುವಂತಹ ಪರಿಸ್ಥಿತಿ ಎದುರಾಗಬಾರದು, ಈ ವಿಚಾರದಲ್ಲಿ ಉಭಯ ದೇಶಗಳು ತುಂಬಾ ಜಾಗ್ರತೆ ವಹಿಸಬೇಕಾಗಿದ್ದು, ಕರಾರು ಮಾಡಿಕೊಳ್ಳುವುದು ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಸದಾ ಗಡಿ ಮತ್ತು ಅರುಣಾಚಲ ಪ್ರದೇಶ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಚೀನಾ, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಚೀನಾ ಭೇಟಿ ಬಳಿಕ ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಈ ರೀತಿಯ ಹೇಳಿಕೆ ನೀಡಿರುವುದು ಇದೀಗ ಉಭಯ ದೇಶಗಳ ದ್ವಿಪಕ್ಷಿಯ ಬಾಂಧವ್ಯಕ್ಕೆ ಹೊಸ ಆಯಾಮ ನೀಡಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


