ನಿಮಗೆ ಜನರ ನಿರೀಕ್ಷೆ ಅರ್ಥ ಆಗಿಯೇ ಇಲ್ಲ
'ಅಪ್ಪನ ಕಾಲದ ಆಲದ ಮರಕ್ಕೆ ಜೋತು ಬಿದ್ದಿರುವ' ಕಾಂಗ್ರೆಸ್ ಮುಖಂಡರ ಮನಸ್ಥಿತಿಯನ್ನು ಪಕ್ಷದ...

ನವದೆಹಲಿ: 'ಅಪ್ಪನ ಕಾಲದ ಆಲದ ಮರಕ್ಕೆ ಜೋತು ಬಿದ್ದಿರುವ' ಕಾಂಗ್ರೆಸ್ ಮುಖಂಡರ ಮನಸ್ಥಿತಿಯನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ಅವರೇ ತರಾಟೆಗೆ ತೆಗೆದುಕೊಂಡಿದ್ದಾರೆ. ಜನಸಮೂಹದ ನಿರೀಕ್ಷೆಗಳನ್ನು ಅರಿತುಕೊಳ್ಳುವಲ್ಲಿ ವಿಫಲವಾಗಿರುವುದೇ ಕಾಂಗ್ರೆಸ್ ನಾಯಕರ ನೈಡ ಸಮಸ್ಯೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಬೇಡಿಕೆಯಂತೆ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೇಕೇ ಹಾಗೂ ಈ ಹಿಂದೆ ಪಾಲಿಸಿಕೊಂಡು ಬಂದಂತೆ 'ಒಮ್ಮತದ ವ್ಯವಸ್ಥೆ' ಸಾಕೇ ಎನ್ನುವ ಕುರಿತು ಕಾಂಗ್ರೆಸ್‌ನೊಳಗೆ ಚರ್ಚೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಪ್ರಿಯಾಂಕಾ ಈ ರೀತಿಯ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ.
ಪ್ರಿಯಾಂಕಾ ಹೇಳಿದ್ದೇನು
ಪಕ್ಷದ ಮುಖಂಡರು ಜನ ನಮ್ಮಿಂದ ಏನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಜನರ ಅಗತ್ಯಗಳೇ ಅರ್ಥವಾಗದಿದ್ದರೆ ನಾವೇನು ಮಾಡಲು ಸಾಧ್ಯ? ಜನರ ಜತೆಗೆ ಬೆರೆಯುವ ಮತ್ತು ಅವರ ಸಂಕಷ್ಟಗಳಲ್ಲಿ ಜತೆಯಾಗುವ ಕಾಲ ಈಗ ಬಂದಿದೆ. ನನ್ನಲ್ಲಿ ಏನಾದರೂ ಕೊರತೆ ಇದ್ದರೆ ಅದನ್ನು ನನಗೆ ತಿಳಿಸಿ. ಅದೇ ರೀತಿ, ಪಕ್ಷ ಕೂಡ ತನ್ನ ಕೊರತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ ಪ್ರಿಯಾಂಕಾ.
ಲೋಕಸಭಾ ಚುನಾವಣೆ ಸೋಲಿನ ಬಳಿಕ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಕ್ಷೇತ್ರವಾದ ರಾಯ್ ಬರೇಲಿಗೆ ಭೇಟಿ ನೀಡಿದ್ದ ಅವರು ಕಾಂಗ್ರೆಸ್ ಮುಖಂಡರನ್ನುದ್ದೇಶಿಸಿ ಶನಿವಾರ ಈ ವಿಚಾರ ತಿಳಿಸಿದ್ದಾರೆ.
ಶುಕ್ರವಾರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಅವರು, ಪಕ್ಷ ಅಧಿಕಾರದಲ್ಲಿಲ್ಲ ಎಂದ ಮಾತ್ರಕ್ಕೆ ನಾವೆಲ್ಲ ಸುಮ್ಮನೆ ಕೂರುವುದು ಬೇಡ. ಈ ಸಮಯವನ್ನು ನಾವು ಸದಪಯೋಗಪಡಿಸಿಕೊಳ್ಳಬೇಕು. ಜನರಿಗೆ ಹತ್ತಿರವಾಗಬೇಕು.
ಇದಕ್ಕಾಗಿ ನಾವು ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ದೌರ್ಬಲ್ಯವನ್ನು ತಿಳಿ ಹೇಳಬೇಕು. ಅದರಂತೆ ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಈ ವಿಚಾರದ ಕುರಿತು ಚರ್ಚೆ ನಡೆಸಬೇಕು ಎಂದು ಪ್ರಿಯಾಂಕಾ ಸಲಹೆ ನೀಡದ್ದರು.
ಜತೆಗೆ, ಸರ್ಕಾರ ಜಾರಿಗೊಳಿಸಲುದ್ದೇಶಿಸುವ ಹೊಸ ಭೂಸ್ವಾಧೀನ ಕಾನೂನು ಕುರಿತು ಪ್ರಿಯಾಂಕಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕಾನೂನು ರೈತರ ಪರವಾಗಿಲ್ಲ. ಇದರ ಪ್ರಕಾರ, ಸರ್ಕಾರವು ರೈತರ ಅನುಮತಿ ಇಲ್ಲದೆ ಭೂಮಿ ವಶಪಡಿಸಿಕೊಳ್ಳಬಹುದಾಗಿದೆ ಎಂದು ಆರೋಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


