ಪ್ಯಾರಿಸ್ ದಾಳಿ: ಮೂವರು ಶಂಕಿತ ಉಗ್ರರ ಹತ್ಯೆ
ಚಾರ್ಲಿ ಹೆಬ್ಡೋ ಪತ್ರಿಕೆಯ ಮೇಲೆ ದಾಳಿ ನಡೆಸಿದ್ದ ಉಗ್ರರು ಮತ್ತು ಮಾಲ್ ಮೇಲೆ ದಾಳಿ ನಡೆಸಿದ್ದ ಓರ್ವ ಉಗ್ರ ಸೇರಿದಂತೆ ಒಟ್ಟು ಮೂವರು ಶಂಕಿತ..

ಪ್ಯಾರಿಸ್: ಚಾರ್ಲಿ ಹೆಬ್ಡೋ ಪತ್ರಿಕೆಯ ಮೇಲೆ ದಾಳಿ ನಡೆಸಿದ್ದ ಇಬ್ಬರು ಉಗ್ರರು ಮತ್ತು ಮಾಲ್ ಮೇಲೆ ದಾಳಿ ನಡೆಸಿದ್ದ ಓರ್ವ ಉಗ್ರ ಸೇರಿದಂತೆ ಒಟ್ಟು ಮೂವರು ಶಂಕಿತ ಉಗ್ರರನ್ನು ಕೊಂದು ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
'ಚಾರ್ಲಿ ಹೆಬ್ಡೋ' ಪತ್ರಿಕೆ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದ ಕೌವಾಚಿ ಉಗ್ರ ಸಹೋದರರನ್ನು ಪ್ಯಾರಿಸ್ ಹೊರವಲಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಫ್ರಾನ್ಸ್ ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಹೇಳಲಾಗುತ್ತಿದೆ. ನಿನ್ನೆ ಪ್ಯಾರಿಸ್‌ನ ಹೊರವಲಯದ ಗೋದಾಮಿನಲ್ಲಿ ಅವಿತುಕುಳಿತಿದ್ದ ಇಬ್ಬರು ಉಗ್ರರನ್ನು ಸುತ್ತುವರೆದ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು. ರಾತ್ರಿಯಿಡೀ ನಡೆದ ಕಾರ್ಯಾಚರಣೆಯಲ್ಲಿ ಶಂಕಿತ ಉಗ್ರರು ಭದ್ರತಾ ಪಡೆಗಳಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದರು. ಈ ವೇಳೆ ಅವರನ್ನು ಬೆನ್ನಟ್ಟಿದ ಭಧ್ರತಾ ಪಡೆಗಳು ಪ್ಯಾರಿಸ್‌ನ ಹೊರವಲಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿವೆ ಎಂದು ಮೂಲಗಳು ತಿಳಿಸಿವೆ.
ಮಾಲ್ ಮೇಲೆ ದಾಳಿ ಉಗ್ರ ಸೇರಿ ನಾಲ್ಕು ಮಂದಿಯ ಸಾವು
ಇದೇ ವೇಳೆ ಕೌವಾಚಿ ಉಗ್ರ ಸಹೋದರರನ್ನು ಬೆಂಬಲಿಸಿ ಮಾಲ್ ಮೇಲೆ ದಾಳಿ ನಡೆಸಿದ್ದ ಶಂಕಿತ ಉಗ್ರನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಈತ ಕೌವಾಚಿ ಉಗ್ರರರ ವಿರುದ್ಧದ ಕಾರ್ಯಾಚರಣೆಯನ್ನು ನಿಲ್ಲಿಸದಿದ್ದರೆ ಮಾಲ್‌ನಲ್ಲಿರುವ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಉಗ್ರನ ವಿರುದ್ಧದ ಕಾರ್ಯಾಚರಣೆಯಲ್ಲಿ ನಾಲ್ಕು ಮಂದಿ ಹತರಾಗಿದ್ದು, ಉಳಿದ ಎಲ್ಲ ನಾಗರಿಕರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲಾಗಿದೆ ಎಂದು ಫ್ರಾನ್ಸ್ ಭದ್ರತಾ ಮೂಲಗಳು ತಿಳಿಸಿವೆ. ಆ ಮೂಲಕ ಪ್ಯಾರಿಸ್ ಮೇಲೆ ಯುದ್ಧ ಸಾರಿದ್ದ ಎಲ್ಲ ಉಗ್ರರನ್ನು ಹೊಡೆದುರುಳಿಸಲಾಗಿದೆ.
ಮಾಲ್ ಮೇಲೆ ದಾಳಿ ನಡೆಸಿದ್ದು ಇಬ್ಬರು ಉಗ್ರರು?
ಇನ್ನು ಮಾಲ್ ಮೇಲೆ ದಾಳಿ ನಡೆಸಿದ್ದು ಎಷ್ಟು ಮಂದಿ ಉಗ್ರರು ಎಂಬುದರ ಕುರಿತು ಅನುಮಾನ ಮೂಡುತ್ತಿದ್ದು, ಪ್ರಸ್ತುತ ಓರ್ವ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಮತ್ತೊಬ್ಬ ಉಗ್ರ ದಾಳಿಯಲ್ಲಿ ಪಾಲ್ಗೊಂಡಿರಬಹುದು ಎಂಬ ಶಂಕೆಯ ಮೇರೆಗೆ ಮಾಲ್‌ನಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಲೂ ಪ್ಯಾರಿಸ್‌ನಲ್ಲಿ 'ಹೈ ಅಲರ್ಟ್' ಜಾರಿಯಲ್ಲಿದ್ದು, ನಗರದಾದ್ಯಂತ ಸಾವಿರಾರು ಸೈನಿಕರು ಗಸ್ತು ತಿರುಗುತ್ತಿದ್ದಾರೆ.
ಸದ್ಯಕ್ಕೆ ಶಾಂತವಾಗಲ್ಲ ಪ್ಯಾರಿಸ್
ಪ್ರಸ್ತುತ ದೊರೆತಿರುವ ವರದಿಗಳ ಪ್ರಕಾರ ಪ್ಯಾರಿಸ್‌ನಲ್ಲಿ ಹಿಂಸಾಚಾರ ನಡೆಸಿದ್ದ ಮೂವರು ಉಗ್ರರನ್ನು ಭದ್ರತಾ ಪಡೆಗಳೇನೋ ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ. ಆದರೆ ಭವಿಷ್ಯದಲ್ಲಿ ಮತ್ತಷ್ಟು ವಿಧ್ವಂಸಕ ದಾಳಿಗಳು ನಡೆಯುವ ಕುರಿತು ಆತಂಕ ವ್ಯಕ್ತವಾಗುತ್ತಿದೆ. ಬುಧವಾರ ನಡೆದ 'ಚಾರ್ಲಿ ಹೆಬ್ಡೋ' ಪತ್ರಿಕೆ ಮೇಲಿನ ದಾಳಿ ಜವಾಬ್ದಾರಿಯನ್ನು ಅಲ್ ಖೈದಾ ಉಗ್ರ ಸಂಘಟನೆಯ ಯೆಮೆನ್ ಶಾಖೆ ವಹಿಸಿಕೊಂಡಿದ್ದು, ಪ್ರವಾದಿ ಮಹಮದ್ ವಿರುದ್ಧ ಟೀಕೆ ಮಾಡುವವರನ್ನು ಖಂಡಿತ ತಾನು ಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಿದೆ.
ಗುಪ್ತಚರ ಮೂಲಗಳ ಮಾಹಿತಿಯ ಪ್ರಕಾರ ಪ್ಯಾರಿಸ್ ಮೇಲೆ ಯುದ್ಧ ಸಾರಿದ್ದ ಮೂವರು ಉಗ್ರರು ಪರಸ್ಪರ ಪರಿಚಿತರಾಗಿದ್ದಾರೆ. ಈ ಮೂವರಷ್ಟೇ ಅಲ್ಲದೆ ನಗರಕ್ಕೆ ಹೆಚ್ಚು ಮಂದಿ ಉಗ್ರರು ಆಗಮಿಸಿರುವ ಕುರಿತು ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಹೀಗಾಗಿ ಪ್ಯಾರಿಸ್‌ನಲ್ಲಿ ಮತ್ತಷ್ಟು ಉಗ್ರ ದಾಳಿಗಳು ನಡೆಯುವ ಕುರಿತು ಭೀತಿ ಆವರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


