ಜಾತಿವಾರು ಜನಗಣತಿ ಏ.11 ರಿಂದ
ರಾಜ್ಯದಲ್ಲಿ ಜಾತಿವಾರು ಜನಗಣತಿ ಏ.11 ರಿಂದ ಏ.30ರವರೆಗೆ ನಡೆಯಲಿದೆ...

ಬೆಂಗಳೂರು: ರಾಜ್ಯದಲ್ಲಿ ಜಾತಿವಾರು ಜನಗಣತಿ ಏ.11 ರಿಂದ ಏ.30ರವರೆಗೆ ನಡೆಯಲಿದೆ. ನಂತರ ಎರಡು ತಿಂಗಳಲ್ಲಿ ವರದಿ ಸಿದ್ಧವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಸೋಮವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗಸೂಚಿ ಸಭೆಯ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
1931ರಲ್ಲಿ ಜಾತಿವಾರು ಜನಗಣತಿ ನಡೆದಿತ್ತು. ಅದರ ಆಧಾರದಲ್ಲೇ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಹೀಗಾಗಿ ಈ ಗಣತಿಯನ್ನು ನಡೆಸಲಾಗುತ್ತಿದೆ. ಸುಮಾರು 1.76 ಲಕ್ಷ ಗಣತಿದಾರರು ಕೆಲಸ ನಿರ್ವಹಿಸಲಿದ್ದಾರೆ. ಶಿಕ್ಷಕರೂ ಈ ಗಣತಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಕೈಗೊಳ್ಳಲಿರುವ ಈ ಜಾತಿ ಗಣತಿಗೆ 175 ಕೋಟಿ ವೆಚ್ಚವಾಗಲಿದೆ. ಪ್ರಸಕ್ತ ಸಾಲಿನ ಪೂರಕ ಆಯವ್ಯಯದಲ್ಲಿ 84 ಕೋಟಿ ಮೀಸಲಿರಿಸಲು ಉದ್ದೇಶಿಸಲಾಗಿದೆ. ಅಲ್ಲದೆ, 2015-16ನೇ ಸಾಲಿನ ಆಯವ್ಯಯದಲ್ಲಿ 58ಕೋಟಿ ಒದಗಿಸಲು ಯೋಜಿಸಲಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್. ಆಂಜನೇಯ ತಿಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಒಳಗೊಂಡಂತೆ ರಾಜ್ಯದ ಎಲ್ಲೆಡೆ ಸಮೀಕ್ಷಾ ಕಾರ್ಯಕ್ಕೆ 1,26,928 ಗಣತಿ ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಸಮೀಕ್ಷೆಯಲ್ಲಿ 2,588 ಮಾಸ್ಟರ್ ಟ್ರೈನರ್‌ಗಳು, 22,190 ಮೇಲ್ವಿಚಾರಕರು, 1,33,140 ಗಣತಿದಾರರು ಒಳಗೊಂಡಂತೆ 1,75,288 ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಜನವರಿ ಎರಡನೇ ವಾರ ಸಮೀಕ್ಷೆ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರ ಹಾಗೂ ಅಭಿಶಿಕ್ಷಣ ತರಬೇತಿ ನಡೆಯಲಿದೆ. ನಂತರ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ಫೆಬ್ರವರಿ ಮೊದಲನೇ ವಾರದಲ್ಲಿ ಮೇಲ್ವಿಚಾರಕರು ಹಾಗೂ ಗಣತಿದಾರರಿಗೆ ತರಬೇತಿ ನೀಡಲಾಗುವುದು. ಫೆಬ್ರವರಿ ಎರಡನೇ ವಾರದಲ್ಲಿ ಗಣತಿ ಬ್ಲಾಕ್‌ಗೆ ಭೇಟಿ ನೀಡಿ, ಬ್ಲಾಕ್‌ನ ಗಡಿ ಗುರುತಿಸಿ, ಮನೆ ಮನೆ ಪಟ್ಟಿ ಸಿದ್ಧ ಪಡಿಸಿ ಪ್ರಾಯೋಗಿಕವಾಗಿ ಕುಟುಂಬಗಳ ಅಣಕು ಸಮೀಕ್ಷಾ ಕಾರ್ಯ ಪ್ರಾರಂಭವಾಗಲಿದೆ.
ಏಪ್ರಿಲ್ 11 ರಿಂದ ಮನೆ ಮನೆ ಸಮೀಕ್ಷೆ ಪ್ರಾರಂಭವಾಗಲಿದೆ. ಪ್ರತಿ ಮನೆಗೂ ಭೇಟಿ ನೀಡುವ ಗಣತಿದಾರರು ಕುಟುಂಬದ ಎಲ್ಲ ಸದಸ್ಯರಿಗೆ ಸಂಬಂಧಿಸಿದಂತೆ 55 ಅಂಶಗಳುಳ್ಳ ಪ್ರಶ್ನಾವಳಿಗೆ ಮಾಹಿತಿ ಪಡೆಯುತ್ತಾರೆ. ಒಂದು ಮನೆಯ ಮಾಹಿತಿ ಸಂಗ್ರಹಿಸಲು 45 ನಿಮಿಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಈ ಸಮೀಕ್ಷೆಯು ಮುಂದಿನ ದಿನಗಳಲ್ಲಿ ಯೋಜನೆಗಳನ್ನು ರೂಪಿಸಲು ದಿಕ್ಸೂಜಿಯಾಗಲಿದೆ. ಸಮೀಕ್ಷೆಗೆ ಶಿಕ್ಷಕರ ಸೇವೆ ಬಳಸಲು ಇದ್ದ ಕಾನೂನು ತೊಡಕು ನಿವಾರಿಸಲಾಗಿದೆ. ರಜಾ ಅವಧಿಯಲ್ಲಿ ನಡೆಯುವುದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿ ಆಗುವುದಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


