ಮುಕುಲ್ ರೆಕ್ಕೆ ಕತ್ತರಿಸಿದ ಮಮತಾ
ತೃಣಮೂಲ ಕಾಂಗ್ರೆಸ್ ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಮುಕುಲ್ ರಾಯ ಅವರು ಬಿಜೆಪಿಯತ್ತ ಒಲವು ತೋರುತ್ತಿರುವ ಸಂದೇಹ ಬಲವಾಗುತ್ತಿದ್ದಂತೆ...

ಕೋಲ್ಕತಾ: ತೃಣಮೂಲ ಕಾಂಗ್ರೆಸ್ ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಮುಕುಲ್ ರಾಯ ಅವರು ಬಿಜೆಪಿಯತ್ತ ಒಲವು ತೋರುತ್ತಿರುವ ಸಂದೇಹ ಬಲವಾಗುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ಮುಕುಲ್‍ರ ರೆಕ್ಕೆಗೆ ಕತ್ತರಿ ಹಾಕಿದ್ದಾರೆ.
ಶನಿವಾರ ಮಮತಾ ಅವರು ಪಕ್ಷದೊಳಗಿನ ಹುದ್ದೆಗಳಲ್ಲಿ ಭಾರಿ ಬದಲಾವಣೆ ಮಾಡಿದ್ದು, ಕೇಂದ್ರದ ಮಾಜಿ ಸಚಿವ ದಿನೇಶ್ ತ್ರಿವೇದಿ ಅವರನ್ನು ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೇರಿಸಿದ್ದಾರೆ.
ಲೋಕಸಭಾ ಸಂಸದ ಸುಬ್ರತಾ ಬಕ್ಷಿ ಅವರಿಗೆ ಅಖಿಲ ಭಾರತ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದಾರೆ. ಈ ಮೂಲಕ ಮಮತಾ ಅವರು ತಮ್ಮ ಆಪ್ತ ಮುಕುಲ್ ಅವರ ಕಣ್ಣು ಕೆಂಪಗಾಗಿಸಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ನಡೆಸಲು ಮಮತಾ ಅವರು ಶನಿವಾರ ತಮ್ಮ ನಿವಾಸದಲ್ಲಿ ರಹಸ್ಯ ಸಭೆ ಕರೆದಿದ್ದರು. ಆದರೆ ಮುಕುಲ್ ಈ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಇದರಿಂದ ತೀವ್ರ ಅಸಮಾಧಾನಕ್ಕೊಳಗಾದ ಮಮತಾ, ಪಕ್ಷದೊಳಗೆ ಪುನಾರಚನೆ ಮಾಡಿದ್ದಾರೆ.
ಮಮತಾ ಹಾಗೂ ರಾಯ್ ನಡುವೆ ಮನಸ್ತಾಪ ಮೂಡಿರುವ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲು ಮಮತಾ ನಿರಾಕರಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಯ್, ಪಕ್ಷದೊಳಗೆ ಯಾವುದೇ ಬಿರುಕು ಮೂಡಿಲ್ಲ ಎಂದಿದ್ದಾರೆ. ಕಳೆದ ತಿಂಗಳಷ್ಟೇ ದಿನೇಶ್ ತ್ರಿವೇದಿ ಅವರು ಪ್ರಧಾನಿ ಮೋದಿ ಸಹೋದರ ಸೋಮಭಾಯಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರಲ್ಲದೆ, ಮೋದಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ತದನಂತರ ಅವರು ಬಿಜೆಪಿ ಸೇರುತ್ತಾರೆಂಬ ವರದಿಯೂ ಬಂದಿತ್ತು. ಆದರೆ ಈಗ ಮಮತಾ ಅವರು ತ್ರಿವೇದಿಗೆ ಪಕ್ಷದ ಉಪಾಧ್ಯಕ್ಷ ಸ್ಥಾನ ನೀಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


