ವಿನಾ ಕಾರಣ ವೃದ್ಧ ದಂಪತಿಗೆ ಥಳಿಸಿದ ವ್ಯಕ್ತಿ, ಸಿಸಿಟಿವಿಯಲ್ಲಿ ಅಮಾನವೀಯ ದೃಶ್ಯ ಸೆರೆ
ದುಷ್ಕರ್ಮಿಯೊಬ್ಬ ವಿನಾಕಾರಣ ವೃದ್ಧ ದಂಪತಿಗಳನ್ನು ಥಳಿಸಿರುವ ಘಟನೆ ಚಂಡೀಘಡದ ಸೆಕ್ಟರ್ 18 ಪ್ರದೇಶದಲ್ಲಿ ಸಂಭವಿಸಿದೆ...

ಚಂಡೀಘಡ: ದುಷ್ಕರ್ಮಿಯೊಬ್ಬ ವಿನಾಕಾರಣ ವೃದ್ಧ ದಂಪತಿಗಳನ್ನು ಥಳಿಸಿರುವ ಘಟನೆ ಚಂಡೀಘಡದ ಸೆಕ್ಟರ್ 18 ಪ್ರದೇಶದಲ್ಲಿ ಸಂಭವಿಸಿದೆ.
ಸುಮಾರು 30 ವರ್ಷದ ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಅಂಗಡಿಯಲ್ಲಿ ಕುಳಿತಿದ್ದ ಸುಮಾರು 60 ವರ್ಷದ ವೃದ್ಧ ದಂಪತಿಗಳನ್ನು ಹೊರಗೆಳೆದು ಅಮಾನವೀಯವಾಗಿ ಥಳಿಸಿದ್ದು, ಥಳಿತದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂಲಗಳ ಪ್ರಕಾರ ಹಲ್ಲೆ ನಡೆಸಿದ ವ್ಯಕ್ತಿ ಮೊಬೈಲ್ ವಿಚಾರವಾಗಿ ವೃದ್ಧದಂಪತಿಯ ಮಗನನ್ನು ನೋಡಲು ಬಂದಿದ್ದು, ಈ ಸಮಯದಲ್ಲಿ ಆತ ಅಂಗಡಿಯಲ್ಲಿ ಇರಲಿಲ್ಲ. ಬದಲಿಗೆ ಆತನ ವೃದ್ಧ ಪೋಷಕರು ಇದ್ದರು.
ಅವರಲ್ಲಿ ವಿಚಾರಿಸಿದ ಆತ ವೃದ್ಧದಂಪತಿಗಳ ಮಗ ಇಲ್ಲದಿರುವ ವಿಚಾರ ಕೇಳಿ ಕೋಪಗೊಂಡಿದ್ದಾನೆ. ಅಲ್ಲದೆ ಈ ವೇಳೆ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ನೋಡ-ನೋಡುತ್ತಿದ್ದಂತೆಯೇ ವೃದ್ಧ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. ಅದನ್ನು ತಡೆಯಲು ಬಂದ ಆಕೆಯ ಪತಿಯ ಮೇಲೂ ತೀವ್ರ ಹಲ್ಲೆ ನಡೆಸಿ ಹೀನಾ-ಮಾನವಾಗಿ ಬೈಯ್ದು ಹಲ್ಲೆ ನಡೆಸಿದ್ದಾನೆ. ಇವಿಷ್ಟೂ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ವೈರಲ್ ಆಗಿದೆ.
ಹಲ್ಲೆಗೊಳಗಾದ ವೃದ್ಧ ದಂಪತಿಗಳು ತೀವ್ರವಾಗಿ ಗಾಯಗೊಂಡಿದ್ದು, ಹಿರಿಯ ವ್ಯಕ್ತಿಯ ಕೈಗೆ ಮತ್ತು ತಲೆಗೆ ಮತ್ತು ವೃದ್ಧ ಮಹಿಳೆಯ ದವಡೆಗೆ ತೀವ್ರ ಪೆಟ್ಟಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರಿ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ ಚಂಡೀಘಡ ಪೊಲೀಸರು ಪ್ರಸ್ತುತ ವೃದ್ಧ ದಂಪತಿಗಳ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಘಟನಾ ಸಂದರ್ಭದಲ್ಲಿ ಹಲ್ಲೆ ನಡೆಸಿದ ವ್ಯಕ್ತಿ ಪಾನಮತ್ತನಾಗಿದ್ದ ಎಂದು ತಿಳಿದುಬಂದಿದ್ದು, ಆತನ ವಿರುದ್ಧ ಹಲ್ಲೆ ಮತ್ತು ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


