ಆರ್ ಬಿಐ ಗವರ್ನರ್ ಗೆ "ಇಸಿಸ್" ಬೆದರಿಕೆ..!
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ)ದ ಗವರ್ನರ್ ರಘುರಾಮ್ ರಾಜನ್ ಅವರಿಗೆ ಇಸಿಸ್ ಉಗ್ರಸಂಘಟನೆಯ ಹೆಸರಲ್ಲಿ ಬೆದರಿಕೆ...

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ)ದ ಗವರ್ನರ್ ರಘುರಾಮ್ ರಾಜನ್ ಅವರಿಗೆ ಇಸಿಸ್ ಉಗ್ರಸಂಘಟನೆಯ ಹೆಸರಲ್ಲಿ ಬೆದರಿಕೆ ಇ-ಮೇಲ್ ರವಾನೆ ಮಾಡಲಾಗಿದೆ.
ಕಳೆದ 2-3 ದಿನಗಳ ಹಿಂದೆಯೇ ಈ ಬೆದರಿಕೆ ಇ-ಮೇಲ್ ರವಾನೆಯಾಗಿದ್ದು, ಇಂದು ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಅವರಿಗೆ ಇ-ಮೇಲ್ ನಲ್ಲಿ ಬೆದರಿಕೆ ಹಾಕಲಾಗಿದ್ದು, ಕೆಲ ಮಾಧ್ಯಮಗಳಲ್ಲಿ ಪ್ರಸಾರ ಮಾಡಿರುವಂತೆ isis583847@gmail.com ಎಂಬ ಇ-ಮೇಲ್ ನಿಂದ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಮೇಲ್ ನಲ್ಲಿ, "ನಿನ್ನನ್ನು ತೆಗೆಯಲು ಕೆಲವರು ಹಣ ನೀಡಿದ್ದಾರೆ. ಅವರು ನೀಡಿದ್ದಕ್ಕಿಂತ ಹೆಚ್ಚಿನ ಹಣವನ್ನು ನೀನು ನೀಡಿದರೆ ಮುಂದಿನ ವಿಚಾರದ ಕುರಿತು ನಾವು ಚರ್ಚಿಸೋಣ" ("I have been given money by somebody to eliminate you. If you will pay me more than I have been paid, then we can decide on it")ಎಂದು ಬರೆಯಲಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರ ಆರ್ ಬಿಐ ಕಚೇರಿ ಮತ್ತು ರಘುರಾಮ್ ರಾಜನ್ ಅವರ ನಿವಾಸಕ್ಕೆ ಒದಗಿಸಿರುವ ಪೊಲೀಸ್ ಭದ್ರತೆಯನ್ನು ಹೆಚ್ಚಳ ಮಾಡಿದೆ. ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಂಬೈ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಮಾರಿಯ ಅವರು, ಆರ್ ಬಿಐ ಗವರ್ನರ್ ಅವರಿಗೆ ಬೆದರಿಕೆ ಇ-ಮೇಲ್ ಬಂದ ಕುರಿತು ದೂರು ಬಂದಿದೆ. ಇಸಿಸ್ ಹೆಸರಿನಲ್ಲಿ ಇ-ಮೇಲ್ ರವಾನೆಯಾಗಿದ್ದು, ನಮ್ಮ ಉನ್ನತಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಇ-ಮೇಲ್ ಹಿಂದಿನ ದುಷ್ಕರ್ಮಿಗಳಗಳನ್ನು ಕಂಡುಹಿಡಿಯಲು ಅಮೆರಿಕದ ಮೂಲದ ಗೂಗಲ್ ಸಂಸ್ಥೆಯ ನೆರವು ಅತ್ಯಗತ್ಯ. ಹೀಗಾಗಿ ಗೂಗಲ್ ಸಂಸ್ಥೆಯಲ್ಲಿ ಈ ಬಗ್ಗೆ ವಿಚಾರಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿವಿಧ 10 ರಾಷ್ಟ್ರಗಳಿಂದ ಬಳಕೆ ಮಾಡಲ್ಪಟ್ಟ ಐಡಿ..!
ಇನ್ನು ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಅವರಿಗೆ ಬೆದರಿಕೆ ಬಂದಿದೆ ಎನ್ನಲಾಗುತ್ತಿರುವ ಜಿ-ಮೇಲ್ ಐಡಿಯನ್ನು ಕಳೆದ ಕೆಲ ದಿನಗಳಿಂದ ವಿಶ್ವದ ವಿವಿಧ 10 ರಾಷ್ಟ್ರಗಳಿಂದ ಬಳಕೆ ಮಾಡಲಾಗಿತ್ತು ಎಂಬ ವಿಚಾರ ತಿಳಿದುಬಂದಿದೆ. ಆಸ್ಟ್ರೇಲಿಯಾ, ಇಟಲಿ, ಅಮೆರಿಕ, ಕೆನಡಾ, ನೈಜಿರಿಯಾ, ಪೋಲ್ಯಾಂಡ್, ಬೆಲ್ಜಿಯಂ, ಜರ್ಮನಿ, ಹಾಂಗ್ ಕಾಂಗ್ ಮತ್ತು ಉಕ್ರೇನ್ ದೇಶದಲ್ಲಿ ಬಳಕೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಇನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಸೈಬರ್ ಪೊಲೀಸರು ಪ್ರಾಕ್ಸಿ ಇಂಟರ್ ನೆಟ್ ಪ್ರೋಟೋಕಾಲ್ ಮೂಲಕ ಈ ಐಡಿಯನ್ನು ಬಳಕೆ ಮಾಡಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


