ಆರ್‌ಜೆಡಿ -ಜೆಡಿಯು ವಿಲೀನ?
ದಶಕದ ಅತಿದೊಡ್ಡ ರಾಜಕೀಯ ವಿಲೀನಕ್ಕೆ ಬಿಹಾರ ಸಾಕ್ಷಿಯಾಗಲಿದೆಯೆ?. ಒಂದೇ ಪಕ್ಷದಲ್ಲಿದ್ದ ಲಾಲು ಪ್ರಸಾದ್ ಯಾದವ್...

ಪಟನಾ: ದಶಕದ ಅತಿದೊಡ್ಡ ರಾಜಕೀಯ ವಿಲೀನಕ್ಕೆ ಬಿಹಾರ ಸಾಕ್ಷಿಯಾಗಲಿದೆಯೆ?. ಒಂದೇ ಪಕ್ಷದಲ್ಲಿದ್ದ ಲಾಲು ಪ್ರಸಾದ್ ಯಾದವ್, ಶರದ್ ಯಾದವ್ ಮತ್ತು ನಿತೀಶ್ ಕುಮಾರ್ ಒಂದೇ ಪಕ್ಷದ ಬಾವುಟದಲ್ಲಿ ಅಡಿಯಲ್ಲಿ ಬರುವ ದಿನಗಳು ಹತ್ತಿರವಾಗುತ್ತಿವೆಯೇ?
ಹೌದು ಎನ್ನುತ್ತಿವೆ ಬಿಹಾರದಲ್ಲಿ ನಡೆಯುತ್ತಿರುವ ವಿದ್ಯಮಾನಗಳು. ರಾಜ್ಯದಲ್ಲಿ ಬೆಳೆಯುತ್ತಿರುವ ಬಿಜೆಪಿಯನ್ನು ಮಟ್ಟಹಾಕಲು ನಿರ್ಧರಿಸಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಹಾಗೂ ಜೆಡಿಯು ನಾಯಕ ಶರದ್ 2015ರ ವಿಧಾನಸಭೆ ಚುನಾವಣೆ ವೇಳೆಗೆ ತಮ್ಮ ಪಕ್ಷಗಳನ್ನು ಪರಸ್ಪರ ವಿಲೀನಗೊಳಿಸಲು ತೀರ್ಮಾನಿಸಿದ್ದಾರೆ. ಹರ್ಯಾಣ ಮತ್ತು ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ಬಳಿಕ ಲಾಲು, ಯಾದವ್ ಹಾಗೂ ನಿತೀಶ್ ಅವರು ಪಕ್ಷಗಳ ವಿಲೀನಕ್ಕೆ ತಾತ್ವಿಕ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ದೇಶದಲ್ಲಿ ಜನತಾ ಪರಿವಾರ ಮತ್ತೆ ಒಗ್ಗೂಡುವ ಸುಳಿವನ್ನೂ ನೀಡಿದ್ದಾರೆ.
ಲಾಲು ಮತ್ತು ನಿತೀಶ್ ಅವರು ಪರಸ್ಪರ ಕೈಜೋಡಿಸಿ ನಾಲ್ಕು ತಿಂಗಳ ಬಳಿಕ ಹಾಗೂ ಎಸ್ಪಿ, ಜೆಡಿಯು, ಆರ್‌ಜೆಡಿ, ಜೆಡಿಎಸ್ ಸಂಯುಕ್ತ ರಂಗ ರಚಿಸುವುದಾಗಿ ಘೋಷಿಸಿದ 10 ದಿನಗಳ ಬಳಿಕ ಇಂತಹುದೊಂದು ಬೆಳವಣಿಗೆ ನಡೆದಿರುವುದು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸುವ ಸಾಧ್ಯತೆಯಿದೆ.
ಜಾತ್ಯಾತೀತ ಶಕ್ತಿಗಳನ್ನು ಬಲಪಡಿಸುವ ಉದ್ದೇಶದಿಂದ ಈ ರೀತಿ ಪಕ್ಷಗಳ ವಿಲೀನ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜೆಡಿಯು ತಿಳಿಸಿದೆ.
ಕರ್ನಾಟಕದಲ್ಲೂ ಒಂದಾಗುತ್ತಾ?
ಬಿಹಾರದಲ್ಲಿ ಜನತಾದಳ ಹೋಳಾದ ರೀತಿಯಲ್ಲೇ ಕರ್ನಾಟಕದಲ್ಲೂ ಆಗಿತ್ತು. ಇಲ್ಲಿ ಬಿಜೆಪಿ ಬಲ ಪಡೆಯುತ್ತಿದ್ದಂತೆ ಜನತಾಪರಿವಾರವನ್ನು ಮತ್ತೆ ಒಂದುಗೂಡಿಸುವ ಪ್ರಯತ್ನ ಕೂಡ ನಡೆಯಿತು. ಆದರೆ ಇದು ಆರಂಭದಲ್ಲೇ ಅಂತ್ಯವಾಯಿತು. ಈಗಲೂ ಕೂಡ ಜನತಾ ಪರಿವಾರದ ನಾಯಕರನ್ನು ಒಂದುಗೂಡಿಸುವ ಕೆಲಸವನ್ನು ದೇವೇಗೌಡರು ಮಾಡುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಅಲ್ಲದೆ ರಾಷ್ಟ್ರಮಟ್ಟದಲ್ಲಿ ನಿತೀಶ್ ಮತ್ತು ಲಾಲು ಒಂದಾಗುವಲ್ಲಿಯೂ ದೇವೇಗೌಡರ ಪಾತ್ರ ಇದ್ದಿರಲೂಬಹುದು ಎಂಬ ವಿಶ್ಲೇಷಣೆಗಳೂ ನಡೆದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


