ಕಪ್ಪುಹಣ: ಭಾರತಕ್ಕೆ ವಿಶ್ವ ಬಲ
ಕಪ್ಪುಹಣದ ವಿರದ್ಧ ನರೇಂದ್ರ ಮೋದಿ ನಡೆಸುತ್ತಿರುವ ಹೋರಾಟಕ್ಕೆ ಜಿ.20 ರಾಷ್ಟ್ರಗಳ ನಾಯಕರ ಬೆಂಬಲ ದೊರೆಯುವುದರೊಂದಿಗೆ...

ಬ್ರಿಸ್ಬೇನ್: ಕಪ್ಪುಹಣದ ವಿರದ್ಧ ನರೇಂದ್ರ ಮೋದಿ ನಡೆಸುತ್ತಿರುವ ಹೋರಾಟಕ್ಕೆ ಜಿ.20 ರಾಷ್ಟ್ರಗಳ ನಾಯಕರ ಬೆಂಬಲ ದೊರೆಯುವುದರೊಂದಿಗೆ ಮಹತ್ವಪೂರ್ಣ ವಿಜಯವೊಂದನ್ನು ಭಾರತದ ಪ್ರಧಾನಿ ಸಾಧಿಸಿದ್ದಾರೆ.
ಜಿ20 ಶೃಂಗದಲ್ಲಿ ತೆರಿಗೆ ಮಾಹಿತಿ ಬಹಿರಂಗ ಮತ್ತು ಈ ವಿಚಾರದಲ್ಲಿ ಪಾರದರ್ಶಕ ವ್ಯವಸ್ಥೆಯೊಂದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ವಿಶ್ವ ನಾಯಕರಿಂದಲೂ ಬೆಂಬಲ ವ್ಯಕ್ತವಾಗಿದೆ. ಅದರಂತೆ 2017ರೊಳಗೆ ಸದಸ್ಯ ರಾಷ್ಟ್ರಗಳ ನಡುವೆ ತೆರಿಗೆ ಸಂಬಂಧ ಮಾಹಿತಿಯನ್ನು ಸ್ವಯಂಚಾಲಿತವಾಗಿ ವಿನಿಮಯ ಮಾಡಿಕೊಳ್ಳಲು ಅಗತ್ಯ ವ್ಯವಸ್ಥೆ ರೂಪಿಸುವ ನಿರ್ಧಾರಕ್ಕೆ ಜಿ20 ನಾಯಕರು ಬಂದಿದ್ದಾರೆ.
ಏತನ್ಮಧ್ಯೆ, ಬೇಸ್ ಇರೋಷನ್ ಆ್ಯಂಡ್ ಪ್ರಾಫಿಟ್ ಶಿಫ್ಟಿಂಗ್(ಬಿಇಪಿಎಸ್-ತೆರಿಗೆ ವಂಚನೆ ಹಾಗೂ ಅಕ್ರಮ ಲಾಭ ವರ್ಗಾವಣೆ)ಗೆ ಕಡಿವಾಣ ಹಾಕಲು ಕಾರ್ಯ ಯೋಜನೆಯೊಂದನ್ನು ರೂಪಿಸಲೂ ಜಿ20 ರಾಷ್ಟ್ರಗಳು ಒಮ್ಮತ ವ್ಯಕ್ತಪಡಿಸಿವೆ.
ಈ ಕಾರ್ಯಯೋಜನೆಯನ್ನು 2015ರ ವೇಳೆಗೆ ಅಂತಿಮಗೊಳಿಸಲಾಗುವುದು. ಈ ಮೂಲಕ ಕಂಪನಿಗಳು ಸರಿಯಾದ ತೆರಿಗೆ ಪಾವತಿಸುವಂತೆ ನೋಡಿಕೊಳ್ಳಲಾಗುವುದು ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಸಮ್ಮೇಳನದ ನಂತರ ತಿಳಿಸಿದರು. ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪುಹಣವನ್ನು ಮರಳಿ ಸ್ವದೇಶಕ್ಕೆ ತರುವ ಬಗ್ಗೆ ಪ್ರಧಾನಿ ಮನಮುಟ್ಟುವಂತೆ ವಿಶ್ವನಾಯಕರಿಗೆ ವಿವರಿಸಿದರು ಎಂದರು ಪ್ರಭು.
ಒಪ್ಪಂದಕ್ಕೆ ಹರ್ಷ
ಆಹಾರ ಸಂಗ್ರಹಕ್ಕೆ ಸಂಬಂಧಿಸಿ ಭಾರತ ಮತ್ತು ಅಮೆರಿಕದ ನಡುವಿನ ಭಿನ್ನಮತ ಬಗೆಹರಿದಿರುವುದಕ್ಕೆ ಜಿ20 ರಾಷ್ಟ್ರಗಳು ಹರ್ಷ ವ್ಯಕ್ತಪಡಿಸಿವೆ. ಇದರಿಂದ ಹಳಿತಪ್ಪಿದ್ದ ಡಬ್ಲ್ಯುಟಿಒ ಮಾತುಕತೆ ಮತ್ತೆ ಸರಿದಾರಿಗೆ ಮರಳಿದ ಮತ್ತು ಆರ್ಥಿಕ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಅನಿವಾರ್ಯವಾಗಿದ್ದ ವ್ಯಾಪಾರ ಸೌಲಭ್ಯ ಒಪ್ಪಂದ ಅಂತಿಮಗೊಳ್ಳುವುದು ಸಾಧ್ಯವಾಗಲಿದೆ ಎಂದು ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೊಸ ತೆರಿಗೆ ಮಾಹಿತಿ ವ್ಯವಸ್ಥೆ ಹೇಗೆ?
ತೆರಿಗೆ ವಂಚನೆ ತಪ್ಪಿಸಲು ವಿಶ್ವದ ರಾಷ್ಟ್ರಗಳು ಸ್ವಯಂ ಚಾಲಿತ ತೆರಿಗೆ ಮಾಹಿತಿ ವ್ಯವಸ್ಥೆ (ಎಇಒಐ)ಯನ್ನು ಪರಸ್ಪರ ಹಂಚಿಕೊಳ್ಳಲಾಗುತ್ತದೆ.
ಸದ್ಯದ ವ್ಯವಸ್ಥೆಯಲ್ಲಿ ತೆರಿಗೆ ಮಾಹಿತಿ ಕೋರಿಕೆ ಸಲ್ಲಿಸಿದಾಗ ಮಾತ್ರ ಸಿಗುತ್ತದೆ. ಜತೆಗೆ ಆರ್ಥಿಕ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ತನಿಖೆ ಇದ್ದಾಗ ಮಾತ್ರ ವರ್ಗಾವಣೆಯಾಗುತ್ತದೆ. ಹೊಸ ವ್ಯವಸ್ಥೆಯಲ್ಲಿ ಒಪ್ಪಂದದಂತೆ ಪ್ರತಿ ವರ್ಷ ಮಾಹಿತಿ ವಿನಿಮಯ ಮಾಡಬೇಕಾಗುತ್ತದೆ.
ಸರ್ಕಾರಗಳ ನಡುವೆ ವಾರ್ಷಿಕವಾಗಿ ಮಾಹಿತಿ ವರ್ಗಾವಣೆಯಾಗಬೇಕಾದರೆ ಹಣಕಾಸು ಸಂಸ್ಥೆಗಳು ಕಡ್ಡಾಯವಾಗಿ ತಮ್ಮ ಗ್ರಾಹಕರ ಮಾಹಿತಿ ಪಡೆದುಕೊಂಡು ಆಯಾ ರಾಷ್ಟ್ರಗಳ ನಿಯಂತ್ರಕರಿಗೆ ಸಲ್ಲಿಸಬೇಕು.
ಪ್ಯಾರೀಸ್‌ನ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ(ಒಇಸಿಡಿ) ಸಂಸ್ಥೆ ವಿಶ್ವದ ಎಲ್ಲ ದೇಶಗಳಿಗೆ ಅನ್ವಯವಾಗುವಂತೆ ನಿಯಮ ರೂಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


