ದೇಶ

ಐಐಟಿ ವಿದ್ಯಾರ್ಥಿನಿಗೆ 'ಫೇಸ್ಬುಕ್' ಬಂಪರ್ ಆಫರ್

ಮುಂಬೈ ಮೂಲದ ಐಐಟಿ ವಿದ್ಯಾರ್ಥಿನಿಗೆ ಪ್ರಮುಖ ಸಾಮಾಜಿಕ ತಾಣ ಫೇಸ್‌ಬುಕ್ 2 ಕೋಟಿ ಸಂಬಳದ ಉದ್ಯೋಗದ ಆಫರ್ ನೀಡಿದೆ.

ಐಐಟಿ ವಿದ್ಯಾರ್ಥಿನಿಗೆ 'ಫೇಸ್ಬುಕ್' ಬಂಪರ್ ಆಫರ್
ಫೇಸ್‌ಬುಕ್ ಪ್ರಧಾನ ಕಚೇರಿಯಿಂದ ಉದ್ಯೋಗದ ಆಫರ್ ಪಡೆದಿರುವ ವಿದ್ಯಾರ್ಥಿನಿ ಆಸ್ಥಾ ಅಗರ್ವಾಲ್
Published On :

ಮುಂಬೈ: ಮುಂಬೈ ಮೂಲದ ಐಐಟಿ ವಿದ್ಯಾರ್ಥಿನಿಗೆ ಪ್ರಮುಖ ಸಾಮಾಜಿಕ ತಾಣ ಫೇಸ್‌ಬುಕ್ 2 ಕೋಟಿ ಸಂಬಳದ ಉದ್ಯೋಗದ ಆಫರ್ ನೀಡಿದೆ.

ಮುಂಬೈನಲ್ಲಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ನಾಲ್ಕನೇ ವರ್ಷದ ವಿದ್ಯಾರ್ಥಿನಿಯಾಗಿರುವ ಆಸ್ಥಾ ಅಗರ್ವಾಲ್ ಎಂಬ 20 ವರ್ಷದ ಯುವತಿಗೆ ಫೇಸ್‌ಬುಕ್ 2 ಕೋಟಿ ಭತ್ಯೆ ಮತ್ತು ಉದ್ಯೋಗದ ಪ್ರಸ್ತಾಪ ಮುಂದಿಟ್ಟಿದೆ. ವಿದ್ಯಾರ್ಥಿನಿ ಆಸ್ಥಾ ಅಗರ್ವಾಲ್ ಅವರು ಪ್ರಸ್ತುತ ನಾಲ್ಕನೇ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ತಮ್ಮ ಮೂರನೇ ವರ್ಷದ ಪದವಿ ವ್ಯಾಸಂಗದ ವೇಳೆ ಅವರು ಕ್ಯಾಲಿಫೋರ್ನಿಯಾದಲ್ಲಿರುವ ಫೇಸ್‌ಬುಕ್ ಪ್ರಧಾನ ಕಚೇರಿಯಲ್ಲಿ 2 ತಿಂಗಳ ತರಬೇತಿ ಪಡೆದುಕೊಂಡಿದ್ದರು.

ಕಳೆದ ಮೇ ಮತ್ತು ಜೂನ್ ತಿಂಗಳಿನಲ್ಲಿ ಆಸ್ಥಾ ಅಗರ್ವಾಲ್ ಅವರು ತರಬೇತಿ ಪಡೆದಿದ್ದು, ಈ ಸಂದರ್ಭದಲ್ಲಿನ ಅವರ ಕಠಿಣ ಪರಿಶ್ರಮವನ್ನು ಗುರುತಿಸಿರುವ ಫೇಸ್‌ಬುಕ್ ಅವರಿಗೆ ಉದ್ಯೋಗದ ಆಫರ್ ನೀಡಿದೆ. ಫೇಸ್‌ಬುಕ್ ಸಂಸ್ಥೆಯ ಆಫರ್ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ಆಸ್ಥಾ ಅಗರ್ವಾಲ್ ತುಂಬಾ ಖುಷಿಗೊಂಡಿದ್ದು, ತಮ್ಮ 8ನೇ ಸೆಮಿಸ್ಟರ್ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಉದ್ಯೋಗಕ್ಕೆ ಸೇರಿಕೊಳ್ಳುವುದಾಗಿ ಹೇಳಿದ್ದಾರೆ.

ಫೇಸ್‌ಬುಕ್ ಆಫರ್ ತಮಗೆ ತುಂಬಾ ಖುಷಿ ನೀಡಿದ್ದು, ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡಲು ತುಂಬಾ ಉತ್ಸುಕಳಾಗಿದ್ದೇನೆ. ಹೀಗಾಗಿ ನನ್ನ 8ನೇ ಸೆಮಿಸ್ಟರ್ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಉದ್ಯೋಗಕ್ಕೆ ಹಾಜರಾಗುತ್ತೇನೆ ಎಂದು ವಿದ್ಯಾರ್ಥಿನಿ ಆಸ್ಥಾ ಅಗರ್ವಾಲ್ ಹೇಳಿದ್ದಾರೆ. ಪ್ರಸ್ತುತ ರಜೆ ಮೇಲೆ ತಮ್ಮ ಹಟ್ಟೂರಾದ ಜೈಪುರದ ನಿವಾಸಕ್ಕೆ ತೆರಳಿರುವ ಆಸ್ಥಾ ಅಗರ್ವಾಲ್ ಅವರು ಅಲ್ಲಿಂದಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ವರ್ಷದ ಅಕ್ಟೋಬರ್‌ನಲ್ಲಿ ಪರೀಕ್ಷೆಗಳು ಪೂರ್ಣಗೊಳ್ಳಲಿದ್ದು, ಅದೇ ತಿಂಗಳಿನಲ್ಲಿ ಉದ್ಯೋಗಕ್ಕೆ ಸೇರುವುದಾಗಿ ಅವರು ಹೇಳಿದ್ದಾರೆ.

ಆಸ್ಥಾ ಅಗರ್ವಾಲ್ ಅವರ ತಂದೆ ಅಶೋಕ್ ಅಗರ್ವಾಲ್ ಅವರು ರಾಜಸ್ತಾನ ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಹಿರಿಯ ಕಾರ್ಯಕಾರಿ ಇಂಜಿನಿಯರ್ ಆಗಿದ್ದು, ಆಸ್ಥಾ ಅವರ ಹಿರಿಯ ಸಹೋದರಿ ಕೂಡ ರಾಸಾಯನಿಕ ಇಂಜಿನಿಯರ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಚಿಕ್ಕವಯಸ್ಸಿನಿಂದಲೂ ಓದಿನಲ್ಲಿ ತುಂಬಾ ಆಸಕ್ತಿ ಹೊಂದಿರುವ ಆಸ್ಥಾ ರಾಷ್ಟ್ರೀಯ ಮಟ್ಟ ಶಾಲಾ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ 7 ರ್ಯಾಂಕ್ ಗಳಿಸಿದ್ದರು. ಅಲ್ಲದೆ ಅಂತಾರಾಷ್ಟ್ರೀಯ ಕಿರಿಯರ ವಿಜ್ಞಾನ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.