ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ; SIR ಪ್ರಕ್ರಿಯೆ ರದ್ದುಪಡಿಸಿ, ಹೊಸದಾಗಿ ಪಟ್ಟಿ ಪರಿಷ್ಕರಿಸಿ: ಸಿಎಂ
ಮತದಾನದ ಹಕ್ಕು ಎಂದರೆ ಬದುಕುವ ಹಕ್ಕು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದ ಮತದಾನದ ಹಕ್ಕಿನ ಪರವಾಗಿ ಬೆಂಗಳೂರಿನಿಂದಲೇ ಧ್ವನಿ ಎತ್ತಿದ್ದಾರೆ.

ಬೆಂಗಳೂರು: ಪ್ರಜಾಪ್ರಭುತ್ವ ಮತ್ತು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣ ರಾಜೀನಾಮೆ ನೀಡಬೇಕು. ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಪಡಿಸಿ, ಹೊಸದಾಗಿ ಮತದಾರರ ಪಟ್ಟಿ ಪರಿಷ್ಕರಿಸಬೇಕು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಆಗ್ರಹಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮತದಾನದ ಹಕ್ಕು ಎಂದರೆ ಬದುಕುವ ಹಕ್ಕು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದ ಮತದಾನದ ಹಕ್ಕಿನ ಪರವಾಗಿ ಬೆಂಗಳೂರಿನಿಂದಲೇ ಧ್ವನಿ ಎತ್ತಿದ್ದಾರೆ.
ಕೇಂದ್ರ ಸರ್ಕಾರ ಹೇಗೆ ಮತಗಳ್ಳತನ ಮಾಡಿ, ಮತದಾರರ ಹಕ್ಕನ್ನು ಕಸಿಯುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ. ಸಾಮಾನ್ಯ ಜನರ ಮತದಾನದ ಹಕ್ಕನ್ನು ರಾಜಕೀಯ ಉದ್ದೇಶಗಳಿಗಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಈ ಅಕ್ರಮ ವ್ಯವಸ್ಥೆ ಮೂಲಕ ಈಗಾಗಲೇ ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರ್ಕಾರವನ್ನು ನುಂಗಿದ್ದಾರೆ. ಈಗ ಕರ್ನಾಟಕ ಸೇರಿದಂತೆ ಎಲ್ಲೆಡೆಯೂ ಇದನ್ನು ಮಾಡಲು ಪ್ರಯತ್ನಿಸಲಾಗುತ್ತಿದೆ.
ಕರ್ನಾಟಕದಲ್ಲೂ 1 ಕೋಟಿಗೂ ಅಧಿಕ ಮತಗಳನ್ನು ತೆಗೆದುಹಾಕಲಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಈ ಪ್ರಕ್ರಿಯೆಗೆ ಸಹಕಾರ ನೀಡಿದ್ದೇನೆ. ಆದರೆ ಈ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಗೆ ಮತ್ತಷ್ಟು ಸಮಯ ನೀಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಬುಧವಾರ ಮನವಿ ಮಾಡಿದ್ದೇನೆ. ಮತದಾರರ ಪಟ್ಟಿ ಅಂತಿಮವಾಗಲಿ, ನಂತರ ಇದರ ವಿರುದ್ಧ ಯಾವ ರೀತಿ ಧ್ವನಿ ಎತ್ತಿ ಹೋರಾಟ ಮಾಡಬೇಕು ಎಂದು ತಿಳಿಸುವೆ ಎಂದು ಹೇಳಿದರು.
ಚುನಾವಣಾ ಆಯೋಗದೊಳಗಿನ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಆಯೋಗದ ಸ್ವಾಯತ್ತ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಬಹುಮತದ (ಮೂರನೇ ಎರಡರಷ್ಟು) ಸದಸ್ಯರ ಬೆಂಬಲ ಸಿಗದೇ ಏಕಪಕ್ಷೀಯವಾಗಿ ಯಾವುದೇ ಘೋಷಣೆ, ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಚುನಾವಣಾ ಆಯೋಗದ ಹೆಸರಿನಲ್ಲಿ ರಾಜ್ಯಗಳ ಅಧಿಕಾರಿಗಳನ್ನು ಬೆದರಿಸಲು ಸಾಧ್ಯವಿಲ್ಲ.
ನೈತಿಕ ಹೊಣೆಗಾರಿಕೆಯನ್ನು ಅರಿತು ಮುಖ್ಯ ಚುನಾವಣಾ ಆಯುಕ್ತ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುವುದು ಉತ್ತಮ. ಹೊಸ ಎಸ್‌ಐಆರ್ ಪ್ರಕ್ರಿಯೆ ನಡೆಸಬೇಕು ಮತ್ತು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.
ನಾವು ಕಾಂಗ್ರೆಸ್ ಮತ ಅಥವಾ ಬಿಜೆಪಿ ಮತದ ಬಗ್ಗೆ ಮಾತನಾಡುತ್ತಿಲ್ಲ. ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದೆ. ಅದು ಬದುಕುವ ಹಕ್ಕಿಗೆ ಸಮಾನ. ಯಾರ ಹಕ್ಕನ್ನೂ ಹತ್ತಿಕ್ಕಲು ಸಾಧ್ಯವಿಲ್ಲ. ನಮ್ಮ ರಾಜ್ಯದಲ್ಲಿ ಈ ವಿಚಾರವಾಗಿ ದೊಡ್ಡಮಟ್ಟದಲ್ಲಿ ಚರ್ಚೆ ಮಾಡಬೇಕು.
ಈಗ ಕರೆಯಲಾಗಿರುವ ವಿಶೇಷ ಅಧಿವೇಶನ ಕೇವಲ ಬರ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಕರೆಯಲಾಗಿದೆ. ಇಂದು ಅಧಿವೇಶನ ಮುಗಿದ ಬಳಿಕ ಪರಿಶೀಲನೆ ಮಾಡುವೆ. ಇದು ಗಂಭೀರ ವಿಷಯವಾಗಿದೆ ಎಂದು ಅವರು ಹೇಳಿದರು.
ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ ಫಾರ್ಮ್ 6, 7 ಮತ್ತು 8 ಸೇರಿದಂತೆ ಅನೇಕ ಅರ್ಜಿಗಳಿದ್ದು, ಈ ಪ್ರಕ್ರಿಯೆ ಪ್ರಜಾಸತಾತ್ಮಕವಾಗಿಲ್ಲ. ಇಲ್ಲಿ ಅನಕ್ಷರಸ್ಥರು ಮತ್ತು ದುರ್ಬಲ ವರ್ಗಗಳ ಜನರ ಧ್ವನಿ ಹತ್ತಿಕ್ಕುವ ಕೆಲಸವಾಗುತ್ತಿದೆ. ಈವರೆಗೂ ಆಗಿರುವ ಪ್ರಕ್ರಿಯೆಯನ್ನು ನಾವು ಖಂಡಿಸುತ್ತೇವೆ. ಇದು ಕೇವಲ ಅಭಿಪ್ರಾಯದ ವಿಚಾರವಲ್ಲ. ಇದು ಮೂಲಭೂತ ಹಕ್ಕಿನ ವಿಚಾರ. ಇದು ಸಾಮಾನ್ಯ ಜನರ ಧ್ವನಿ ಎಂದು ಹೇಳಿದರು.
ಚುನಾವಣಾ ಆಯೋಗದ ಹೆಸರಿನಲ್ಲಿ ವಿವಿಧ ರಾಜ್ಯಗಳ ಅಧಿಕಾರಿಗಳಿಗೆ ಒತ್ತಡ ಅಥವಾ ಬೆದರಿಕೆ ಹಾಕುವುದು ಸರಿಯಲ್ಲ. ಈ ವಿಚಾರವನ್ನು ಸಂಸತ್ತಿನಲ್ಲೂ ಸೇರಿದಂತೆ ದೊಡ್ಡ ಮಟ್ಟದಲ್ಲಿ ಚರ್ಚಿಸಬೇಕಾಗಿದೆ. ಪ್ರತಿಯೊಂದು ಮತಕ್ಕೂ ಅದರ ಹಕ್ಕನ್ನು ಖಚಿತಪಡಿಸುವ ನಿಟ್ಟಿನಲ್ಲಿ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಬೇಕು ಮತ್ತು ಮತದಾರರ ದತ್ತಾಂಶವನ್ನು ಮರುಪರಿಶೀಲಿಸಬೇಕು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




