ರಾಜ್ಯ

ಬೆಂಗಳೂರು ಸೇರಿ ಕರ್ನಾಟಕದ 6 ನಗರಗಳಿಗೆ ಜಾಗತಿಕ ಸ್ಥಾನ: ಆಕ್ಸ್‌ಫರ್ಡ್ ಸೂಚ್ಯಂಕದಲ್ಲಿ ಕಲಬುರಗಿಗೂ ರ‍್ಯಾಂಕ್..!

ಆಕ್ಸ್‌ಫರ್ಡ್ ಎಕನಾಮಿಕ್ಸ್‌ ವಿಶ್ವದ ಪ್ರಮುಖ ಸ್ವತಂತ್ರ ಆರ್ಥಿಕ ಸಲಹಾ ಸಂಸ್ಥೆಯಾಗಿದ್ದು, 200ಕ್ಕೂ ಹೆಚ್ಚು ದೇಶಗಳು, 100 ಕೈಗಾರಿಕಾ ವಲಯಗಳು ಹಾಗೂ 8,000 ನಗರಗಳು ಮತ್ತು ಪ್ರದೇಶಗಳನ್ನು ಒಳಗೊಂಡಂತೆ ಅಧ್ಯಯನ ನಡೆಸುತ್ತದೆ.

ಬೆಂಗಳೂರು ಸೇರಿ ಕರ್ನಾಟಕದ 6 ನಗರಗಳಿಗೆ ಜಾಗತಿಕ ಸ್ಥಾನ: ಆಕ್ಸ್‌ಫರ್ಡ್ ಸೂಚ್ಯಂಕದಲ್ಲಿ ಕಲಬುರಗಿಗೂ ರ‍್ಯಾಂಕ್..!
ಸಂಗ್ರಹ ಚಿತ್ರ
Published On :

ಬೆಂಗಳೂರು: ಪ್ರತಿಷ್ಠಿತ 'ಆಕ್ಸ್‌ಫರ್ಡ್ ಎಕನಾಮಿಕ್ಸ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್' (Oxford Economics Global Cities Index) ಬಿಡುಗಡೆಯಾಗಿದ್ದು, ಜಾಗತಿಕ ಮಟ್ಟದ ಪ್ರಮುಖ 1,000 ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಒಟ್ಟು ಆರು ನಗರಗಳು ಸ್ಥಾನ ಪಡೆದುಕೊಂಡಿವೆ.

ಆರ್ಥಿಕತೆ, ಮಾನವ ಬಂಡವಾಳ, ಜೀವನದ ಗುಣಮಟ್ಟ, ಪರಿಸರ ಮತ್ತು ಆಡಳಿತ ಎಂಬ ಐದು ಪ್ರಮುಖ ಜಾಗತಿಕ ಮಾನದಂಡಗಳ ಅಡಿಯಲ್ಲಿ ಈ ನಗರಗಳನ್ನು ಮೌಲ್ಯಮಾಪನ ಮಾಡಲಾಗಿದೆ.

ಕರ್ನಾಟಕದ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಒಟ್ಟು ಆರು ನಗರಗಳು ಈ ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಆಕ್ಸ್‌ಫರ್ಡ್ ಎಕನಾಮಿಕ್ಸ್‌ ವಿಶ್ವದ ಪ್ರಮುಖ ಸ್ವತಂತ್ರ ಆರ್ಥಿಕ ಸಲಹಾ ಸಂಸ್ಥೆಯಾಗಿದ್ದು, 200ಕ್ಕೂ ಹೆಚ್ಚು ದೇಶಗಳು, 100 ಕೈಗಾರಿಕಾ ವಲಯಗಳು ಹಾಗೂ 8,000 ನಗರಗಳು ಮತ್ತು ಪ್ರದೇಶಗಳನ್ನು ಒಳಗೊಂಡಂತೆ ಅಧ್ಯಯನ ನಡೆಸುತ್ತದೆ. ಸಂಕೀರ್ಣ ಹಾಗೂ ಅನಿಶ್ಚಿತ ಜಾಗತಿಕ ಪರಿಸ್ಥಿತಿಯಲ್ಲಿ ವೇಗವಾಗಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಅಗತ್ಯವಾದ ಮಾಹಿತಿ ಮತ್ತು ಪರಿಹಾರಗಳನ್ನು ಸಂಸ್ಥೆ ಒದಗಿಸುತ್ತದೆ.

ಆಕ್ಸ್‌ಫರ್ಡ್ ಜಾಗತಿಕ ನಗರಗಳ ಸೂಚ್ಯಂಕವನ್ನು ಆಕ್ಸ್‌ಫರ್ಡ್ ಎಕನಾಮಿಕ್ಸ್‌ನ ನಗರಗಳು ಮತ್ತು ಪ್ರದೇಶಗಳ ತಂಡ ಸಿದ್ಧಪಡಿಸುತ್ತದೆ. 40ಕ್ಕೂ ಹೆಚ್ಚು ಅರ್ಥಶಾಸ್ತ್ರಜ್ಞರನ್ನು ಒಳಗೊಂಡಿರುವ ಈ ತಂಡಕ್ಕೆ ನಗರ ಪ್ರದೇಶಗಳ ದತ್ತಾಂಶ, ನಗರಗಳ ಬೆಳವಣಿಗೆ ಹಾಗೂ ಭವಿಷ್ಯದ ಆರ್ಥಿಕ ಅಂದಾಜುಗಳ ಕುರಿತು ವಿಶೇಷ ಪರಿಣತಿ ಇದೆ.

2026ರ ಆಕ್ಸ್‌ಫರ್ಡ್ ಜಾಗತಿಕ ನಗರಗಳ ಸೂಚ್ಯಂಕದಲ್ಲಿ ಭಾರತದ 1,000 ನಗರಗಳ ಪೈಕಿ 100 ನಗರಗಳು ಜಾಗತಿಕ ಮಟ್ಟದಲ್ಲಿ ಸ್ಥಾನ ಪಡೆದಿವೆ. ಇದು ಜಾಗತಿಕ ನಗರ ವ್ಯವಸ್ಥೆಯಲ್ಲಿ ಭಾರತದ ನಗರಗಳ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ. ಭಾರತದ ನಗರಗಳ ಪೈಕಿ ಬೆಂಗಳೂರು 311ನೇ ಜಾಗತಿಕ ಸ್ಥಾನ ಪಡೆದಿದ್ದು, ಮುಂಬೈ 330ನೇ, ಚೆನ್ನೈ 381ನೇ ಹಾಗೂ ಹೈದರಾಬಾದ್ 421ನೇ ಸ್ಥಾನದಲ್ಲಿವೆ.

2026ರ ಆಕ್ಸ್‌ಫರ್ಡ್ ಜಾಗತಿಕ ನಗರಗಳ ಸೂಚ್ಯಂಕದಲ್ಲಿ ವಿಶ್ವದ 1,000 ಪ್ರಮುಖ ನಗರಗಳಿಗೆ ವಿವಿಧ ವಿಭಾಗಗಳ ಆಧಾರದ ಮೇಲೆ ಶ್ರೇಯಾಂಕ ನೀಡಲಾಗಿದೆ. ‘ಸಮೃದ್ಧ ಪರಂಪರೆ, ಬೆಳೆಯುತ್ತಿರುವ ಭವಿಷ್ಯ’ ವಿಭಾಗದಲ್ಲಿ ಕಲಬುರಗಿ 781ನೇ ಜಾಗತಿಕ ಸ್ಥಾನ ಪಡೆದಿದೆ. ‘ಭಾರತದ ನವೋದ್ಯಮ ರಾಜಧಾನಿ’ ವಿಭಾಗದಲ್ಲಿ ಬೆಂಗಳೂರು 311ನೇ ಸ್ಥಾನ, ‘ಜಾಗತಿಕ ಆಕರ್ಷಣೆಯ ಪರಂಪರೆಯ ನಗರ’ ವಿಭಾಗದಲ್ಲಿ ಮೈಸೂರು 628ನೇ ಸ್ಥಾನ ಪಡೆದಿವೆ.

ಬೆಳವಣಿಗೆಗೆ ಚಾಲನೆ ನೀಡುವ ಕರಾವಳಿ ಕೇಂದ್ರ ವಿಭಾಗದಲ್ಲಿ ಮಂಗಳೂರು 665ನೇ ಸ್ಥಾನ, ‘ಅವಕಾಶಗಳ ನಗರ’ ವಿಭಾಗದಲ್ಲಿ ಬೆಳಗಾವಿ 683ನೇ ಸ್ಥಾನ ಹಾಗೂ ‘ಎಂಜಿನಿಯರಿಂಗ್, ಕೈಗಾರಿಕಾ ಮತ್ತು ಶಿಕ್ಷಣ ಕೇಂದ್ರ’ ವಿಭಾಗದಲ್ಲಿ ಹುಬ್ಬಳ್ಳಿ-ಧಾರವಾಡ 707ನೇ ಜಾಗತಿಕ ಸ್ಥಾನ ಪಡೆದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.