ರಾಜ್ಯ

ಪೌರಕಾರ್ಮಿಕರು ‘ನಮಸ್ತೆ’ ಆ್ಯಪ್‌ನಲ್ಲಿ ಕಡ್ಡಾಯ ನೋಂದಣಿ ಆಗಬೇಕು: ಸಫಾಯಿ ಕರ್ಮಚಾರಿಗಳ ಆಯೋಗ ಸೂಚನೆ

ಪೌರಕಾರ್ಮಿಕರ ಕಲ್ಯಾಣ, ಸುರಕ್ಷತೆ, ಆರೋಗ್ಯ, ವಸತಿ, ಶಿಕ್ಷಣ, ಪರಿಹಾರ, ಪಿಂಚಣಿ ಹಾಗೂ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ಗಿಲ್ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಮಹೇಶ್ವರ ರಾವ್ ಸಭೆ ನಡೆಸಿದರು.

ಪೌರಕಾರ್ಮಿಕರು ‘ನಮಸ್ತೆ’ ಆ್ಯಪ್‌ನಲ್ಲಿ ಕಡ್ಡಾಯ ನೋಂದಣಿ ಆಗಬೇಕು: ಸಫಾಯಿ ಕರ್ಮಚಾರಿಗಳ ಆಯೋಗ ಸೂಚನೆ
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಹರ್ದೀಪ್ ಸಿಂಗ್ ಗಿಲ್, ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಮಹೇಶ್ವರ ರಾವ್
Published On :

ಬೆಂಗಳೂರು: ಕೇಂದ್ರ ಸರ್ಕಾರ ಒದಗಿಸುವ ಸುರಕ್ಷತಾ ಕಿಟ್‌ಗಳು ಸೇರಿದಂತೆ ವಿವಿಧ ಕಲ್ಯಾಣ ಮತ್ತು ಸುರಕ್ಷತಾ ಸೌಲಭ್ಯಗಳನ್ನು ಪಡೆಯಲು ನಗರದ ಎಲ್ಲ ಪೌರಕಾರ್ಮಿಕರು ‘ನಮಸ್ತೆ’ (NAMASTE) ಆ್ಯಪ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಹರ್ದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ.

ಪೌರಕಾರ್ಮಿಕರ ಕಲ್ಯಾಣ, ಸುರಕ್ಷತೆ, ಆರೋಗ್ಯ, ವಸತಿ, ಶಿಕ್ಷಣ, ಪರಿಹಾರ, ಪಿಂಚಣಿ ಹಾಗೂ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ಗಿಲ್ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಮಹೇಶ್ವರ ರಾವ್ ಸಭೆ ನಡೆಸಿದರು.

ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಸಂಬಂಧಿತ ಯೋಜನೆಗಳಡಿ ಪೌರಕಾರ್ಮಿಕರನ್ನು ನೋಂದಾಯಿಸುವಂತೆ ಹಾಗೂ ವೈದ್ಯಕೀಯ ವಿಮೆ ಸೇರಿದಂತೆ ಲಭ್ಯವಿರುವ ವಿವಿಧ ಸೌಲಭ್ಯಗಳನ್ನು ಅವರಿಗೆ ತಲುಪಿಸುವಂತೆ ಗಿಲ್ ಅಧಿಕಾರಿಗಳಿಗೆ ಸೂಚಿಸಿದರು.

ಮೊದಲ ಹಂತದಲ್ಲಿ ಅರ್ಹ ಕಾರ್ಮಿಕರ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ನಂತರ ಸಂಬಂಧಿತ ಸೌಲಭ್ಯಗಳು ಶೀಘ್ರವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪೌರಕಾರ್ಮಿಕರ ಸುರಕ್ಷತೆ ಮತ್ತು ಕೆಲಸದ ಪರಿಸ್ಥಿತಿಗಳ ಕುರಿತು ನಗರದಾದ್ಯಂತ ನಿರಂತರ ತಪಾಸಣೆ ಹಾಗೂ ದಾಖಲೀಕರಣ ನಡೆಸಲಾಗುತ್ತಿದೆ. ಕೈಯಿಂದ ಮಲಹೊರುವ ಕೆಲಸಕ್ಕೆ (manual scavenging) ಸಂಬಂಧಿಸಿದ ಸಾವುಗಳು ಹಾಗೂ ಅಪಘಾತಗಳ ಪ್ರಕರಣವಾರು ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು, ನಿಯಮಾನುಸಾರ ಪರಿಹಾರ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಹೇಶ್ವರ ರಾವ್ ತಿಳಿಸಿದರು.

ನಗರದಲ್ಲಿ ಈ ಹಿಂದೆ 35,000ಕ್ಕೂ ಅಧಿಕ ಇದ್ದ ಪೌರಕಾರ್ಮಿಕರ ಸಂಖ್ಯೆ ಇದೀಗ 15,292ಕ್ಕೆ (12,924 ಖಾಯಂ ಪೌರಕಾರ್ಮಿಕರು ಹಾಗೂ 2,368 ದಿನಗೂಲಿ ಕಾರ್ಮಿಕರು) ಇಳಿಕೆಯಾಗಿರುವುದರಿಂದ ಕೆಲಸದ ಹೊರೆ ಹೆಚ್ಚಾಗಿದೆ ಎಂಬ ಆತಂಕವನ್ನು ಪೌರಕಾರ್ಮಿಕರ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ವ್ಯಕ್ತಪಡಿಸಿದರು. ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಅಗತ್ಯವಿರುವ ಪೌರಕಾರ್ಮಿಕರ ಸಂಖ್ಯೆಯನ್ನು ಮರುಪರಿಶೀಲಿಸಿ, ಅಗತ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಅವರು ಮನವಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.